ಕರಾವಳಿಯಲ್ಲಿ ತಾಪಮಾನ ಏರುಗತಿ, ‘ಉಷ್ಣ ಅಲೆ’ ಭೀತಿ!

| Published : Mar 31 2024, 02:00 AM IST

ಕರಾವಳಿಯಲ್ಲಿ ತಾಪಮಾನ ಏರುಗತಿ, ‘ಉಷ್ಣ ಅಲೆ’ ಭೀತಿ!
Share this Article
  • FB
  • TW
  • Linkdin
  • Email

ಸಾರಾಂಶ

ಸಂಜೆಯಾದರೂ ತಾಪಮಾನ ಇಳಿಕೆಯ ಅನುಭವ ಉಂಟಾಗುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಇಲ್ಲಿಯೂ ‘ಉಷ್ಣ ಅಲೆ’ಯ ಎದುರಿಸಬೇಕಾಗಿ ಬಂದರೂ ಅಚ್ಚರಿ ಇಲ್ಲ.

ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿಕರಾವಳಿ ಜಿಲ್ಲೆಯಲ್ಲಿ ದಿನೇ ದಿನೇ ತಾಪಮಾನ ಏರುಗತಿಯಲ್ಲಿದೆ. ಬೆಳಗ್ಗೆಯೇ ಬಿಸಿಲಿನ ಬೇಗೆ ಕಂಡುಬರುತ್ತಿದ್ದು, ಸಂಜೆಯಾದರೂ ತಾಪಮಾನ ಇಳಿಕೆಯ ಅನುಭವ ಉಂಟಾಗುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಇಲ್ಲಿಯೂ ‘ಉಷ್ಣ ಅಲೆ’ಯ ಎದುರಿಸಬೇಕಾಗಿ ಬಂದರೂ ಅಚ್ಚರಿ ಇಲ್ಲ. ಕರಾವಳಿ ಜಿಲ್ಲೆಯಲ್ಲಿ ಬಿಸಿಲಿನ ತಾಪ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಶುಕ್ರವಾರ ಮಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಶನಿವಾರ ಮಂಗಳೂರಲ್ಲಿ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇದು 37 ಡಿಗ್ರಿ ಸೆಲ್ಸಿಯಸ್‌ ಮೀರಿದರೆ ಉಷ್ಣ ಅಲೆ ಬೀಸುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡುತ್ತದೆ. ಸದ್ಯದ ವರದಿ ಪ್ರಕಾರ ಕರಾವಳಿ ಜಿಲ್ಲೆಯಲ್ಲಿ ಭಾರಿ ತಾಪಮಾನ ಏರಿಕೆಯ ಸಾಧ್ಯತೆ ಇಲ್ಲ ಎನ್ನುತ್ತಾರೆ ಬೆಂಗಳೂರಿನ ಹವಾಮಾನ ಇಲಾಖೆ ವಿಜ್ಞಾನಿ ಪ್ರಸನ್ನ. ಕಳೆದ ಒಂದು ವಾರದಿಂದ ನಿಧಾನಗತಿಯಲ್ಲಿ ದ.ಕ.ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಶನಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ 34.5 ಡಿಗ್ರಿ ಸೆಲ್ಸಿಯಸ್‌ ಹಾಗೂ ಪಣಂಬೂರಿನಲ್ಲಿ ಗರಿಷ್ಠ 35.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಈ ದಿನಗಳಲ್ಲಿ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶದಲ್ಲಿ ಏರಿಳಿಕೆ ಕಂಡುಬರಲಿದೆ ಎಂದು ಹವಾಮಾನ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ಬತ್ತಿದ ನೀರಿನ ಸಂಗ್ರಹ: ಈಗಾಗಲೇ ನದಿ, ಹೊಳೆಯ ನೀರು ಬತ್ತುತ್ತಿದ್ದು, ಹಳ್ಳಕೊಳ್ಳಗಳು ಖಾಲಿಯಾಗಿವೆ. ಕೆರೆ, ಬಾವಿಗಳಲ್ಲೂ ನೀರಿನ ಅಭಾವ ತಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿತೋಟಗಳಿಗೂ ನೀರಿನ ಕೊರತೆ ಆವರಿಸಿದೆ. ಮಂಗಳೂರಿಗೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ 45 ದಿನಗಳಿಗೆ ಬೇಕಾಗುವಷ್ಟು ನೀರು ಸಂಗ್ರಹ ಇದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.ಬಿಸಿಲಿನಿಂದ ದೂರ ಇರಿ: ತಾಪಮಾನ ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 11ರಿಂದ ಸಂಜೆ 3 ಗಂಟೆ ವರೆಗೆ ಸೂರ್ಯನ ಬಿಸಿಲಿಗೆ ಹೊರಗೆ ಬರುವುದನ್ನು ಸಾಧ್ಯವಾದಷ್ಟು ದೂರ ಮಾಡಿ. ತಿಳಿ ಬಣ್ಣದ ಹತ್ತಿ ಉಡುಪು ಧರಿಸಿ, ಬಿಳಿ ಹತ್ತಿ ಬಟ್ಟೆಯಿಂದ ತಲೆಯನ್ನು ಮುಚ್ಚಿ, ಬಿಸಿಲಿನಲ್ಲಿ ಹೊರಗೆ ಹೋಗಲು ಅಗತ್ಯವಾದಾಗ ಕಪ್ಪು ಛತ್ರಿ, ಬಿಳಿ ಟೋಪಿ ಇತ್ಯಾದಿಗಳನ್ನು ಬಳಸಿ. ಹಣ್ಣಿನ ರಸಗಳು ಮತ್ತು ಎಳನೀರಿನಂತಹ ದ್ರವಗಳನ್ನು ಸಾಕಷ್ಟು ಕುಡಿಯಿರಿ ಎಂಬ ಸಲಹೆಯನ್ನು ಹವಾಮಾನ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.ಉಡುಪಿ: ಈ ವರ್ಷ 2 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಹೆಚ್ಚಳ!

ಕರಾವಳಿಯ ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗಿ ಉಷ್ಣ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಉಡುಪಿ ಜಿಲ್ಲಾಡಳಿತ ಎರಡು ವಾರಗಳ ಹಿಂದೆಯೇ ಎಚ್ಚರಿಕೆ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಈ ವಾರದಲ್ಲಿ ತಾಪಮಾನ ಹೆಚ್ಚಾಗಿದ್ದು, ಇನ್ನೂ ಹೆಚ್ಚಾಗುವ ಭೀತಿ ಎದುರಾಗಿದೆ.ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಸರಾಸರಿ 33 ಡಿಗ್ರಿ ಸೆಲ್ಷಿಯಸ್‌ನಷ್ಟು ಉಷ್ಣಾಂಶ ದಾಖಲಾಗಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಸರಾಸರಿ 35 ಡಿಗ್ರಿ ಸೆಲ್ಷಿಯಸ್ ಇದ್ದು, ಕಳೆದ ವರ್ಷಕ್ಕಿಂತ 2 ಡಿಗ್ರಿಗಳಷ್ಟು ತಾಪಮಾನದಲ್ಲಿ ಏರಿಕೆಯಾಗಿದೆ.2022ರ ಮಾರ್ಚ್‌ನಲ್ಲಿ ಅತೀ ಹೆಚ್ಚು 36 ಡಿಗ್ರಿ ಉಷ್ಣಾಂಶ ಕಾಣಿಸಿಕೊಂಡಿತ್ತು. 2023ರ ಮಾರ್ಚ್ 3ರಂದು 36.4, ಮಾ. 4ರಂದು 36.6 ಮತ್ತು ಮಾ.5ರಂದು 36.1 ಡಿಗ್ರಿ ಉಷ್ಣಾಂಶವಿತ್ತು.ಮಾ.1ರಂದು ಉಡುಪಿ ಜಿಲ್ಲೆಯ ಈ ವರ್ಷದ ಅತೀ ಹೆಚ್ಚು 36.4 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಸಾಧಾರಣವಾಗಿ ಮಾರ್ಚ್ ನಂತರ ಉಷ್ಣಾಂಶ ಇಳಿಮುಖವಾಗುತ್ತದೆ. ಆದರೆ ಈ ವರ್ಷ ಇನ್ನೂ 35 ಡಿಗ್ರಿಯ ಅಸುಪಾಸಿನಲ್ಲಿಯೇ ಉಷ್ಣಾಂಶವಿದ್ದು, ಇಳಿಮುಖವಾಗುತ್ತಿಲ್ಲ. ಮಾ.29ರಂದು 35.8 ಡಿಗ್ರಿ ಉಷ್ಣಾಂಶ ದಾಖಲಾಗಿದೆ.ಬೆಳಗ್ಗೆ ಮೋಡ ಕವಿದ ವಾತಾವರಣವಿರುವುದರಿಂದ ನಂತರ ಕಾಣಿಸಿಕೊಳ್ಳುತ್ತಿರುವ ವಿಪರೀತ ಬಿಸಿಲು ವಾತಾವರಣದ ತಾಪಮಾನವನ್ನು ಹೆಚ್ಚಿಸುತ್ತಿದೆ. ಇನ್ನೂ ಒಂದು ವಾರ ಕಾಲ ಇದೇ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.