ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿನ ಪುಡಿ ಕಲಬೆರಕೆಯಾಗಿರುವುದು ಒಂದೇ ಅಲ್ಲ, ಅಲ್ಲಿ ಸಂಗ್ರಹಣೆಯಾಗುವ ಹಾಲು ಮತ್ತು ಹಾಲಿನ ಉತ್ಪನ್ನಗಳ ಸುರಕ್ಷತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವೊಂದು ಆಘಾತಕಾರಿ ಅಂಶಗಳನ್ನು ಜಿಲ್ಲಾ ಅಂಕಿತ ಅಧಿಕಾರಿಗಳ ತಂಡ ಒಕ್ಕೂಟದೊಳಗೆ ಪರಿಶೀಲನೆ ನಡೆಸುವ ವೇಳೆ ಪತ್ತೆ ಹಚ್ಚಿ ಅಪಾಯಕಾರಿ ಅಂಶಗಳನ್ನು ಕೇಂದ್ರ ಸುರಕ್ಷತಾ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
- ತೆರೆದ ಚರಂಡಿ, ಕೀಟಗಳ ಬಾಧೆ, ದುರ್ವಾಸನೆ, ಅನೈರ್ಮಲ್ಯ ತಾಂಡವ
- ನಿಂತ ಮಳೆ ನೀರು, ತ್ಯಾಜ್ಯ ವಸ್ತುಗಳು, ಪಕ್ಷಿಗಳ ಗರಿಗಳಿಂದ ಆವೃತ- ಪರಿಶೀಲನೆ ವೇಳೆ ದಿಗ್ಭ್ರಮೆ ವ್ಯಕ್ತಪಡಿಸಿದ ಅಧಿಕಾರಿಗಳ ತಂಡಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿನ ಪುಡಿ ಕಲಬೆರಕೆಯಾಗಿರುವುದು ಒಂದೇ ಅಲ್ಲ, ಅಲ್ಲಿ ಸಂಗ್ರಹಣೆಯಾಗುವ ಹಾಲು ಮತ್ತು ಹಾಲಿನ ಉತ್ಪನ್ನಗಳ ಸುರಕ್ಷತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವೊಂದು ಆಘಾತಕಾರಿ ಅಂಶಗಳನ್ನು ಜಿಲ್ಲಾ ಅಂಕಿತ ಅಧಿಕಾರಿಗಳ ತಂಡ ಒಕ್ಕೂಟದೊಳಗೆ ಪರಿಶೀಲನೆ ನಡೆಸುವ ವೇಳೆ ಪತ್ತೆ ಹಚ್ಚಿ ಅಪಾಯಕಾರಿ ಅಂಶಗಳನ್ನು ಕೇಂದ್ರ ಸುರಕ್ಷತಾ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.ಜಿಲ್ಲಾ ಅಂಕಿತ ಅಧಿಕಾರಿಗಳ ತಂಡ ನೀಡಿದ ವರದಿಯಲ್ಲಿ ಒಕ್ಕೂಟದ ಹಾಲು ಮತ್ತು ಕಚ್ಚಾ ಸಾಮಗ್ರಿ ಲೋಡ್ ಮಾಡುವ ಮತ್ತು ಅನ್‌ಲೋಡ್ ಪ್ರದೇಶದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿರುವುದನ್ನು ಗುರುತಿಸಿದೆ. ನಿಂತ ಮಳೆ ನೀರು, ತ್ಯಾಜ್ಯ ವಸ್ತುಗಳು, ಪಕ್ಷಿಗಳ ಗರಿಗಳಿಂದ ತುಂಬಿರುವುದು. ಉತ್ಪಾದನಾ ಘಟದ ಸುತ್ತಲಿನ ಪ್ರದೇಶ ತೆರೆದ ಚರಂಡಿ, ಕೀಟಗಳ ಬಾಧೆ ಮತ್ತು ದುರ್ವಾಸನೆಯಿಂದ ಕೂಡಿದೆ. ಅಷ್ಟು ಮಾತ್ರವಲ್ಲದೆ, ಶೇಖರಣಾ ಟ್ಯಾಂಕ್, ಭರ್ತಿ ಮಾಡುವ ಪ್ರದೇಶ ಮತ್ತು ಮೂಲ ಸೌಕರ್ಯಗಳ ಕೆಳಭಾಗದಲ್ಲೂ ಸೋರಿಕೆ ಕಂಡುಬಂದಿದ್ದು ಆಹಾರ ಸುರಕ್ಷತೆಗೆ ಅಪಾಯ ತಂದೊಡ್ಡುವ ಅಪಾಯವನ್ನು ಗುರುತಿಸಲಾಗಿದೆ.
ಮಿಶ್ರಣ, ಶೇಖರಣ ಮತ್ತು ಸಿದ್ಧಪಡಿಸಿದ ಪ್ರದೇಶದಲ್ಲಿ ಸಾಕಷ್ಟು ಬೆಳಕಿಲ್ಲದಿರುವುದು, ಕೊಠಡಿಗಳ ಮಹಡಿಗಳು ಹಾನಿಗೊಳಗಾಗಿರುವುದು, ಕೆಲವು ಉಪಕರಣಗಳು ತುಕ್ಕು ಹಿಡಿದಿವೆ. ಶೇಖರಣಾ ಪ್ರದೇಶದಲ್ಲಿ ಸ್ಥಳಾವಕಾಶದ ಕೊರತೆ, ಹಾಲಿನಪುಡಿಗೆ ಲಭ್ಯವಿರುವ ಲೇಬಲ್ ಪ್ರಕಾರ ತಂಪಾದ ಮತ್ತು ಒಣ ಶೇಖರಣಾ ಪರಿಸ್ಥಿತಿಗಳು ಸಮರ್ಪಕವಾಗಿಲ್ಲದಿರುವುದಿಲ್ಲವೆಂಬ ಅಂಶವನ್ನು ದಾಖಲಿಸಿದ್ದಾರೆ.ಇಷ್ಟೆಲ್ಲಾ ಅವ್ಯವಸ್ಥೆಗಳ ನಡುವೆ ಹಾಲು, ಹಾಲಿನ ಉತ್ಪನ್ನಗಳು ತಯಾರಾಗುತ್ತಿದ್ದರೂ ಸುರಕ್ಷತೆಯ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸದಿರುವುದು ಕಳವಳಕಾರಿ ಸಂಗತಿಯಾಗಿದೆ. ಇದೀಗ ಹಾಲು ಮತ್ತು ಹಾಲಿನ ಉತ್ಪನ್ನಗಳ ಸುರಕ್ಷತೆಯನ್ನೇ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.
ಹಾಲಿನಪುಡಿ ಕಲಬೆರಕೆ ಪ್ರಕರಣದ ತನಿಖೆ ಸಮಯದಲ್ಲಿ ಹಾಲು, ಹಾಲು ಉತ್ಪನ್ನಗಳ ತಯಾರಾಗುವ ಸ್ಥಳದಲ್ಲಿ ಸಾರ್ವಜನಿಕರ ಗಮನಕ್ಕೆ ಬಾರದಂತಹ ಹಲವಾರು ಸಂಗತಿಗಳನ್ನು ಅಧಿಕಾರಿಗಳ ತಂಡ ಕಣ್ಣಾರೆ ಕಂಡು ದಿಗ್ಭ್ರಮೆ ವ್ಯಕ್ತಪಡಿಸಿದೆ. ಜನ ಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಸುರಕ್ಷತೆಗೆ ಪ್ರಾಮುಖ್ಯತೆಯನ್ನು ನೀಡದಿರುವುದು ಒಕ್ಕೂಟದ ಆಡಳಿತ ಮಂಡಳಿಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.ಎಫ್‌ಎಸ್‌ಎಸ್‌ಎಐ ಪರವಾನಗಿ ಇಲ್ಲ:
ಒಕ್ಕೂಟದಲ್ಲಿ ಜಪ್ತಿ ಮಾಡಲಾಗಿರುವ ೧೪೪ ಚೀಲದ ದಾಸ್ತಾನಿಗೆ ಸಂಬಂಧಿಸಿದಂತೆ ಬ್ಯಾಚ್‌ವಾರು ದಾಸ್ತಾನು ವರ್ಗಾವಣೆ ವಿವರಗಳನ್ನು ನಿರ್ವಹಿಸದಿರುವುದು, ಪ್ರತ್ಯೇಕ ಬ್ಯಾಚ್‌ಗಳಿಗೆ ಸಂಬಂಧಿಸಿದ ಚೀಲಗಳ ಸಂಖ್ಯೆಯನ್ನು ನಮೂದಿಸದಿರುವುದು. ದಾಸ್ತಾನು ಚಲನವಲನ ದಾಖಲೆಗಳನ್ನು ನಿರ್ವಹಿಸುವ ವೇಳೆ ನಿಗದಿತ ಎಸ್‌ಒಪಿ ಅನುಸರಿಸಿಲ್ಲ. ಕೆನೆರಹಿತ ಹಾಲಿನ ಪುಡಿ ಸಾಗಿಸಲು ಬಳಸಲಾದ ವಾಹನ (೮೦೦ ಚೀಲ, ೨ ಲೋಡ್) ಎಫ್‌ಎಸ್‌ಎಸ್‌ಎಐ ಪರವಾನಗಿಯನ್ನು ಪಡೆದಿಲ್ಲದಿರುವುದು ಸಾಗಣೆದಾರರನ್ನು ನೇಮಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳದಿರುವುದು ಕಂಡುಬಂದಿದೆ.ಜಿಲ್ಲಾ ಅಂಕಿತ ಅಧಿಕಾರಿಗಳು ಹಾಲು, ಹಾಲಿನ ಉತ್ಪನ್ನಗಳ ಘಟಕದೊಳಗಿನ ಅವ್ಯವಸ್ಥೆ, ಹಾಲಿನ ಪುಡಿ ಕಲಬೆರಕೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೇಂದ್ರ ಸುರಕ್ಷತಾ ಅಧಿಕಾರಿಗಳ ತಂಡ (ಎಫ್‌ಎಸ್‌ಎಸ್‌ಎಐ)ಕ್ಕೆ ನೀಡಿದ್ದಾರೆ. ಅದರಂತೆ ದಕ್ಷಿಣ ವಲಯ ವ್ಯಾಪ್ತಿಯ ಕೇಂದ್ರ ಆಹಾರ ಸುರಕ್ಷತಾ ಅಧಿಕಾರಿಗಳಾದ ಡಾ.ಸಿ.ಜಿ.ಹರ್ಷಿತಾ, ಡಾ.ವಾಂಗದರೆ ಸಚಿನ್ ಸುಭಾಷ್, ಡಾ.ಕೆ.ಜೆ.ಟೀನಾ ಅವರ ತಂಡ ಮನ್‌ಮುಲ್ ಕಚೇರಿಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಮಾಹಿತಿ ಸಂಗ್ರಹಿಸಿದೆ.
ಹಾಲಿನಪುಡಿ ಮಾದರಿ ಸಂಗ್ರಹದ ವಿವರ, ಪ್ರಯೋಗಾಲಯದ ವರದಿ, ಎಫ್‌ಐಆರ್ ಪ್ರತಿಗಳು, ಅಧಿಕಾರಿಗಳ ಅಮಾನತು, ಐವರ ಬಂಧನ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ಕೇಂದ್ರ ತಂಡಕ್ಕೆ ಜಿಲ್ಲಾ ಅಂಕಿತ ಅಧಿಕಾರಿಗಳು ನೀಡಿದ್ದಾರೆ.ಹೈಕೋರ್ಟ್‌ನಿಂದ ಆಡಳಿತ ಮಂಡಳಿ ತಡೆಯಾಜ್ಞೆ:
ಕೆನೆರಹಿತ ಹಾಲಿನಪುಡಿ ಕಲಬೆರಕೆ ಪ್ರಕರಣದಲ್ಲಿ ಒಕ್ಕೂಟದ ಆಡಳಿತ ಮಂಡಳಿ ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಕಂಡು ಬಂದಿರುವುದರಿದ ಆಹಾರ ಸುರಕ್ಷತಾ ಕಾಯಿದೆ-೨೦೦೬ರ ಪ್ರಕಾರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅಭಿಯೋಜನೆ ಮಂಜೂರಾತಿಯನ್ನು ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಉಪ ಆಯುಕ್ತರು ಆ.೨೧ರಂದು ಅನುಮತಿ ನೀಡಿದ್ದರು.ಆದರೆ, ಹಾಲು ಒಕ್ಕೂಟದ ವಿರುದ್ಧ ಮೊಕದ್ದಮೆ ದಾಖಲಿಸದಂತೆ ಮನ್‌ಮುಲ್ ಆಡಳಿತ ಮಂಡಳಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ. ಇದರ ವಿಚಾರಣೆ ಅ.೧೨ರಂದು ನಿಗದಿಯಾಗಿದೆ. ಹಾಲು ಒಕ್ಕೂಟಗಳಿಗೆ ಕೇಂದ್ರ ಎಫ್‌ಎಸ್‌ಎಸ್‌ಎಐ ಪರವಾನಗಿ ನೀಡುವ ಕಾರಣ ಮೊಕದ್ದಮೆ ದಾಖಲಿಸುವ ಅಧಿಕಾರವನ್ನು ಹೊಂದಿದೆ. ಸೆಂಟ್ರಲ್ ಲೈಸೆನ್ಸಿಂಗ್ ಅಥಾರಿಟಿಯಿಂದ ಅನುಮತಿ ದೊರಕಿದ ಬಳಿಕ ಹೊಸದಾಗಿ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ. ಹಾಲಿನಪುಡಿಯನ್ನು ದಾಸ್ತಾನು ಮಾಡಿದ್ದ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಮೆ.ಇನ್ಸುಲೇಷನ್ ಗೋದಾಮಿನ ವಿರುದ್ಧ ಮೊಕದ್ದಮೆ ದಾಖಲಿಸಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಮಂಡಳಿಲಾಖೆ ಉಪ ಆಯುಕ್ತರು ಮತ್ತೆ ಅನುಮತಿ ನೀಡಿದ್ದಾರೆ.