ಕನಕದಾಸರ ಎಲ್ಲಾ ಕೀರ್ತನೆಗಳೂ ಆದಿ ಕೇಶವನ ಅನನ್ಯ ಭಕ್ತಿಯೊಂದಿಗೆ ಸಾಮಾಜಿಕ ಕಟ್ಟುಪಾಡುಗಳು, ಕಂದಾಚಾರಗಳು ಹಾಗೂ ಮೌಲ್ಯಗಳ ವಿರುದ್ಧ ಬರೆದ ಕ್ರಾಂತಿಕಾರಿ ಬೆಳಕಿನ ಪಂಜುಗಳಾಗಿವೆ

ಕನ್ನಡಪ್ರಭ ವಾರ್ತೆ ಮೈಸೂರು

ಸಾಮಾಜಿಕ ಮೌಢ್ಯಗಳ, ಜಾತಿ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸಿದ ದಾಸ ಶ್ರೇಷ್ಠರು ಕನಕದಾಸರು ಎಂದು ಇಂದಿರಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ರೀಟಾ ಶಿವಮೂರ್ತಿ ಹೇಳಿದರು.ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಿಮಾಲಯ ಪ್ರತಿಷ್ಠಾನವು ಭಾನುವಾರ ಆಯೋಜಿಸಿದ್ದ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಎಲ್ಲಾ ಕೀರ್ತನೆಗಳೂ ಆದಿ ಕೇಶವನ ಅನನ್ಯ ಭಕ್ತಿಯೊಂದಿಗೆ ಸಾಮಾಜಿಕ ಕಟ್ಟುಪಾಡುಗಳು, ಕಂದಾಚಾರಗಳು ಹಾಗೂ ಮೌಲ್ಯಗಳ ವಿರುದ್ಧ ಬರೆದ ಕ್ರಾಂತಿಕಾರಿ ಬೆಳಕಿನ ಪಂಜುಗಳಾಗಿವೆ ಎಂದರು.ಆಧ್ಯಾತ್ಮಿಕ ಚಿಂತಕ ಸೋಮಶೇಖರ ಸ್ವಾಮೀಜಿ ಮಾತನಾಡಿ, ಬಸವಣ್ಣ ಮತ್ತು ಕನಕದಾಸರ ಚಿಂತನೆಗಳಲ್ಲಿ ಸಾಮ್ಯತೆ ಇದ್ದು, ಸಮಾಜ ಸುಧಾರಣೆಯೇ ಇವರ ಪ್ರಮುಖ ಧ್ಯೇಯವಾಗಿದೆ ಎಂದರು.ಇದೇ ವೇಳೆ ಸಾಧಕರಾದ ಗೋಪಾಲಕೃಷ್ಣ ಗೋರೆ (ಶಿಕ್ಷಣ ಮತ್ತು ಯಕ್ಷಗಾನ), ನೀಲಾಂಬಿಕೆ (ಸಾಹಿತ್ಯ ಸೇವೆ), ಚಿನ್ನಸ್ವಾಮಿ ವಡ್ಡಗೆರೆ ( ಕೃಷಿ ಮತ್ತು ಪತ್ರಿಕಾರಂಗ), ವಿದುಷಿ ಸೌಮ್ಯ ಶ್ರೀಧರ್ ಜೈನ್ (ಸಂಗೀತ ) ಹಾಗೂ ಡಾ.ಟಿ. ಯಲ್ಲಪ್ಪ (ಶಿಕ್ಷಣ ಮತ್ತು ಸಾಹಿತ್ಯ) ಅವರಿಗೆ ಕನಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಿಗೆ ಮೈಸೂರು ವಿವಿ ಗಣಕವಿಜ್ಞಾನ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್. ಗುರು ಪ್ರಶಸ್ತಿ ಪ್ರದಾನ ಮಾಡಿದರು.ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷ ಪಿಯು ಕಾಲೇಜಿನ ಪ್ರಾಂಶುಪಾಲ ದೇವರಾಜು ಪಿ. ಚಿಕ್ಕಹಳ್ಳಿ ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಆರೋಗ್ಯ ಕಿರಣ ಮಾಸಪತ್ರಿಕೆಯ ವಿಶೇಷ ಸಂಚಿಕೆಯನ್ನು ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ ಕುಮಾರ್ ಬಿಡುಗಡೆಗೊಳಿಸಿದರು.ವಿದುಷಿ ಶ್ರೀಮತಿ ಹೇಮಲತಾ ಹಾಗೂ ಸಾಂಬಮೂರ್ತಿ ಅವರು ಕನಕದಾಸರ ಕೀರ್ತನೆಗಳ ಗಾಯನ ನಡೆಯಿತು.ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಕಾರ್ಯದರ್ಶಿ ಎ. ಹರ್ಷವರ್ಧನ, ಉಪಾಧ್ಯಕ್ಷ ಎಸ್. ಕೃಷ್ಣಮೂರ್ತಿ, ಸಂಚಾಲಕ ಎಂ.ವಿ. ನಾಗೇಂದ್ರಬಾಬು, ನಾಗೇಂದ್ರ ಹೆಬ್ಬಾರ್ ಇದ್ದರು.