ಆಚಾರ, ಅನುಷ್ಠಾನವೇ ಸಂಪತ್ತು: ರಾಘವೇಶ್ವರ ಭಾರತಿ ಸ್ವಾಮೀಜಿ

| Published : Feb 02 2025, 11:45 PM IST

ಸಾರಾಂಶ

ರಾಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಶ್ರೀ ಶಂಕರ ಪಂಚಮಿ ಉತ್ಸವದ ಶ್ರೀ ಮಹಾಪಾದುಕೆ ರಥ ಸಂಚಾರಕ್ಕೆ ಚಾಲನೆ ನೀಡಲಾಯಿತು. ರಾಘವೇಶ್ವರ ಶ್ರೀಗಳು ಶಕಟಪುರ ಶ್ರೀಗಳಿಗೆ ಶ್ವೇತಚ್ಛತ್ರವನ್ನು ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಆಚಾರವಿದ್ದಲ್ಲಿ ಧರ್ಮವಿರುತ್ತದೆ. ಧರ್ಮಯುಕ್ತ ಜೀವನದಿಂದ ಭಗವಂತನ ಪ್ರಾಪ್ತಿಯಾಗುತ್ತದೆ. ಆಚಾರ, ಅನುಷ್ಠಾನವೇ ಸಂಪತ್ತು ಆಗಿದೆ. ತನು ಮನ ಮಲಿನವಾಗಬಾರದು. ನಮ್ಮ ಅಂತರಂಗ ನಿಯಂತ್ರಣ ಕಳೆದುಕೊಳ್ಳಬಾರದು. ದೇಹ, ಮನಸ್ಸುಗಳ‌ ಕಾಳಜಿಯಿರಲಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಅವರು ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಸೇವಾ ಸಮಿತಿ, ಕ್ರಿಯಾ ಸಮಿತಿ, ಹವ್ಯಕ‌ ಮಹಾಮಂಡಲ, ಮಂಗಳೂರು, ಉಪ್ಪಿನಂಗಡಿ ಮತ್ತು ಮುಳ್ಳೇರಿಯ ಹವ್ಯಕ ಮಂಡಲಗಳು ಆಯೋಜಿಸಿದ ಶ್ರೀರಾಮ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ, ಹೋಬಳಿ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.

ಅಡಕೆ ಬೆಳೆ, ಬೆಲೆ ಜಾಸ್ತಿಯಾಗಲಿ: ಅಡಕೆ ಕೃಷಿಕರು ಬೆಳೆ ಕುಸಿತದ ಬಗ್ಗೆ ಚಿಂತಿಸಬೇಕಾಗಿಲ್ಲ. ಪೂಗಪೂಜೆಯೊಂದಿಗೆ ಶ್ರೀ ಚಕ್ರಾರ್ಚನೆ ನಡೆದಿದೆ. ಮುಂದಿನ ಸಾಲಿನಲ್ಲಿ ಅಡಕೆ ಬೆಳೆ, ಬೆಲೆ ಜಾಸ್ತಿಯಾಗಲಿ ಎಂದು ಅವರು ಹೇಳಿದರು.

ಶಕಟಪುರ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮಾಯೆ ಆವರಿಸಿರುವುದರಿಂದ ಜಗತ್ತಿನಲ್ಲಿ ಸೃಷ್ಟಿ, ಲಯ, ಸ್ಥಿತಿಯಿರುತ್ತದೆ. ಸದ್ಗುರುವಿನ ಮಾರ್ಗದರ್ಶನದಿಂದ ಅಜ್ಞಾನ ನಿವಾರಣೆಯಾಗುತ್ತದೆ. ಜ್ಞಾನವಂತನಾಗುತ್ತಾನೆಂದು ಹೇಳಿದರು.

ರಾಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಶ್ರೀ ಶಂಕರ ಪಂಚಮಿ ಉತ್ಸವದ ಶ್ರೀ ಮಹಾಪಾದುಕೆ ರಥ ಸಂಚಾರಕ್ಕೆ ಚಾಲನೆ ನೀಡಲಾಯಿತು. ರಾಘವೇಶ್ವರ ಶ್ರೀಗಳು ಶಕಟಪುರ ಶ್ರೀಗಳಿಗೆ ಶ್ವೇತಚ್ಛತ್ರವನ್ನು ಪ್ರದಾನ ಮಾಡಿದರು. ಮಾಣಿ ಮಠದ ಶ್ರೀರಾಮ ಸಂಸ್ಕೃತ ವೇದಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ವಿದ್ಯಾರ್ಥಿ ಅಭೀಷ್ಟ ಅನಿಸಿಕೆ ವ್ಯಕ್ತಪಡಿಸಿದರು. ಪುತ್ತೂರು ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ, ನಿಟ್ಟೆ ಯುನಿವರ್ಸಿಟಿ ವಿಸಿ ಡಾ.ಎಂ.ಎಸ್. ಮೂಡಿತ್ತಾಯ, ಸಂಸ್ಥೆ ಉಪಾಧ್ಯಕ್ಷ ರಾಜೇಂದ್ರ ಮಡಿಯಾಲ್, ಡಾ.ಸಿ.ಎಸ್. ಶಾಸ್ತ್ರಿ, ಡಾ. ರವಿಸುಬ್ರಹ್ಮಣ್ಯ ಮರಕ್ಕಿಣಿ, ಶಕಟಪುರ ಕ್ಷೇತ್ರದ ಆಸ್ಥಾನ ಪಂಡಿತ ಹಂಪಿಹೊಳಿ ಮಧುಸೂದನ ಶಾಸ್ತ್ರಿ, ಶ್ರೀಮಠದ ಪಿಆರ್‌ಒ ಹರಿಪ್ರಸಾದ್ ಪೆರಿಯಾಪು, ಹವ್ಯಕ ಮಹಾಮಂಡಲ ಅಧ್ಯಕ್ಷ ‌ಮೋಹನಭಾಸ್ಕರ ಹೆಗಡೆ, ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪ್ಪಿನಂಗಡಿ ಮಂಡಲಾಧ್ಯಕ್ಷ ಈಶ್ವರಪ್ರಸನ್ನ ಪೆರ್ನೆಕೋಡಿ, ಮುಳ್ಳೇರಿಯ ಮಂಡಲಾಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ದೇವಿಕಾ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.ಮಾಣಿ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಸ್ವಾಗತಿಸಿದರು. ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ್ ನೀರ್ಪಾಜೆ ಮತ್ತು ಸುರೇಶ್ ಬಿ.ಎಸ್. ನಿರೂಪಿಸಿದರು.