ಸಾರಾಂಶ
ಬ್ಯಾಡಗಿ: ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿ ತಳಹದಿಯಾಗಿದ್ದು ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬ ವ್ಯಕ್ತಿ ದೇವಾಲಯಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುತ್ತಾನೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಆಯೋಗದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಗಣೇಶೋತ್ಸವದ ಅಂಗವಾಗಿ ಪಟ್ಟಣದ ಆಂಜನೇಯ ಯುವಕ ಮಂಡಳ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಧಾರ್ಮಿಕ ಆಚರಣೆಗಳು ಸಂಸ್ಕೃತಿ ಮತ್ತು ಸಂಪ್ರದಾಯಗಳ ಭಂಡಾರವಾಗಿದ್ದು ಆದರೆ ಧರ್ಮದ ಮೌಲ್ಯಗಳನ್ನು ಪರಿಪಾಲಿಸಿದರೆ ಮಾತ್ರ ಧರ್ಮವು ನಮ್ಮನ್ನು ಎಂದೆಂದಿಗೂ ಕಾಪಾಡುತ್ತದೆ ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಭೌತಿಕ ಸಂಪತ್ತು, ಹುಟ್ಟಿರುವ ಬದುಕು ಶಾಶ್ವತವಲ್ಲ. ಆದರೆ ಸಂಸ್ಕಾರ ಸಂಸ್ಕೃತಿಯಿಂದ ಮಾತ್ರ ಮನುಷ್ಯನ ಜೀವನ ಉನ್ನತಿ ಹೊಂದಲು ಸಾಧ್ಯ. ಸದ್ಗುಣ ಸಚ್ಚಾರಿತ್ರ್ಯದಿಂದ ಕೂಡಿದ ಬದುಕು ಮುಕ್ತಿಗೆ ದಾರಿ ನೀಡಲಿದೆ. ಸಕಲ ಜೀವರಾಶಿಗಳಲ್ಲಿ ಮನುಷ್ಯನಿಗೆ ಪ್ರಾಧಾನ್ಯತೆ ಹೆಚ್ಚಿದೆ. ಸನ್ಮಾರ್ಗದಲ್ಲಿ ನಡೆಯುವ ಮೂಲಕ ನಾವೆಲ್ಲರೂ ಭಗವಂತನ ಕೃಪೆಗೆ ಪಾತ್ರರಾಗಬೇಕಿದೆ ಎಂದರು.ಆಸ್ತಿಕ ಮನೋಭಾವನೆಯಿಂದ ನೆಮ್ಮದಿ: ಸಾನಿಧ್ಯ ವಹಿಸಿದ್ದ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗಶ್ರೀಗಳು ಮಾತನಾಡಿ, ಗಣೇಶನ ಆರಾಧನೆ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಆಸ್ತಿಕ ಮನೋಭಾವನೆ ಹೊಂದಿರುವ ಪ್ರತಿಯೊಬ್ಬರ ಮನಸ್ಸಿನಲ್ಲಿ ಗಣೇಶ ಹಬ್ಬವು ಪ್ರಮುಖಸ್ಥಾನ ಪಡೆದಿದೆ ಎಂದ ಅವರು ಆಂಜನೇಯ ಯುವಕ ಮಂಡಳವು ಪ್ರತಿ ವರ್ಷವೂ ಗಣೇಶ ಮೂರ್ತಿ ಪ್ರತಿಷ್ಟಾಪಿಸುವ ಮೂಲಕ ಅದರ ಅಂಗವಾಗಿ ವಿಶಿಷ್ಟ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಅತ್ಯಂತ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಬಸವರಾಜ ಛತ್ರದ, ಪುರಸಭೆಯ ನೂತನ ಉಪಾಧ್ಯಕ್ಷ ಸುಭಾಸ್ ಮಾಳಗಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕಪಡೆದ ಹೇಮಂತ ಛತ್ರದ, ದ್ವಿತೀಯ ಸ್ಥಾನ ಪಡೆದ ರಶ್ಮಿ ಹಾದರಗೇರಿ, ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ತರುಣ ಹಿರೇಮಠ, ಪಿಯುಸಿ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ನಾಗಮ್ಮ ಬಣಕಾರ (ಕಲಾ) ಸಾನಿಯಾ ಮಡ್ಲೂರ (ವಾಣಿಜ್ಯ) ಕವನಾ ಹಂಪಣ್ಣನವರ (ವಿಜ್ಞಾನ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ಶಾಸಕ ಸುರೇಶಗೌಡ ಪಾಟೀಲ, ರೈತ ಮುಖಂಡ ಗಂಗಣ್ಣ ಎಲಿ ಸೇರಿದಂತೆ ಇನ್ನಿತರರಿದ್ದರು.