ಪಾಲಿಬೆಟ್ಟ ಸಮೀಪದ ಚೆನ್ನಯ್ಯನ ಕೋಟೆಯ ಜಮಾಅತ್ ಆಶ್ರಯದಲ್ಲಿ ನಡೆಯುವ ಹಜ್ಹರತ್ ನಜ್ಹರ್ ಮೊಹಿದ್ದೀನ್ ಶಾವಲಿಯವರ ವಾರ್ಷಿಕ ಉರೂಸ್ ಕಾರ್‍ಯಕ್ರಮ

ಪೊನ್ನಂಪೇಟೆ: ಧಾರ್ಮಿಕ ಉತ್ಸವಗಳು ಮತ್ತು ಆಚರಣೆಗಳು ಆಯಾ ಊರಿನ ಮತ್ತು ಮಹಲಿನ ಒಂದು ಪ್ರಮುಖ ಪರಂಪರೆಯಾಗಿದೆ. ಧರ್ಮದ ಹೆಸರಿನಲ್ಲಿ ಸಾರ್ವಜನಿಕರ ಒಂದುಗೂಡುವಿಕೆ ಉದ್ದೇಶಕ್ಕಾಗಿ ಕೊಡಗಿನ ಹಲವೆಡೆ ನಡೆಯುವ ಉರೂಸ್ ಗಳು ಸಮಾಜದಲ್ಲಿ ಕೋಮು ಸಾಮರಸ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯ ಕೋಳುಮಂಡ ರಫೀಕ್ ಅಭಿಪ್ರಾಯಪಟ್ಟಿದ್ದಾರೆ.ಪಾಲಿಬೆಟ್ಟ ಸಮೀಪದ ಚೆನ್ನಯ್ಯನ ಕೋಟೆಯ ಜಮಾಅತ್ ಆಶ್ರಯದಲ್ಲಿ ನಡೆಯುವ ಹಜ್ಹರತ್ ನಜ್ಹರ್ ಮೊಹಿದ್ದೀನ್ ಶಾವಲಿಯವರ ವಾರ್ಷಿಕ ಉರೂಸ್ ಕಾರ್‍ಯಕ್ರಮದ ಸಮಾರೋಪದ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ಸೌಹಾರ್ದ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆಯ ಬಹುತೇಕ ಉರೂಸ್‌ಗಳು ಹಿಂದೂ- ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿವೆ. ಜನ ಸಮುದಾಯಗಳ ನಡುವೆ ಭಾವೈಕ್ಯತೆ ಮೂಡಿಸುವಲ್ಲಿ ಹಾಗೂ ವಿವಿಧ ಕೋಮುಗಳ ನಡುವೆ ಸಾಮರಸ್ಯವನ್ನು ಸಾರುವಲ್ಲಿ ಯಶಸ್ವಿಯಾಗಿದೆ. ಈ ರೀತಿಯ ಆಚರಣೆಗಳೇ ನಿಜವಾದ ಭಾವೈಕ್ಯತೆಯ ಸಂಗಮ. ಎಲ್ಲ ಧರ್ಮಗಳು ಶ್ರೇಷ್ಠ ಎಂದು ತಿಳಿದಾಗ ಮಾತ್ರವೇ ಇಲ್ಲಿನ ಧರ್ಮ, ಸಂಪ್ರದಾಯ ಹಾಗೂ ಭಾಷೆಗಳ ಬಗ್ಗೆ ಗೌರವ ಭಾವನೆ ಮೂಡುತ್ತದೆ ಎಂದು ಹೇಳಿದರು.ಸೌಹಾರ್ದ ಸಮ್ಮೇಳನವನ್ನು ಚೆನ್ನಯ್ಯನಕೋಟೆಯ ಜುಮಾ ಮಸೀದಿಯ ಧರ್ಮಗುರು ಮೊಹಮ್ಮದ್ ನಾಝೀರ್ ರಜ್ವಿ ಉದ್ಘಾಟಿಸಿದರು. ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ. ಎ. ಹನೀಫ್ ಮಾತನಾಡಿದರು.

ಚೆನ್ನಯ್ಯನಕೋಟೆ ಜುಮ್ಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಜವಾದುಲ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು. ಚೆನ್ನಯ್ಯನಕೋಟೆ ಗ್ರಾಪಂ ಉಪಾಧ್ಯಕ್ಷ ವಿಜು, ಸದಸ್ಯರಾದ ನಾಗರಾಜು, ಹೊಳಮಾಲ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಮುಸ್ತಫಾ, ಅಲ್ಲಿನ ಜುಮಾ ಮಸೀದಿ ಖತೀಬ ಬಶೀರ್ ಸಖಾಫಿ, ಸ್ಥಳೀಯ ಸಮಾಜ ಸೇವಕ ಮನು, ರವೀಂದ್ರ ಭಾವೆ, ಚೆನ್ನಯ್ಯನಕೋಟೆ ಜುಮ್ಮಾ ಮಸೀದಿ ಕಾರ್‍ಯದರ್ಶಿ ಫೈರೋಜ್ ಖಾನ್ ಉಪಸ್ಥಿತರಿದ್ದರು. ಇದೇ ಸಂದರ್ಭ ಕೋಳುಮಂಡ ರಫೀಕ್ ಮತ್ತು ಹನೀಫ್ ಅವರ ಸಮುದಾಯ ಸೇವೆಯನ್ನು ಪರಿಗಣಿಸಿ ಚೆನ್ನಯ್ಯನಕೋಟೆ ಜಮಾಅತ್ ಪರವಾಗಿ ಅವರನ್ನು ಗೌರವಿಸಲಾಯಿತು. ಉಮ್ಮರ್ ಮದನಿ ಸ್ವಾಗತಿಸಿದರು.