ಕನ್ನಡಪ್ರಭ ವಾರ್ತೆ, ಸಾಗರ:

ಎಸ್ಐಆರ್ ಮೂಲಕ ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಮತಗಳನ್ನು ಹೊರಗೆ ಹಾಕಿ ಅಧಿಕಾರ ಹಿಡಿಯಬೇಕೆನ್ನುವ ಬಿಜೆಪಿಗೆ ಈಗ ಭ್ರಮನಿರಸನವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಎಸ್ಐಆರ್ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್.ಐ.ಆರ್. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ನಂತರ ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಕಾರ್ಯಕರ್ತರು ಎಸ್‌ಐಆರ್‌ ಮೂಲಕ ಒಬ್ಬ ಮತದಾರನೂ ಮತಪಟ್ಟಿಯಿಂದ ಹೊರಗೆ ಉಳಿಯದಂತೆ ನಿಗಾವಹಿಸಿ ಎಂದ ಅವರು. ೨೦೨೩ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನ ಗೆದ್ದಿತ್ತು. ೨೦೨೮ರ ಚುನಾವಣೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ನಿರಾಯಾಸವಾಗಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದರು.ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ನಂತರ ಬಿಜೆಪಿ ಮಕಾಡೆ ಮಲಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಕೆಳಗೆ ಇಳಿಸಲು ಪೈಪೋಟಿ ನಡೆಯುತ್ತಿದೆ. ಜೆಡಿಎಸ್ ಸಣ್ಣಪುಟ್ಟ ಹೋರಾಟಕ್ಕೆ ಸೀಮಿತವಾಗಿದೆ. ರಾಜ್ಯದಲ್ಲಿ ಭವಿಷ್ಯ ಇರುವ ಪಕ್ಷವೆಂದರೆ ಕಾಂಗ್ರೆಸ್ ಮಾತ್ರ. ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ, ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹಗಲುಗನಸು ಕಾಣುತ್ತಿದ್ದ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಎಸ್.ಐ.ಆರ್. ಕರಪತ್ರದಲ್ಲಿ ನನ್ನ ಭಾವಚಿತ್ರವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ನಾವು ಮತದಾರರ ಜಾಗೃತಿಗಾಗಿ ಕರಪತ್ರ ಮಾಡಿಸಿದ್ದೇವೆಯೆ ಹೊರತು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಎಸ್ಐಆರ್ ಅತ್ಯಂತ ಶಿಸ್ತುಬದ್ಧವಾಗಿ ನಡೆಸಲು ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಪ್ರತಿಯೊಬ್ಬರು ಎಸ್ಐಆರ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕಾಂಗ್ರೆಸ್ ಕಾರ್ಯಕರ್ತರು ಯಾರೂ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನಿಗಾವಹಿಸಬೇಕು ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್. ಜಯಂತ್, ಸುರೇಶ್ ಬಾಬು, ರವಿಕುಮಾರ್ ಎಚ್.ಎಂ., ಸದ್ದಾಂ ದೊಡ್ಮನೆ, ಕೆ.ಹೊಳೆಯಪ್ಪ, ಮಕ್ಬೂಲ್ ಅಹ್ಮದ್, ಚಂದ್ರಪ್ಪ ಎಲ್., ಕಬೀರ್ ಚಿಪ್ಳಿ, ಅನಿತಾ ಕುಮಾರಿ, ಉಷಾ ಎನ್., ಪ್ರಭಾವತಿ, ಗಣಪತಿ ಮಂಡಗಳಲೆ, ಡಿ. ದಿನೇಶ್, ಅನ್ವರ್ ಭಾಷಾ, ಕನ್ನಪ್ಪ ಹಾಜರಿದ್ದರು. ೧೦ಕೆ.ಎಸ್.ಎ.ಜಿ.೧ಎಸ್ಐಆರ್ ಪ್ರಗತಿ ಪರಿಶೀಲನಾ ಸಭೆಯನ್ನು ಬೇಳೂರು ಉದ್ಘಾಟಿಸಿದರು.