ಸಾರಾಂಶ
ಕುಶಾಲನಗರದ ಕಾವೇರಿ ಆರತಿ ಕ್ಷೇತ್ರದಲ್ಲಿ ಅಖಿಲ ಭಾರತ ಸನ್ಯಾಸಿಗಳ ಸಂಘ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಆಶ್ರಯದಲ್ಲಿ ಕಾವೇರಿ ನದಿ ಜಾಗೃತಿ ಯಾತ್ರಾ ಕಾರ್ಯಕ್ರಮ ನೆರವೇರಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಪ್ರಕೃತಿ ಸಂರಕ್ಷಣೆಯೊಂದಿಗೆ ಸ್ವಚ್ಛ ಪರಿಸರದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಕರೆ ನೀಡಿದ್ದಾರೆ.ಕುಶಾಲನಗರದ ಕಾವೇರಿ ಆರತಿ ಕ್ಷೇತ್ರದಲ್ಲಿ ಅಖಿಲ ಭಾರತ ಸನ್ಯಾಸಿಗಳ ಸಂಘ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಆಶ್ರಯದಲ್ಲಿ ನಡೆದ ಕಾವೇರಿ ನದಿ ಜಾಗೃತಿ ಯಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾವೇರಿ ಮೂಲದಿಂದ ನದಿ ಸಮುದ್ರ ಸಂಗಮ ತನಕ ಜಲ ಮೂಲಗಳನ್ನು ಸಂರಕ್ಷಣೆ ಮಾಡುವ ಹೊಣೆ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದರು. ಕೆಲವೇ ವರ್ಷಗಳ ಹಿಂದೆ ನದಿಯಿಂದ ಬೊಗಸೆ ಕೈಯಲ್ಲಿ ನೇರ ಬಳಕೆ ಮಾಡುತ್ತಿದ್ದ ನೀರು ಇತ್ತೀಚಿನ ದಿನಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸ್ವಾಮೀಜಿ ಹೇಳಿದರು.ಯಾತ್ರೆಯಲ್ಲಿ ಬಂದ ಕಾವೇರಿ ಮಾತೆಯ ಮೂರ್ತಿಗೆ ಅಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮಗಳು ಜರಗಿದವು. ಅರ್ಚಕ ಕೃಷ್ಣಮೂರ್ತಿ ಭಟ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ನದಿ ಜಾಗೃತಿ ಯಾತ್ರ ಸಮಿತಿಯ ಸಂಚಾಲಕ ಆದಿತ್ಯಾನಂದ ಸ್ವಾಮೀಜಿ ಯಾತ್ರೆಯ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ಮಾತುಗಳಾಡಿದರು.
ಅಖಿಲ ಭಾರತೀಯ ಸನ್ಯಾಸಿಗಳ ಸಂಘದ ಪ್ರಮುಖರಾದ ವೇದಾನಂದ ಸ್ವಾಮೀಜಿ ಶಿವರಾಮನಂದ ಸ್ವಾಮೀಜಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಡಿ ಆರ್ ಸೋಮಶೇಖರ್, ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ, ಬಳಪಂಡ ಪೊನ್ನು , ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸಂಧ್ಯಾ ಗಣೇಶ್ ಮತ್ತು ಸಾಧು ಸಂತರ ತಂಡದ ಸದಸ್ಯರು, ಬಳಗದ ಸದಸ್ಯರಿದ್ದರು.