ಸಾರಾಂಶ
ಎನ್.ವಿಶ್ವನಾಥ್, ಶ್ರೀರಾಂಪುರ
ಹೊಸದುರ್ಗ : ಪಟ್ಟಣದಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿರುವಂತೆ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಠಿಯಾಗುವ ಲಕ್ಷಣಗಳು ಕಾಣುತ್ತಿವೆ. ಪಟ್ಟಣಕ್ಕೆ ನೀರು ಪೂರೈಸುವ ವೇದಾವತಿ ನದಿ ಒಡಲು ಬತ್ತಿದ್ದು, ಯುಗಾದಿ ಹಬ್ಬದ ನಂತರ ಮಳೆ ಬಾರದಿದ್ದರೆ ಪಟ್ಟಣದ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ನಗರದಲ್ಲಿ ನೀರಿನ ಕೊರತೆ ಕಾಡುವುದು ನಿಶ್ಚಿತ ಎನ್ನಲಾಗುತ್ತಿದೆ.
ಸದ್ಯ ಪಟ್ಟಣದಲ್ಲಿ ವಾರಕ್ಕೋಮ್ಮೆ ನೀರು ಬಿಡಲಾಗುತ್ತಿದೆ. ಬ್ಯಾರೇಜ್‌ನಲ್ಲಿ ನೀರು ಖಾಲಿಯಾದ ನಂತರ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಸಲುವಾಗಿ ನದಿ ಪಾತ್ರದಲ್ಲಿ ಎಂಟು ಬೋರ್ ಕೊರೆಸಲಾಗಿದೆ. ಆರು ಬೊರ್‌ವೆಲ್ ಯಶಸ್ವಿಯಾಗಿವೆ ಅಲ್ಲದೆ ಪಟ್ಟಣದಲ್ಲಿರುವ 90 ಬೋರ್‌ವೆಲ್‌ಗಳ ಮೂಲಕ ನೀರು ಪೂರೈಕೆ ಮಾಡುತ್ತಿದ್ದು, ಬೋರ್‌ನಲ್ಲಿ ಬರುತ್ತಿದ್ದ ನೀರಿನ ಪ್ರಮಾಣವು ಈಗ ಕಡಿಮೆಯಾಗಿದೆ. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎನ್ನಲಾಗುತ್ತಿದೆಯಾದರೂ ಬರುವ ದಿನಗಳಲ್ಲಿ ಮಳೆ ಬಾರದಿದ್ದರೆ ನೀರಿನ ಸಮಸ್ಯೆ ಉಲ್ಬಣವಾಗಲಿದೆ.
ಪಟ್ಟಣಕ್ಕೆ ಕೇವಲ ಎಂಟು ಕಿ.ಮೀ.ದೂರದಲ್ಲಿ ಹಾದು ಹೋಗಿರುವ ಜೀವನದಿ ವೇದಾವತಿ ನದಿಗೆ ಕೆಲ್ಲೋಡು ಬಳಿ ಬ್ಯಾರೆಜ್ ನಿರ್ಮಿಸಿ ಅಲ್ಲಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಇದೇ ರೀತಿಯಲ್ಲಿ 2017, 2019 ರಲ್ಲಿಯೂ ನೀರಿನ ಕೊರತೆ ಉಂಟಾಗಿತ್ತು. ಆದರೆ ಬಳಿಕ ನಾಲ್ಕು ವರ್ಷಗಳ ಕಾಲ ಭದ್ರಾ ನೀರು ಹರಿಸಿದ್ದರಿಂದ ಅಲ್ಲದೆ ಉತ್ತಮ ಮಳೆ ಆಗಿದ್ದರಿಂದ ನೀರಿನ ಕೊರತೆ ಕಾಣಿಸಿಕೊಂಡಿರಲಿಲ್ಲ. ಈ ವರ್ಷ ಸಂಪೂರ್ಣವಾಗಿ ಮಳೆ ಬಂದಿಲ್ಲ ಇತ್ತ ತಾಪಮಾನದಲ್ಲಿಯೂ ಏರಿಕೆ ಕಂಡು ಬಂದಿದೆ. ನೀರಿನ ಬೇಡಿಕೆಯೂ ಹೆಚ್ಚಿದ್ದು, ಬಳಕೆ ಪ್ರಮಾಣವೂ ಏರಿಕೆಯಾಗಿದೆ.
ವೇದಾವತಿ ನದಿ ನೀರು ಖಾಲಿಯಾಗುವುದು ಖಚಿತವಾಗುತ್ತಲೇ ಪುರಸಭೆ ಸದಸ್ಯರೊಂದಿಗೆ ಕುಡಿಯುವ ನೀರು ಸರಬರಾಜು ಸಂಬಂಧ ಸಭೆ ನಡೆಸಲಾಗಿದೆ. ಒಂದು ವೇಳೆ ನೀರಿನ ಸಮಸ್ಯೆ ಆದಲ್ಲಿ ಸಮರ್ಪಕ ನೀರು ಒದಗಿಸಲು ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಟೆಂಡರ್ ಕರೆಯಲಾಗುವುದು. ಒಂದು ದಿನಕ್ಕೆ 42 ಟ್ರಿಪ್‌ನಂತೆ ನೀರು ಒದಗಿಸಲಾಗುತ್ತದೆ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಯೋಗೀಶ್ ಮಾಹಿತಿ ನೀಡಿದರು.
ಸದ್ಯ ಪಟ್ಟಣದಲ್ಲಿ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಮಳೆ ಬಾರದಿದ್ದರೆ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಕೆಲ್ಲೋಡು ಬ್ಯಾರೆಜ್‌ನಿಂದ ಮುಂದಕ್ಕೆ ಕಾರೇಹಳ್ಳಿ ಬಳಿ ಮತ್ತೊಂದು ಬ್ಯಾರೇಜ್ ನಿರ್ಮಿಸಲಾಗಿದ್ದು, ಅದರಲ್ಲಿ 10 ಅಡಿ ನೀರು ಇದೆ. ಅದರಿಂದ ಕೆಲ್ಲೋಡು ಬ್ಯಾರೆಜ್‌ನಲ್ಲಿರುವ ಜಾಕ್‌ವೆಲ್‌ಗೆ ನೀರು ಪಂಪ್ ಮಾಡಲು ಸಂಬಂಧಿ ಸಿದ ಇಂಜಿನಿಯರ್ ಜೊತೆ ಮಾತನಾಡಲಾಗಿದೆ. ಸದ್ಯದಲ್ಲಿಯೇ ಶಾಸಕರೊಂದಿಗೆ ಈ ಕುರಿತು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಕಾರೇಹಳ್ಳಿ ಬ್ಯಾರೆಜ್‌ನಿಂದ ನೀರು ಪಂಪ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಪುರಸಭೆ ಸದಸ್ಯ ಮಂಜುನಾಥ್ ತಿಳಿಸಿದರು.
ಭದ್ರಾದಿಂದ ನೀರು: ವೇದಾವತಿ ನದಿಯಲ್ಲಿ ನೀರು ಖಾಲಿಯಾಗಿರುವುದರಿಂದ ಪಟ್ಟಣದ ಜನರಿಗೆ ಕುಡಿಯುವ ನೀರು ಒದಗಿಸಲು ಭದ್ರಾದಿಂದ ನೀರು ಹರಿಸುವುದು ಅಗತ್ಯವಾಗಿದೆ. ಶಾಸಕರು ಸರಕಾರದ ಹಂತದಲ್ಲಿ ಚರ್ಚಿಸಿ ನದಿಗೆ ನೀರು ಹರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಸಹಾಯವಾಣಿ : ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಹೊಸದುರ್ಗ ನಗರ ಪ್ರದೇಶದ ಜನತೆ 08199295095 ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.