ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ನದಿ ಮೂಲ, ಜಲ ಮೂಲಗಳ ಸಂರಕ್ಷಣೆ ಮಾಡುವುದು ನೀರಿನ ಬಳಕೆ ಮಾಡುವವರ ಆದ್ಯ ಕರ್ತವ್ಯ ಎಂದು ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಜಮೀರ್ ಅಹ್ಮದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶಯದಲ್ಲಿ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ನಡೆದ 163ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೀರಿನ ಮೌಲ್ಯದ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು. ಆ ಮೂಲಕ ಜಲ ಮೂಲಗಳ ಸಂರಕ್ಷಣೆ ಅಗತ್ಯವಾಗಿದೆ ಎಂದರು.ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯ ಕೆ.ಎಸ್. ಕೃಷ್ಣೇಗೌಡ ಮಾತನಾಡಿ, ನದಿ ತೊರೆಗಳ ಸ್ವಚ್ಛತಾ ಕಾಯಕ ಪ್ರತಿ ಪಂಚಾಯಿತಿ ಮಟ್ಟದಲ್ಲಿ ನಡೆಯಬೇಕಾಗಿದೆ. ಈ ಸಂಬಂಧ ಶಾಸಕರು ಸರ್ಕಾರದ ಮೂಲಕ ಗಮನ ಸೆಳೆಯಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹರಿಯುವ ಸ್ಥಳಗಳ ಬಗ್ಗೆ ಸರ್ವ ಕಾರ್ಯ ನಡೆಸಿ ಸಂರಕ್ಷಣೆಗೆ ಯೋಜನೆ ರೂಪಿಸಬೇಕಾಗಿದೆ ಎಂದರು.ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರು ಹಾಗೂ ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಸಂಚಾಲಕರೂ ಆಗಿರುವ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಟಿ.ಆರ್. ಪ್ರಭುದೇವ್ ಮಾತನಾಡಿ, ಸಂಘದ ಬೆಳ್ಳಿ ಹಬ್ಬ ಪ್ರಯುಕ್ತ ಈ ಸಾಲಿನಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ನದಿ ಸಂರಕ್ಷಣೆ ಬಗ್ಗೆ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ನಿರಂತರವಾಗಿ ಕೈಜೋಡಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.ಅರ್ಚಕ ಕೃಷ್ಣಮೂರ್ತಿ ಭಟ್ ಅವರಿಂದ ಅಷ್ಟೋತ್ತರ ಕುಂಕುಮಾರ್ಚನೆ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರಾಧ್ಯಾಪಕ ಡಾ. ಜಮೀರ್ ಅಹಮದ್ ಮತ್ತು ಕೆ ಎಸ್ ಕೃಷ್ಣೇಗೌಡ ಅವರನ್ನು ಆರತಿ ಬಳಗದ ಪರವಾಗಿ ಗೌರವಿಸಲಾಯಿತು.ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಡಿ ಆರ್ ಸೋಮಶೇಖರ್, ಮಂಡೆಪಂಡ ಬೋಸ್ ಮೊಣ್ಣಪ್ಪ, ಧರಣಿ ಸೋಮಯ್ಯ, ಪದ್ಮಾ ಪುರುಷೋತ್ತಮ್, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ ಕೆ ನಾಗರಾಜ ಶೆಟ್ಟಿ, ನಿರ್ದೇಶಕರಾದ ಕೆ ಜೆ ಶಿವರಾಜ್, ಮಹಮ್ಮದ್ ಮುಸ್ತಾಫಾ, ಶಂಸುದ್ದೀನ್, ಹೆಚ್ ವಿ ವಿನೋದ್, ಎಚ್ ಸಿ ಜಯಪ್ರಕಾಶ್ ಇದ್ದರು.