ಸಾರಾಂಶ
ಯಾವುದೇ ಕ್ಷಣದಲ್ಲಿ ಜಲಾಶಯದ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಬಹುದು.
ಹೊಸಪೇಟೆ: ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವು 1ಲಕ್ಷ 16 ಸಾವಿರ ಕ್ಯುಸೆಕ್‌ಗೆ ತಲುಪಿದ್ದು, ಜಲಾಶಯದಲ್ಲಿ 65.110 ಟಿಎಂಸಿ ನೀರು ಸಂಗ್ರಹವಾಗಿದೆ. ಯಾವುದೇ ಕ್ಷಣದಲ್ಲಿ ಜಲಾಶಯದ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಬಹುದು. ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ತುಂಗಭದ್ರಾ ಮಂಡಳಿ ಆಯಾ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಆಂಧ್ರಪ್ರದೇಶದ ಕರ್ನೂಲ, ಕಡಪ, ಅನಂತಪುರ ಮತ್ತು ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ಈಗ ತುಂಗಭದ್ರಾ ಜಲಾಶಯದಿಂದ ಒಮ್ಮೆಲೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟರೆ ನದಿಪಾತ್ರದ ಹಳ್ಳಿ, ಪಟ್ಟಣಗಳಿಗೆ ತೊಂದರೆಯಾಗಲಿದೆ. ಹಾಗಾಗಿ ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ಅಲರ್ಟ್ ಸಂದೇಶವನ್ನು ತುಂಗಭದ್ರಾ ಮಂಡಳಿ ರವಾನಿಸಿದೆ.ವಿಜಯನಗರ ಜಿಲ್ಲೆಯ ಹಂಪಿ, ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರುಗುಪ್ಪ ಭಾಗದಲ್ಲಿ ತೊಂದರೆ ಆಗಲಿದೆ. ನದಿಯಿಂದ ಒಮ್ಮೆಲೆ ನೀರು ಬಿಟ್ಟರೆ ಈ ಪ್ರದೇಶದಲ್ಲಿ ತೊಂದರೆ ಆಗಲಿದೆ. ಇನ್ನು ಮಂತ್ರಾಲಯ ಪ್ರದೇಶದಲ್ಲೂ ತೊಂದರೆ ಆಗಲಿದೆ. ನದಿಪಾತ್ರದ ಹಳ್ಳಿ, ಪಟ್ಟಣಗಳ ಜನರು ಎಚ್ಚರಿಕೆ ವಹಿಸಲು ತುಂಗಭದ್ರಾ ಮಂಡಳಿ ಸೂಚಿಸಿದೆ. ಇದರಿಂದ ಆಯಾ ಜಿಲ್ಲೆಗಳ ಜಿಲ್ಲಾಡಳಿತ, ಸ್ಥಳೀಯಾಡಳಿತಗಳು ತುಂಗಭದ್ರಾ ನದಿ ರಭಸವಾಗಿ ಹರಿಯಲಿದ್ದು, ಎಚ್ಚರಿಕೆ ವಹಿಸಲು ಡಂಗೂರ ಸಾರುತ್ತಿವೆ.