ಮುಸಲಧಾರೆ ಮಳೆಗೆ ಉಕ್ಕಿ ಹರಿದ ನದಿ, ಹಳ್ಳಗಳು

| Published : Jul 23 2024, 12:33 AM IST

ಸಾರಾಂಶ

ಖಾನಾಪುರತಾಲೂಕಿನಾದ್ಯಂತ ಸೋಮವಾರವೂ ಮಳೆಯ ಅರ್ಭಟ ಮುಂದುವರೆದಿದ್ದು, ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಹಳ್ಳಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿ ಆತಂಕ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನಾದ್ಯಂತ ಸೋಮವಾರವೂ ಮಳೆಯ ಅರ್ಭಟ ಮುಂದುವರೆದಿದ್ದು, ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಹಳ್ಳಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿ ಆತಂಕ ಮೂಡಿಸಿದೆ.

ಲೋಂಡಾ ಅರಣ್ಯದ ಸಾತನಾಳಿ-ಮಾಚಾಳಿ-ಮಾಂಜಪಪೈ ಗ್ರಾಮಗಳ ಮಧ್ಯೆ ಪಾಂಡರಿ ನದಿಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಈ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿದುಕೊಂಡಿವೆ. ಮಲಪ್ರಭಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ ಗಳ ಮೇಲೆ ನೀರು ಹರಿಯುತ್ತಿರುವ ಕಾರಣ ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ, ಕುಪ್ಪಟಗಿರಿ-ಕರಂಬಳ, ಅಸೋಗಾ-ಭೋಸಗಾಳಿ, ಮೋದೆಕೊಪ್ಪ-ಕೌಲಾಪುರವಾಡಾ ಚಿಕಲೆ ಮತ್ತು ಘೋಸೆ ಗ್ರಾಮಗಳ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಭೀಮಗಡ ಅಭಯಾರಣ್ಯದ ದೇಗಾಂವ-ಹೆಮ್ಮಡಗಾ ಮತ್ತು ಪಾಲಿ-ಮೆಂಡಿಲ್, ನೇರಸಾ-ಗವ್ವಾಳಿ, ಅಮಗಾಂವ-ಚಿಕಲೆ ಗ್ರಾಮಗಳ ನಡುವಿನ ರಸ್ತೆ ಮತ್ತು ಸೇತುವೆಯ ಮೇಲೆ ಹಲವು ಅಡಿಗಳಷ್ಟು ನೀರು ಹರಿಯುತ್ತಿದೆ.

ಸೋಮವಾರದವರೆಗೆ ಕಣಕುಂಬಿಯಲ್ಲಿ ೧೨.೨ ಸೆಂ.ಮೀ, ಖಾನಾಪುರ ಪಟ್ಟಣ, ಲೋಂಡಾ, ನಾಗರಗಾಳಿಯಲ್ಲಿ ೬.೫ ಸೆಂ.ಮೀ, ಜಾಂಬೋಟಿ, ಖಾನಾಪುರ, ಅಸೋಗಾಗಳಲ್ಲಿ ಸರಾಸರಿ ೫ ಸೆಂ.ಮೀ ಮತ್ತು ಸರಾಸರಿ ೨ ಸೆಂ.ಮೀ ಪ್ರಮಾಣದಲ್ಲಿ ಮಳೆಯಾಗಿದೆ.