ಸಾರಾಂಶ
ಚಿಕ್ಕೋಡಿ : ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಮುಂದುವರೆದಿರುವುದರಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿನ ಪಂಚ ನದಿಗಳಿಗೆ 1,05,723 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನದಿಗಳ ನೀರಿನ ಮಟ್ಟ ಭಾನುವಾರ ಮತ್ತೆ ಸುಮಾರು 2 ಅಡಿಯಷ್ಟು ಎರಿಕೆಯಾಗಿರುವುದರಿಂದ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಕೃಷ್ಣಾ ಮತ್ತು ದೂಧಗಂಗಾ ಸೇರಿದಂತೆ ಉಪನದಿಗಳಿಗೆ ನೀರು ಭಾರೀ ನೀರು ಹರಿದು ಬರುತ್ತಿರುವುದರಿಂದ ನದಿಗಳು ಉಕ್ಕಿ ಹರಿಯುತ್ತಿವೆ, ನದಿ ತೀರದ ರೈತರು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿದ್ದಾರೆ.
ದೂಧಗಂಗಾ ನದಿಗೆ 24,640 ಕ್ಯುಸೆಕ್ ಮತ್ತು ಕೃಷ್ಣಾ ನದಿಗೆ 81,083 ಕ್ಯುಸೆಕ್ ಹೀಗೆ ಒಟ್ಟು 1,05,723 ಕ್ಯುಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದ್ದು, ದೂಧಗಂಗಾ ಮತ್ತು ವೇದಗಂಗಾ ನದಿಗಳ ಸಮೀಪದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವೃತಗೊಳ್ಳುತ್ತಿವೆ.
ವೇದಗಂಗಾ ನದಿಯ ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ ಮತ್ತು ಜತ್ರಾಟ-ಭಿವಸಿ ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ ಮತ್ತು ಕೃಷ್ಣಾ ನದಿಯ ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಜಾಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಸದಲಗಾ-ಬೋರಗಾಂವ, ಬೇಡಕಿಹಾಳ-ಬೋರಗಾಂವ ಮತ್ತು ಯಕ್ಸಂಬಾ-ದಾನವಾಡ ಸೇತುವೆಗಳಿಂದ ಸಂಚಾರ ಎಂದಿನಂತೆ ಪ್ರಾರಂಭವಿದ್ದು, ಇದೆ ರೀತಿ ನೀರಿನ ಹರಿವು ಹೆಚ್ಚಾದಲ್ಲಿ ಎರಡು ದಿನಗಳಲ್ಲಿ ಮುಳುಗಡೆಯಾಗುವ ಸಾಧ್ಯತೆಗಳಿವೆ.