ಬೆಳ್ತಂಗಡಿ: ಉಕ್ಕಿ ಹರಿದ ನದಿಗಳು, ತೋಟಗಳು ಜಲಾವೃತ, ಗುಡ್ಡ ಕುಸಿತ

| Published : Jul 31 2024, 01:11 AM IST

ಬೆಳ್ತಂಗಡಿ: ಉಕ್ಕಿ ಹರಿದ ನದಿಗಳು, ತೋಟಗಳು ಜಲಾವೃತ, ಗುಡ್ಡ ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

ವೇಣೂರು ಪೇಟೆಯ ಮುಖ್ಯ ರಸ್ತೆಯ ಪಕ್ಕದಲ್ಲಿನ ಗುಡ್ಡದ ಮಣ್ಣು ಕುಸಿದು ಮಣ್ಣೆಲ್ಲಾ ರಸ್ತೆಯನ್ನು ಆವರಿಸಿದೆ. ಗುಡ್ಡದ ಮೇಲೆ ಪಂಚಾಯಿತಿ ಕಟ್ಟಡವಿದ್ದು ಅದು ಅಪಾಯದ ಸ್ಥಿತಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನದಿಂದ ಆರಂಭಗೊಂಡ ಮಳೆ ಮಂಗಳವಾರವೂ ಧಾರಾಕಾರವಾಗಿ ಸುರಿದ ಪರಿಣಾಮ ತಾಲೂಕಿನ ನೇತ್ರಾವತಿ, ಮೃತ್ಯುಂಜಯ, ಫಲ್ಗುಣಿ, ಕಪಿಲ, ಸೋಮಾವತಿ ನದಿಗಳು ಆಗಾಗ ಉಕ್ಕಿ ಹರಿದು ಹಲವಾರು ತೋಟಗಳು ಜಲಾವೃತಗೊಂಡವು. ಹಲವೆಡೆ ಗುಡ್ಡ ಕುಸಿತವಾದರೆ, ಇನ್ನು ಕೆಲವಡೆ ವಿದ್ಯುತ್ ಸಂಪರ್ಕ, ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದೆ. ನದಿ ತೀರದಲ್ಲಿ ಆತಂಕ: ಸೋಮವಾರ ರಾತ್ರಿ 8 ಗಂಟೆ ಬಳಿಕ ಏರಿದ ನದಿಗಳ ನೀರು, ಮಂಗಳವಾರ ಬೆಳಿಗ್ಗೆ 11ರ ತನಕವೂ ಹಾಗೆ ಇತ್ತು. ಮಧ್ಯಾಹ್ನ 1 ಗಂಟೆ ಬಳಿಕ ಮತ್ತೆ ನೀರಿನ ಮಟ್ಟ ಏರಿದೆ. ಇದರಿಂದ ನದಿ ತೀರದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡು ವಾರಗಳಿಂದ ಈ ನದಿಗಳ ನೀರಿನಲ್ಲಿ ಆಗಾಗ ಏರಿಕೆ ಕಂಡು ಬರುತ್ತಿರುತ್ತದೆ. ಕಳೆದ ದಿನಗಳಿಗೆ ಹೋಲಿಸಿದರೆ ಮಂಗಳವಾರ ಅತಿ ಹೆಚ್ಚಿನ ಪ್ರಮಾಣದ ನೀರು ಹರಿದು ಸಾಮಾನ್ಯ ಪ್ರವಾಹ ಸ್ಥಿತಿ ಉಂಟಾಗಿದೆ. ಮುಂಡಾಜೆ, ಕಲ್ಮಂಜ, ದಿಡುಪೆ, ಚಾರ್ಮಾಡಿ, ಗುರಿಪ್ಪಳ್ಳ, ಪಜಿರಡ್ಕ ಭಾಗಗಳಲ್ಲಿ ನದಿಗಳು ಗ್ರಾಮೀಣ ರಸ್ತೆಗಳನ್ನು ಆವರಿಸಿದ ಕಾರಣ ಸಂಚಾರ ವ್ಯತ್ಯಯ ಕಂಡು ಬಂತು. ಗುರುಪ್ಪಳ್ಳ ಸಮೀಪದ ಅಂಬಡಬೆಟ್ಟು ಕಲ್ಮಂಜದ ಕಿರು ಸೇತುವೆಗಳ ಮೇಲೆ ನದಿಗಳ ನೀರು ಆಗಾಗ ಹರಿದು ಸಂಪರ್ಕ ಕಡಿತಗೊಂಡಿತು. ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಸಮೀಪ ದೇವಸ್ಥಾನದ ಕೆಳಭಾಗದವರೆಗೂ ನೀರು ಆವರಿಸಿದಾಗ ಜಲ ಪೂಜೆ ನಡೆಸಿ ಆರತಿ ಬೆಳಗಾಯಿತು.

ನದಿಗಳ ವ್ಯಾಪ್ತಿಯ ಕಿಂಡಿ ಅಣೆಕಟ್ಟುಗಳಲ್ಲಿ ಭಾರಿ ಸಂಖ್ಯೆಯ ಮರ ಮತ್ತು ಜಮೆಗೊಂಡು ಸಮೀಪದ ತೋಟಗಳಿಗೆ ನದಿ ನೀರು ಆವರಿಸಿತು. ಚಾರ್ಮಾಡಿ ಘಾಟಿ ಸಹಿತ ಅಲ್ಲಲ್ಲಿ ಮರಗಳು ಉರುಳಿ, ಗುಡ್ಡ ಕುಸಿದು, ಮನೆಗಳಿಗೆ ಹಾನಿ, ಸಂಚಾರ ಸಮಸ್ಯೆ ಎದುರಾಯಿತು. ಮುಂಡಾಜೆಯಲ್ಲಿ ವಿಶ್ವನಾಥ ಬೆಂಡೆ, ರಾಧಾ ಹೆಬ್ಬಾರ್, ಕಲ್ಮಂಜದ ವಿಷ್ಣ ಹೆಬ್ಬಾರ್ ಅವರ ಅಡಕೆ ತೋಟಗಳಿಗೆ ನೀರು ನುಗ್ಗಿದೆ. ನದಿಯಾದ ಹೆದ್ದಾರಿ: ಉಜಿರೆ ಕೆಳಗಿನ ಪೇಟೆಯಲ್ಲಿ ಹೆದ್ದಾರಿಯುದ್ದಕ್ಕೂ ನೀರು ಹರಿದು ಹೆದ್ದಾರಿ ನದಿಯಂತಾಯಿತು. ಇದು ಆಗಾಗ ಮುಂದುವರಿದು ದಿನವಿಡೀ ವಾಹನ ಸವಾರರು ಭಾರಿ ಸಮಸ್ಯೆ ಎದುರಿಸಿದರು. ಇಲ್ಲಿನ ಕೆಲವು ಅಂಗಡಿಗಳಿಗೂ ನೀರು ನುಗ್ಗಿ ಸಾಕಷ್ಟು ತ್ಯಾಜ್ಯವು ಸಂಗ್ರಹಗೊಂಡಿತು.

ಓಡಿಲ್ನಾಳ ಗ್ರಾಮದ ಬಟ್ಟೆಮಾರ್ ದರ್ಣಪ್ಪ ಪೂಜಾರಿ ಅವರ ಮನೆಗೆ ಗುಡ್ಡ ಕುಸಿದು ಹಾನಿಯಾಗಿದೆ. ಮೇಲಂತಬೆಟ್ಟು ಶ್ರೀ ನಾಗಬ್ರಹ್ಮದೇವಸ್ಥಾನದ ಒಳಗೆ ನುಗ್ಗಿದ ನೀರಿನಿಂದಾಗಿ ಆವರಣ ಗೋಡೆ ಕುಸಿದಿದೆ.

ಪಡಂಗಡಿ ಗ್ರಾಮದ ಕುದ್ರೆಂಜ ಎಂಬಲ್ಲಿ ಸುರಿದ ಬಾರಿ ಮಳೆಗೆ ತೋಟಕ್ಕೆ ನುಗ್ಗಿದ ನೀರು ಕುವೆಟ್ಟು ಗ್ರಾಮದ ಮದ್ದಡ್ಕದಿಂದ ಪಡಂಗಡಿ ಪೊಯ್ಯೆಗುಡ್ಡೆ ಸಂಪರ್ಕ ರಸ್ತೆಯ ಕುದ್ರೆಂಜ ಸಮೀಪ ಘಟನೆ ನಡೆದಿದೆ. ಕೆಲವು ಕೃಷಿಕರ ತೋಟ ಜಲಾವೃತಗೊಂಡಿದೆ. ಕಡಿರುದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನರ್ಪ ಬೆಳ್ಳೂರು ಬೈಲು ಎಂಬಲ್ಲಿಯ ಬೇಬಿ ಎಂಬವರ ಮನೆಯು ಭಾರಿ ಗಾಳಿ ಮನೆಗೆ ಗೋಡೆ ಕುಸಿದು ಬಿದ್ದಿದ್ದು, ಪಕ್ಕದಲ್ಲಿರುವ ಅಣ್ಣನ ಮನೆಗೆ ಸ್ಥಳಾಂತರಿಸಲಾಯಿತು.

ಮಿತ್ತ ಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲ್ಲೂರು ಹಿರಿಯ ಪ್ರಾಥಮಿಕ ಶಾಲಾ ಪಕ್ಕದಲ್ಲಿ ಹಾಜಿರಾ ಅವರ ಮನೆಯ ಬಳಿ ಗುಡ್ಡ ಕುಸಿದು ಮಣ್ಣು ಮನೆಯ ಹತ್ತಿರದ ವರೆಗೂ ಬಂದಿರುತ್ತದೆ ಮತ್ತು ಶಾಲೆಯ ಕಂಪೌಂಡಿಗೂ ತೊಂದರೆಯಾಗುವ ಪರಿಸ್ಥಿತಿ ಇರುತ್ತದೆ. ಸರಳಿಕಟ್ಟೆ ಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಡ್ಡೆ ಕುಸಿದ ಕಾರಣ ಸಂಪೂರ್ಣ ಬಂದ್ ಆಗಿದೆ.

ಬಾರ್ಯ ಗ್ರಾಮದ ಪಂಜುಕ್ಕು ಎಂಬಲ್ಲಿ ಮಣಿಹಳ್ಳ - ಉಪ್ಪಿನಂಗಡಿ ಸಂಪರ್ಕ ಕಲ್ಪಿಸುವ ರಸ್ತೆಗೆ ಗುಡ್ಡೆ ಕುಸಿದು ಬಿದ್ದ ಕಾರಣ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಬದಲಿ ರಸ್ತೆಯನ್ನು ಪ್ರಯಾಣಿಕರು ಬಳಸುತ್ತಿದ್ದಾರೆ. ಗುಡ್ಡ ಕುಸಿತದಿಂದ ವಿದ್ಯುತ್ ಕಂಬಗಳು ಧರೆಗುಳಿದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಉಪ್ಪಿನಂಗಡಿ, ಪುತ್ತೂರು, ಬಿ.ಸಿರೋಡು ತೆರಳುವ ಪ್ರಯಣಿಕರು ಬದಲಿ ರಸ್ತೆ ಬಳಸುವಂತೆ ಸೂಚಿಸಲಾಗಿದೆ.

ಕಲ್ಮಂಜ ಗ್ರಾಮದ ಗುತ್ತುಬೈಲು ಸಂಪರ್ಕ ರಸ್ತೆಯ ಕಿರು ಸೇತುವೆ ತೀವ್ರ ಮಳೆಗೆ ಮುರಿದು ಸಂಪರ್ಕ ಕಡಿತಗೊಂಡಿದ್ದು.ಇದರಿಂದ ಸುಮಾರು 50 ಮನೆಗಳಿಗೆ ಸಂಪರ್ಕಕ್ಕೆ ತೊಂದರೆ ಆಗಿದೆ. ಘಟನಾ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಹಾಯಕ ಕಮಿಷನರ್, ತಹಸೀಲ್ದಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯತ್ ಕಾರ್ಯದರ್ಶಿ ಸ್ಥಳದಲ್ಲಿ ಉಪಸ್ಥಿತರಿದ್ದರು. ಉಜಿರೆ ಎಸ್‌ಡಿಎಂ ಆಸ್ಪತ್ರೆ ಬಳಿ ಕಂಪೌಂಡ್‌ ಕುಸಿತ

ಉಜಿರೆ ಎಸ್.ಡಿ.ಎಂ ಆಸ್ಪತ್ರೆ ಬಳಿಯ ಕಂಪೌಂಡ್ ಕುಸಿತದಿಂದಾಗಿ ಅದರ ಅಡಿಯಲ್ಲಿದ್ದ ಸುಮಾರು 10ಕ್ಕೂ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಆವರಣ ಗೋಡೆಯ ಮೇಲಿನ ಭಾಗದಲ್ಲಿರುವ ಮನೆಯು ಅಪಾಯದ ಸ್ಥಿತಿಯಲ್ಲಿದೆ. ತಾಲೂಕಿನ ಅನೇಕ ಕಡೆಗಳಲ್ಲಿ ಗುಡ್ಡ ಕುಸಿತದಿಂದ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಉಪ್ಪಿನಂಗಡಿ, ಪುತ್ತೂರು, ಬಿ.ಸಿ. ರೋಡಿಗೆ ತೆರಳುವ ಪ್ರಯಾಣಿಕರು ಬದಲಿ ರಸ್ತೆ ಬಳಸುವಂತೆ ಸೂಚಿಸಲಾಗಿದೆ.

ವೇಣೂರು ಪೇಟೆಯ ಮುಖ್ಯ ರಸ್ತೆಯ ಪಕ್ಕದಲ್ಲಿನ ಗುಡ್ಡದ ಮಣ್ಣು ಕುಸಿದು ಮಣ್ಣೆಲ್ಲಾ ರಸ್ತೆಯನ್ನು ಆವರಿಸಿದೆ. ಗುಡ್ಡದ ಮೇಲೆ ಪಂಚಾಯಿತಿ ಕಟ್ಟಡವಿದ್ದು ಅದು ಅಪಾಯದ ಸ್ಥಿತಿಯಲ್ಲಿದೆ.