ಸಾರಾಂಶ
ರಸ್ತೆ ಸಂಚಾರ ಸುರಕ್ಷತಾ ಸಪ್ತಾಹ । ಚಿಕ್ಕಮಗಳೂರಿನಲ್ಲಿ ಜಾಥಾಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಳೆದ ಸಾಲಿನಲ್ಲಿ ಸಂಘ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಿ ದ್ದರಿಂದ ಶೇ. 10 ರಷ್ಟು ರಸ್ತೆ ಅಪಘಾತ ಪ್ರಕರಣಗಳು ಇಳಿಮುಖವಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ, ರೋಟರಿ ಕ್ಲಬ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಹಯೋಗದಲ್ಲಿ ಸೋಮವಾರ ರಸ್ತೆ ಸಂಚಾರ ಸುರಕ್ಷತಾ ಸಪ್ತಾಹದ ಅಂಗವಾಗಿ ತಾಲೂಕು ಕಚೇರಿಯಿಂದ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ವಾಹನ ಸವಾರರಿಗೆ ದಂಡ ವಿಧಿಸಿದರೂ ಅಪಘಾತ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ, ಹೀಗಾಗಿ ವಿವಿಧ ಸಂಸ್ಥೆಗಳ ಸಹಕಾರದಿಂದ ನಗರದ ವಿವಿಧ ವೃತ್ತಗಳಲ್ಲಿ ವಿದ್ಯಾರ್ಥಿಗಳಿಂದ ಸುರಕ್ಷತಾ ಸಪ್ತಾಹ ಅರಿವು ಮೂಡಿಸಿದ ಕಾರಣ ಶೇ.10ರಷ್ಟು ಮಂದಿ ಪ್ರಾಣ ಉಳಿಯಲು ಸಾಧ್ಯವಾಗಿದೆ ಎಂದರು.
ಸಂಚಾರಿ ಠಾಣೆಯಲ್ಲಿ ಕಳೆದ 2023ನೇ ಸಾಲಿನಲ್ಲಿ 58 ಸಾವಿರ ಹಾಗೂ 2024 ರಲ್ಲಿ 46 ಸಾವಿರ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿತ್ತು. ಈ ನಡುವೆ ಸುಮಾರು 12 ಸಾವಿರ ಪ್ರಕರಣಗಳು ಕಡಿಮೆಯಾಗಿವೆ. ಹಾಗಾಗಿ ಕಳೆದ ಬಾರಿ ಯಂತೆ ಶಾಲಾ ವಿದ್ಯಾರ್ಥಿಗಳಿಗೆ ಸುರಕ್ಷತಾ ಅರಿವು ಮೂಡಿಸಿ ತಮ್ಮ ಬಡಾವಣೆ, ಕುಟುಂಬ ಹಾಗೂ ಸ್ನೇಹಿತರಲ್ಲಿ ಹಂಚಿಕೊಳ್ಳಲು ಸೂಚಿಸಲಾಗುತ್ತಿದೆ ಎಂದರು.ಕಳೆದ ವರ್ಷ ಜಿಲ್ಲೆಯಲ್ಲಿ 24 ಕೊಲೆಗಳಾದರೆ, 236 ಅಪಘಾತ ಪ್ರಕರಣದಲ್ಲಿ ಸಾವು ಸಂಭವಿಸಿದೆ. ಹೀಗಾಗಿ ಹೆಚ್ಚಿನ ಮಹತ್ವವನ್ನು ಸಂಚಾರ ಸುರಕ್ಷತಾ ಬಗ್ಗೆ ನೀಡುತ್ತಿದೆ. ಅಲ್ಲದೇ ಶಾಲಾ ಮಕ್ಕಳನ್ನು ಸಪ್ತಾಹದಲ್ಲಿ ತೊಡಗಿಸಿ, ಆಯಾ ವೃತ್ತ ಗಳಲ್ಲಿ ಸವಾರರಿಗೆ ಅರಿವು ಮೂಡಿಸಿ ಅಪಘಾತ ಪ್ರಕರಣಗಳ ತಡೆಗಟ್ಟಲು ಮುಂದಾಗಿದ್ದೇವೆ ಎಂದು ಹೇಳಿದರು.
ದ್ವಿಚಕ್ರ ವಾಹನದಲ್ಲಿ ಸವಾರರು ಹೆಲ್ಮೆಟ್ ಧರಿಸಬೇಕು. ಡ್ರೈವಿಂಗ್ ವೇಳೆ ಸೀಟ್ ಬೆಲ್ಟ್ ಹಾಕಬೇಕು. ತ್ರಿಬಲ್ ರೈಡಿಂಗ್ ಹಾಗೂ ಸಂಚರಿಸುವ ವೇಳೆ ಮೊಬೈಲ್ ಬಳಕೆ ಮಾಡಬಾರದೆಂಬ ನಿಯಮಗಳನ್ನು ಮಕ್ಕಳ ಮೂಲಕ ಸವಾರರಿಗೆ ಅರಿವು ಮೂಡಿಸಿದರೆ ಸವಾರರು ಖಂಡಿತ ಬದಲಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಒಂದು ವಾರಗಳ ಕಾಲ ರಸ್ತೆ ಸುರಕ್ಷತಾ ಸಪ್ತಾಹವನ್ನು ಶಾಲಾ ವಿದ್ಯಾರ್ಥಿಗಳ ಮುಖಾಂತರ ಹಮ್ಮಿಕೊಂಡು ಸವಾರರಿಗೆ ಅರಿವು ಮೂಡಿಸಲಾಗುವುದು ಎಂದರು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಪ್ರತಿಯೊಬ್ಬ ವಾಹನ ಸವಾರರು ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಮುಖ್ಯ. ನಿಯಮ ಮೀರಿ ಸವಾರರು ಸಾಗಿದರೆ ಅಪಘಾತಗಳಲ್ಲಿ ಸಿಲುಕಿ ಪ್ರಾಣ ಕಳೆದು ಕೊಳ್ಳುವ ಜೊತೆಗೆ ಇಡೀ ಕುಟುಂಬವನ್ನು ಅನಾಥರಾಗಿಸುವ ಸಂಭವವಿದೆ ಎಂದು ಎಚ್ಚರಿಸಿದರು.ಇದೇ ವೇಳೆ ಆರು ಶಾಲೆಗಳಿಂದ ಆಗಮಿಸಿದ್ಧ 250 ವಿದ್ಯಾರ್ಥಿಗಳು ತಾಲೂಕು ಕಚೇರಿಯಿಂದ ಅಜಾದ್ ಪಾರ್ಕ್ ಸರ್ಕಲ್ ವರೆಗೆ ಹಮ್ಮಿಕೊಂಡಿದ್ದ ಜಾಥಾದಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮುಖ್ಯ ಆಯುಕ್ತ ಎಂ.ಎನ್. ಷಡಕ್ಷರಿ, ಕಾರ್ಯದರ್ಶಿ ನೀಲಕಂಠಚಾರ್, ಸಂಘಟಕ ಕಿರಣ್‌ಕುಮಾರ್, ರೋಟರಿ ಕ್ಲಬ್ ಸದಸ್ಯರು ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಹಾಜರಿದ್ದರು. 13 ಕೆಸಿಕೆಎಂ 1ರಸ್ತೆ ಸಂಚಾರ ಸುರಕ್ಷತಾ ಸಪ್ತಾಹದ ಅಂಗವಾಗಿ ಚಿಕ್ಕಮಗಳೂರಿನ ತಾಲೂಕು ಕಚೇರಿಯಿಂದ ಹೊರಟ ಜಾಥಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಚಾಲನೆ ನೀಡಿದರು. ಎಎಸ್ಪಿ ಕೃಷ್ಣಮೂರ್ತಿ, ಎ.ಎನ್. ಮಹೇಶ್, ಎಂ.ಎನ್. ಷಡಕ್ಷರಿ ಇದ್ದರು.