ಸಾರಾಂಶ
ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಅಪಘಾತದಲ್ಲಿ ಮೃತಪಟ್ಟ ಮಹಿಳೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲೂಕಿನ ಚಳಗೇರಿ ಟೋಲ್ ನಾಕಾ ಬಳಿ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ರಾಣಿಬೆನ್ನೂರು: ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಅಪಘಾತದಲ್ಲಿ ಮೃತಪಟ್ಟ ಮಹಿಳೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲೂಕಿನ ಚಳಗೇರಿ ಟೋಲ್ ನಾಕಾ ಬಳಿ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.ಶನಿವಾರ ಚಳಗೇರಿ ಗ್ರಾಮಕ್ಕೆ ಬಂದು ಅಂತ್ಯಕ್ರಿಯೆ ಮುಗಿಸಿಕೊಂಡು ದಾವಣಗೆರೆಗೆ ವಾಪಸ್ ಹೋಗುವಾಗ ಚಳಗೇರಿ ಗ್ರಾಮದ ಟೋಲ್ ನಾಕಾದ ಹತ್ತಿರ ದಾವಣಗೆರೆ ಕಡೆಯಿಂದ ಕ್ಯಾಂಟರ್ ಗೂಡ್ಸ್ ವಾಹನ ಹಾಗೂ ಆಟೋ ಮುಖಾಮುಖಿ ಅಪಘಾತದಲ್ಲಿ ಬಸಮ್ಮ ಬಸಪ್ಪ ಕಾಟೇನಹಳ್ಳಿ ಮೃತಪಟ್ಟಿದ್ದರು.
ಅವರ ಶವವನ್ನು ಟೋಲ್ ಗೇಟ್ ಹತ್ತಿರ ತಂದು, ರಸ್ತೆ ಅಪಘಾತವಾಗಲು ಸರ್ವೀಸ್ ರಸ್ತೆ ಕಾಮಗಾರಿ ವಿಳಂಬ ಮತ್ತು ಕಳಪೆ ಕಾಮಗಾರಿ ಕಾರಣ. ಆದ್ದರಿಂದ ಹೆದ್ದಾರಿ ಪ್ರಾಧಿಕಾರದವರು ಪರಿಹಾರ ನೀಡಬೇಕು ಎಂದು ಕುಟುಂಬದವರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಈ ಸಮಯದಲ್ಲಿ ರಾಜು ಪಾಟೀಲ ಮಾತನಾಡಿ, ಸಾಕಷ್ಟು ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸುವಂತೆ ಅನೇಕ ಬಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದರೂ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ವಿಳಂಬ ನೀತಿಯಿಂದ ಅಪಘಾತವಾಗಿದೆ. ಕೂಡಲೇ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಸ್ಥಳಕ್ಕೆ ಅಗಮಿಸಿದ ಡಿವೈಎಸ್‌ಪಿ ಗಿರೀಶ ಭೋಜಣ್ಣವರ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಸೂಕ್ತಕ್ರಮ ಕೈಗೊಳ್ಳುವ ಭರವಸೆ ನೀಡಿದರು.