ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಹೊಸಳ್ಳಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಹನುಮವ್ವ (65) ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಾಲೂಕಿನ ಹೊಸಳ್ಳಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಟ್ರ್ಯಾಕ್ಟರಿಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಟ್ರ್ಯಾಕ್ಟರ್ ಪಲ್ಟಿಯಾಗಿ, ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದರು. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮತ್ತೊರ್ವರು ಮೃತಪಟ್ಟಿದ್ದಾರೆ.ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗಿ, ಮರಳಿ ಬರುವಾಗ ಘಟನೆ ನಡೆದಿತ್ತು. ಮೃತರು ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದವರಾಗಿದ್ದಾರೆ.
ಪರಿಹಾರಕ್ಕೆ ಆಗ್ರಹ:ಜಿಲ್ಲಾಸ್ಪತ್ರೆಗೆ ಮಾಜಿ ಸಚಿವ ಹಾಲಪ್ಪ ಆಚಾರ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಬಸವರಾಜ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಿಸಿದರು.
ಪ್ರತಿಯೊಬ್ಬರಿಗೂ ಧೈರ್ಯ ತುಂಬಿ ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ದೇವರಿಗೆ ಹೋದವರು ಈ ರೀತಿಯಾಗುತ್ತಾರೆ ಎಂದರೇ ಏನರ್ಥ. ಟ್ರ್ಯಾಕ್ಟರಿನಲ್ಲಿ ತಮ್ಮ ಪಾಡಿಗೆ ಹೋಗುವಾಗ ಹಿಂದಿನಿಂದ ಬಸ್ ಡಿಕ್ಕಿ ಹೊಡೆದು ದುರಂತ ಸಂಭವಿಸಿದರೆ ಹೇಗೆ ಎಂದು ಮರುಗಿದರು.ರಾಜ್ಯ ಸರ್ಕಾರ ಮೃತ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.ಸಾಣಾಪುರ ಜಲಾಶಯದಲ್ಲಿ ಈಜಲು ಹೋದ ಯುವಕ ಸಾವು:ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದ ಬಳಿ ಇರುವ ತುಂಗಭದ್ರಾ ಸಮಾನಂತರ ಜಲಾಶಯದಲ್ಲಿ ಈಜಲು ಹೋಗಿದ್ದ ಯುವಕ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ತಾಲೂಕಿನ ಕುಣಿಕೇರಿ ಗ್ರಾಮದ ನಿವಾಸಿ ಮಂಜುನಾಥ (19) ಚನ್ನಪ್ಪಗೌಡ ಮೃತ ಯುವಕ. ಈತ ತನ್ನ ಗೆಳೆಯರೊಂದಿಗೆ ಪ್ರವಾಸಕ್ಕೆ ತೆರಳಿ ಎಲ್ಲ ಸ್ಥಳ ನೋಡಿದ ನಂತರ ಸಾಣಾಪೂರ ಹತ್ತಿರ ಇರುವ ತುಂಗಭದ್ರಾ ಎಡದಂಡೆ ಕಾಲುವೆಯ ಸಮಾನಂತರ ಜಲಾಶಯದಲ್ಲಿ ಈಜಲು ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ.ಪಂಪಾ ಸರೋವರ, ಆನೆಗೊಂದಿ, ಅಂಜನಾದ್ರಿ ಬೆಟ್ಟದ ವೀಕ್ಷಣೆಗೆ ಆಗಮಿಸಿದ್ದ ಇವರು ಬಳಿಕ ಈಜಲು ಹೋಗಿದ್ದರು. ಮಂಜುನಾಥ ನೀರಿನಲ್ಲಿ ನಾಪತ್ತೆಯಾದ ಸುದ್ದಿ ತಿಳಿದ ಕೂಡಲೇ ಸ್ಳಳಕ್ಕೆ ಗ್ರಾಮೀಣ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದು, ಶೋಧನೆ ನಡೆಸಿದಾಗ ಮಂಜುನಾಥನ ಶವ ಪತ್ತೆಯಾಗಿದೆ.
ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.