ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು 2025ನೇ ಸಾಲಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಂದ ₹2.84 ಕೋಟಿ ದಂಡ ಸಂಗ್ರಹ: ಎಸ್ಪಿ ಮಾಹಿತಿ
ಕನ್ನಡಪ್ರಭ ವಾರ್ತೆ ಕಾರವಾರಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು 2025ನೇ ಸಾಲಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬರೋಬ್ಬರಿ ₹2.84 ಕೋಟಿ ದಂಡ ವಸೂಲಿ ಮಾಡಲಾಗಿದ್ದು, ಅಪರಾಧ ಚಟುವಟಿಕೆಗಳಿಗೆ ಕಡವಾಣ ಹಾಕುವಲ್ಲಿ ಇಲಾಖೆ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ತಿಳಿಸಿದರು.ನಗರದ ಎಸ್ಪಿ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಾರ್ಷಿಕ ಅಪರಾಧ ವರದಿ ಬಿಡುಗಡೆ ಮಾಡಿ, ಪೊಲೀಸ್ ಇಲಾಖೆಯ ಪ್ರಮುಖ ಸಾಧನೆ ವಿವರಿಸಿದರು.ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಪೊಲೀಸರು ತೆಗೆದುಕೊಂಡ ಕಠಿಣ ಕ್ರಮಗಳಿಂದಾಗಿ, ಅಪಘಾತದ ಸಾವಿನ ಸಂಖ್ಯೆ 2024ರಲ್ಲಿ 264 ಇದ್ದದ್ದು 2025ರಲ್ಲಿ 214ಕ್ಕೆ ಇಳಿಕೆಯಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಸಮರ ಸಾರಲಾಗಿದ್ದು, ಈ ಪ್ರಕರಣಗಳ ಸಂಖ್ಯೆ 332ರಿಂದ 1139ಕ್ಕೆ ಏರಿಕೆಯಾಗಿದೆ. ಒಟ್ಟು 58,425 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ₹2.84 ಕೋಟಿ ದಂಡ ಸಂಗ್ರಹಿಸಲಾಗಿದೆ ಹಾಗೂ 810 ಚಾಲನಾ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ 332 ಜನರ ಪೈಕಿ 301 ಜನರನ್ನು ಪತ್ತೆಹಚ್ಚಲಾಗಿದೆ. ವಿಶೇಷವೆಂದರೆ, 5ರಿಂದ 10 ವರ್ಷಗಳಷ್ಟು ಹಳೆಯದಾದ 11 ಕೋಲ್ಡ್ ಕೇಸ್ ಭೇದಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಮಿಸ್ಸಿಂಗ್ ಪರ್ಸನ್ ಯೂನಿಟ್ ರಚಿಸಲಾಗಿದೆ. ಇನ್ನು ಶಾಂತಿ ಕದಡುವ ರೌಡಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗಿದ್ದು, ಅಂಕೋಲಾದ ಪ್ರಶಾಂತ್ ಹಾಗೂ ಮುಂಡಗೋಡಿನ ಕಿರಣ್ ಸೋಲಂಕಿ ಎಂಬುವವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಮಟ್ಕಾ 430 ಕೇಸ್, ಜೂಜಾಟ 146 ಕೇಸ್ ಹಾಗೂ ಮಾದಕ ವಸ್ತು ಮಾರಾಟದ 295 ಪ್ರಕರಣಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. 12 ಕೆ.ಜಿ.ಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಗದೀಶ ಇದ್ದರು.ಗಂಭೀರ ಅಪರಾಧ ಇಳಿಕೆ
ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದ್ದು, 37ರಿಂದ 12ಕ್ಕೆ ಕುಸಿದಿವೆ. ಇನ್ನು ಕಳ್ಳತನ ಪ್ರಕರಣಗಳಲ್ಲಿ ಆಸ್ತಿ ಮರುಪಡೆಯುವಿಕೆ ಪ್ರಮಾಣ ಶೇ. 54.56ಕ್ಕೆ ಏರಿಕೆಯಾಗಿರುವುದು ಪೊಲೀಸ್ ಇಲಾಖೆಯ ತನಿಖಾ ದಕ್ಷತೆಗೆ ಸಾಕ್ಷಿಯಾಗಿದೆ. ಮನೆ ಮನೆ ಪೊಲೀಸ್ ಅಭಿಯಾನದ ಮೂಲಕ ಶೇ.100ರಷ್ಟು ಮನೆಗಳನ್ನು ಸಂಪರ್ಕಿಸಿ ಜನರ ಸಮಸ್ಯೆ ಆಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.