ರಸ್ತೆ ಅಪಘಾತ: ಹಿರಿಯ ವಕೀಲ ಕೆ.ಎಸ್.ದೇಶಪಾಂಡೆ ಸಾವು

| Published : Mar 27 2024, 01:03 AM IST

ಸಾರಾಂಶ

ಖಾನಾಪುರ: ಬೆಳಗಾವಿ ಜಿಲ್ಲೆಯ ಖಾನಾಪುರ ಬಳಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಬಾಗಲಕೋಟೆಯ ಹಿರಿಯ ವಕೀಲ, ಬ್ರಾಹ್ಮಣ ಮಹಾಸಭಾ ಘಟಕದ ಅಧ್ಯಕ್ಷ ಕೆ.ಎಸ್‌. ದೇಶಪಾಂಡೆ (72) ಸಾವಿಗೀಡಾಗಿದ್ದು, ಅವರ ಪತ್ನಿ ಸೇರಿದಂತೆ ಕುಟುಂಬದ 7 ಜನರು ಗಂಭೀರ ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಖಾನಾಪುರ

ಬೆಳಗಾವಿ ಜಿಲ್ಲೆಯ ಖಾನಾಪುರ ಬಳಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಬಾಗಲಕೋಟೆಯ ಹಿರಿಯ ವಕೀಲ, ಬ್ರಾಹ್ಮಣ ಮಹಾಸಭಾ ಘಟಕದ ಅಧ್ಯಕ್ಷ ಕೆ.ಎಸ್‌. ದೇಶಪಾಂಡೆ (72) ಸಾವಿಗೀಡಾಗಿದ್ದು, ಅವರ ಪತ್ನಿ ಸೇರಿದಂತೆ ಕುಟುಂಬದ 7 ಜನರು ಗಂಭೀರ ಗಾಯಗೊಂಡಿದ್ದಾರೆ.

ಕೆ.ಎಸ್‌. ದೇಶಪಾಂಡೆ ಅವರ ಪತ್ನಿ ರಾಧಿಕಾ ದೇಶಪಾಂಡೆ (65), ಮಗ (ಕಾರು ಚಾಲಕ) ಸಾಗರ ದೇಶಪಾಂಡೆ (30), ಮೊಮ್ಮಗ ಸಾಚಿತ್ ದೇಶಪಾಂಡೆ (7) ಗಂಭೀರವಾಗಿ ಗಾಯಗೊಂಡಿದ್ದಾರೆ. ಪತ್ನಿ ರಾಧಿಕಾ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸಾನ್ವಿ ದೇಶಪಾಂಡೆ (12), ಆನಂದ ದೇಶಪಾಂಡೆ (60), ಶಿಲ್ಪಾ ಕುಲಕರ್ಣಿ (45), ಸ್ವಾತಿ ಫಡ್ನೀಸ್ (50) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆ.ಎಸ್.ದೇಶಪಾಂಡೆ ಅವರ ಕುಟುಂಬ ದಾಂಡೇಲಿಗೆ ಎಕ್ಸ್‌ಯುವಿ 700 ಕಾರಿನಲ್ಲಿ ಚಾರಣಕ್ಕೆ ತೆರಳಿದ್ದರು. ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಬಾಗಲಕೋಟೆಯತ್ತ ಮರಳುತ್ತಿದ್ದಾಗ ಹೊಣಕಲ್ ಬಳಿ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಪರಿಣಾಮ ಘಟನೆ ಸಂಭವಿಸಿದೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಲಕೋಟೆಯಲ್ಲಿ ಶೋಕ:

ಬಾಗಲಕೋಟೆ ನಗರದ ಹಿರಿಯ ವಕೀಲ, ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಬ್ರಾಹ್ಮಣ ಸಮಾಜ ಹಾಗೂ ಅವರ ಆಪ್ತವಲಯ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.

ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ವಿದ್ಯಾ ಪ್ರಸಾರಕ ಮಂಡಳಿ ಸೇರಿದಂತೆ ನಗರದಲ್ಲಿರುವ ಬಹುತೇಕ ರಾಷ್ಟ್ರೀಕೃತ ಬ್ಯಾಂಕಗಳಿಗೆ ಅವರು ಕಾನೂನು ಸಲಹೆಗಾರರಾಗಿದ್ದು, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೂ ಕೆಲಕಾಲ ಕಾನೂನು ಸಲಹೆಗಾರರಾಗಿದ್ದ ಅವರು ಸಂತ್ರಸ್ತರ ವಿಚಾರದಲ್ಲಿ ಕಾನೂನು ತೊಡಕುಗಳನ್ನು ನಿವಾರಿಸುವಲ್ಲಿ ತಜ್ಞರಾಗಿದ್ದರು.

ನವನಗರದಲ್ಲಿರುವ ಅಖಿಲ ಭಾರತ ಮಧ್ವಮಹಾಮಂಡಳಕ್ಕೂ ಅಧ್ಯಕ್ಷರಾಗಿದ್ದ ಅವರು ಸಮಾಜಮುಖಿ ಚಿಂತನೆಗಳ ಮೂಲಕ ಹೆಸರು ಮಾಡಿದ್ದರು. ಬ್ರಾಹ್ಮಣ ಸಮುದಾಯದ ಯಾವುದೇ ಕೆಲಸಗಳಾಗಿದ್ದರೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದರು.

ಸಂತಾಪ: ಬವಿವ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರಿಗೆ ಆಪ್ತ ಒಡನಾಡಿಗಳಾಗಿದ್ದರು. ಕೆ.ಎಸ್. ದೇಶಪಾಂಡೆ ಅವರ ನಿಧನ ವೈಯಕ್ತಿಕವಾಗಿ ನನಗೆ ತೀವ್ರ ದುಃಖ ತಂದಿದೆ ಎಂದು ಚರಂತಿಮಠ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಉಪಾಧ್ಯಕ್ಷ ಗಿರೀಶ ಮಸೂರಕರ, ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ, ವಿದ್ಯಾಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷ ಶ್ರೀಲತಾ ಹೆರೆಂಜಲ್ ಸೇರಿ ಗಣ್ಯರು ದೇಶಪಾಂಡೆ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.