ರಸ್ತೆ ಅಪಘಾತ: ಮೂವರು ಯುವಕರ ದುರ್ಮರಣ

| Published : Oct 24 2025, 01:00 AM IST

ಸಾರಾಂಶ

ಕನಕಪುರ: ಆಟೋ ಮತ್ತು ಟೆಂಪೋ ನಡುವಿನ ಮುಖಾಮುಖಿ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ಓರ್ವ ಬದುಕುಳಿದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಮೈಸೂರು ರಸ್ತೆಯ ಹೊನ್ನಿಗನಹಳ್ಳಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಕನಕಪುರ: ಆಟೋ ಮತ್ತು ಟೆಂಪೋ ನಡುವಿನ ಮುಖಾಮುಖಿ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ಓರ್ವ ಬದುಕುಳಿದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಮೈಸೂರು ರಸ್ತೆಯ ಹೊನ್ನಿಗನಹಳ್ಳಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಉತ್ತರ ಕರ್ನಾಟಕದ ವಿಜಯಪುರ, ಯಾದಗಿರಿ, ಕಲ್ಬುರ್ಗಿ ಮೂಲದ ದರ್ಶನ್(19), ಶಿವಲಿಂಗ(17), ಪ್ರಜ್ವಲ್(18) ಮೃತಪಟ್ಟವರು. ಭೀಮ(14) ಬದುಕುಳಿದಿದ್ದು ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇವರೆಲ್ಲರೂ ಬೆಂಗಳೂರಿನಲ್ಲಿ ವಾಸವಿದ್ದು ದೀಪಾವಳಿ ರಜೆ ಇದ್ದುದರಿಂದ ದರ್ಶನ್ ತನ್ನ ಸ್ನೇಹಿತನ ಆಟೋದಲ್ಲಿ ಶಿವಲಿಂಗ, ಪ್ರಜ್ವಲ್ ಮತ್ತು ಭೀಮನನ್ನು ಕರೆದುಕೊಂಡು ತಾಲೂಕಿನ ಕಬ್ಬಾಳು ಹಾಗೂ ಮುತ್ತತ್ತಿ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿಕೊಂಡು ಬರುವಾಗ ಹೊನ್ನಿಗನಹಳ್ಳಿ ಬಳಿ ಮುಂದೆ ಹೋಗುತ್ತಿದ್ದ ವಾಹನವನ್ನ ಓವರ್ ಟೇಕ್ ಮಾಡಿ ಮುಂದೆ ಹೋಗಲು ಪ್ರಯತ್ನಿಸಿದಾಗ ಎದುರುಗಡೆ ಬರುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದಿದ್ದಾರೆನ್ನಲಾಗಿದೆ.

ಆಟೋ ಸಂಪೂರ್ಣ ಜಖಂಗೊಂಡಿದ್ದು, ಆಟೋ ಓಡಿಸುತ್ತಿದ್ದ ದರ್ಶನ್, ಹಿಂಬದಿಯಲ್ಲಿ ಕುಳಿತಿದ್ದ ಶಿವಲಿಂಗ, ಪ್ರಜ್ವಲ್, ಭೀಮ ತೀವ್ರ ಗಾಯಗೊಂಡಿದ್ದರು. ಶಿವಲಿಂಗ ಮತ್ತು ಪ್ರಜ್ವಲ್ ಸ್ಥಳದಲ್ಲೇ ಸಾವನ್ನಪ್ಪಿದು ದರ್ಶನ್ ದಯಾನಂದ್ ಸಾಗರ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಪೊಲೀಸರು ಮೃತ ದೇಹಗಳ ಮರಣೋತ್ತರ ಪರೀಕ್ಷೆ ಮಾಡಿಸಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ಭೀಮನಿಗೆ ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಎರಡು ವಾಹನಗಳನ್ನು ವಶಕ್ಕೆ ಪಡೆದು ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿವೈಎಸ್ಪಿ ಗಿರಿ, ವೃತ್ತ ನಿರೀಕ್ಷಕ ವಿಕಾಸ್‌ಗೌಡ, ಎಸ್‌ಐ ಹರೀಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.