ವರ್ಷದೊಳಗೆ ಕಿತ್ತುಹೋದ ಡಾಂಬರ್ ರಸ್ತೆ !

| Published : Sep 17 2025, 01:06 AM IST

ಸಾರಾಂಶ

ಭೀಷ್ಮ ಕೆರೆ ದಂಡೆಯ ಮೇಲಿರುವ ದ್ವಿಪಥ ರಸ್ತೆಯಂತೂ ಸಂಚಾರಕ್ಕೆ ಬರದಂತಾಗಿದೆ. ವರ್ಷದ ಹಿಂದಷ್ಟೇ ಪ್ರಮುಖ ರಸ್ತೆ ಡಾಂಬರೀಕರಣ ಮಾಡಲಾಗಿತ್ತು

ಗದಗ: ನಗರದ ಹೃದಯ ಭಾಗದಲ್ಲಿರುವ ಪ್ರಮುಖ ರಸ್ತೆಗಳೆಲ್ಲ ಗುಂಡಿ ಬಿದ್ದು ಹೋಗಿದ್ದು. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಸಂಚರಿಸುವುದು ತೀರಾ ಕಷ್ಟ ಸಾಧ್ಯವಾಗಿದೆ.

ಈ ರಸ್ತೆಗಳ ಅಭಿವೃದ್ಧಿಗೆ ಗುತ್ತಿಗೆ ಪಡೆದ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆ ನಿರ್ಮಾಣವಾಗಿ ವರ್ಷದೊಳಗೇ ಸಂಚಾರಕ್ಕೆ ಬರದಂತಾಗಿದೆ. ಕಳಪೆ ಕಾಮಗಾರಿಯ ಕುರುಹಾಗಿ ರಸ್ತೆಯಲ್ಲಿ ಗುಂಡಿಗಳು ರಾರಾಜಿಸುತ್ತಿವೆ.

ನಗರದ ಮುಳುಗುಂದ ನಾಕಾದಿಂದ ಬೆಟಗೇರಿ ಮುಖ್ಯ ರಸ್ತೆಯವರೆಗೂ ನೂರಾರು ಗುಂಡಿ ಬಿದ್ದಿವೆ. ವರ್ಷದ ಹಿಂದಷ್ಟೆ ಕೋಟ್ಯಂತರ ವೆಚ್ಚದಲ್ಲಿ ಈ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಅದು ವರ್ಷ ಗತಿಸುವುದರೊಳಗೆ ಹಾಳಾಗಿ ಹೋಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಗದಗ ನಗರಕ್ಕೆ ಬಂದಾಗಲೆಲ್ಲ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಕನಿಷ್ಠ ಅವರಾದರೂ ಈ ಸಮಸ್ಯೆಗೆ ಸ್ಪಂದಿಸದೇ ಇರುವುದು ಸಾರ್ವಜನಿಕರಲ್ಲಿ ಬೇಸರಕ್ಕೆ ಕಾರಣವಾಗಿದೆ.

ರಸ್ತೆ ಸಂಪೂರ್ಣ ಹಾಳು: ಭೀಷ್ಮ ಕೆರೆ ದಂಡೆಯ ಮೇಲಿರುವ ದ್ವಿಪಥ ರಸ್ತೆಯಂತೂ ಸಂಚಾರಕ್ಕೆ ಬರದಂತಾಗಿದೆ. ವರ್ಷದ ಹಿಂದಷ್ಟೇ ಪ್ರಮುಖ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಡಾಂಬರೀಕರಣ ಮಾಡುವ ವೇಳೆಯಲ್ಲಿ ಸಾರ್ವಜನಿಕರು ಇದು ಗುಣಮಟ್ಟ ಹೊಂದಿಲ್ಲ ಕೂಡಲೇ ಕಿತ್ತು ಹೋಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು, ಆದರೆ ಅಧಿಕಾರಿಗಳು ಮಾತ್ರ ಅಂದು ಏನೂ ಕ್ರಮ ತೆಗೆದುಕೊಳ್ಳದೇ ಇರುವ ಹಿನ್ನೆಲೆಯಲ್ಲಿ ಇಂದು ರಸ್ತೆಯಲ್ಲ ಕಿತ್ತು ಹೋಗಿ ಡಾಂಬರೀಕರಣಕ್ಕೆ ಬಳಸಿದ ಕಡಿಗಳೆಲ್ಲ ಹೊರಗೆ ಬಂದಿದ್ದು, ದ್ವಿಚಕ್ರ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದಾರೆ. ಬೃಹತ್ ವಾಹನಗಳು ಸಂಚರಿಸಿದರೆ ಸಾಕು ಬೈಕ್ ಸವಾರರು ಕಣ್ಣು ಮುಚ್ಚದೇ ಬೇರೆ ದಾರಿಯೇ ಇಲ್ಲ ಅಷ್ಟೊಂದು ಪ್ರಮಾಣದ ಧೂಳು ಸೃಷ್ಟಿಯಾಗುತ್ತಿದೆ.

ಹಲವೆಡೆ ಸಮಸ್ಯೆ: ಕೇವಲ ಭೀಷ್ಮಕೆರೆಯ ಮುಖ್ಯ ರಸ್ತೆ ಮಾತ್ರವಲ್ಲ ಬನ್ನಿಕಟ್ಟಿ ವೃತ್ತ, ಮುಳುಗುಂದ ನಾಕಾ ಮತ್ತು ಶಿವಾನಂದ ಮಠದ ಕಡೆಯಿಂದ ಮಾರುಕಟ್ಟೆಗೆ ಸಂಪರ್ಕಿಸುವ ರಸ್ತೆಯಲ್ಲೂ ತಗ್ಗು ಗುಂಡಿಗಳೇ ಕಾಣಲು ಆರಂಭವಾಗಿದೆ. ಇನ್ನು ಹಳೇ ಡಿಸಿ ಆಫೀಸ್ ವೃತ್ತದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ತಗ್ಗು ಗುಂಡಿ ಬೀಳುವುದು ಸಾಮಾನ್ಯ ಎನ್ನುವಂತಾಗಿದೆ. ಅದೇ ರೀತಿ ಗಾಂಧಿ ವೃತ್ತದಿಂದ ಬೆಟಗೇರಿ ರೈಲ್ವೆ ಬ್ರಿಡ್ಜ್ ಭಾಗದಲ್ಲಿಯೂ ತೇಪೆ ಹಚ್ಚಲಾಗಿದ್ದರೂ ಮಳೆಗಾಲ ಮುಗಿಯುವ ಮುನ್ನವೇ ಡಾಂಬರ್‌ ಕಿತ್ತು ಹೋಗಿವೆ.

ಯಾರು ಹೊಣೆ?: ಗದಗ-ಬೆಟಗೇರಿ ಮುಖ್ಯ ರಸ್ತೆಯ ಕಾಮಗಾರಿ ಎರಡು ಭಾಗಗಳಾಗಿ ವಿಂಗಡಿಸಿ ಗುತ್ತಿಗೆ ನೀಡಿರುವುದು ಸಹ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಲೋಕೋಪಯೋಗಿ ಇಲಾಖೆಯು ಕಿತ್ತೂರು ಚೆನ್ನಮ್ಮ ವೃತ್ತದಿಂದ ಭೂಮರೆಡ್ಡಿ ವೃತ್ತದವರೆಗೆ ಮತ್ತು ಬೆಟಗೇರಿಯ ಜರ್ಮನ್ ಆಸ್ಪತ್ರೆಯಿಂದ ಬೆಟಗೇರಿ ಕೊನೆಯವರೆಗೆ ಸ್ಥಳೀಯ ಗುತ್ತಿಗೆದಾರರು ರಸ್ತೆ ನವೀಕರಣ ಮಾಡಿದ್ದಾರೆ.

ಇನ್ನೊಂದು ಕಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ರಸ್ತೆ ಮಧ್ಯದಲ್ಲಿ ಬರುವ ಪುಟ್ಟಯ್ಯಜ್ಜ ವೃತ್ತದಿಂದ ಬೆಟಗೇರಿಯ ಜರ್ಮನ್ ಆಸ್ಪತ್ರೆಯವರೆಗಿನ ರಸ್ತೆ ಅಭಿವೃದ್ಧಿ ಮಾಡಲು ದಾವಣಗೆರೆ ಮೂಲದ ಗುತ್ತಿಗೆದಾರರಿಗೆ ನೀಡಿದೆ. ಒಂದೇ ರಸ್ತೆಯನ್ನು ಇಬ್ಬರು ಗುತ್ತಿಗೆದಾರರು ಮೂರು ಭಾಗಗಳಾಗಿ ನಿರ್ಮಿಸಿದ್ದರಿಂದ ಸಮನ್ವಯದ ಕೊರತೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ನಿರ್ಮಾಣವಾದ ₹10 ಕೋಟಿ ವೆಚ್ಚದ ರಸ್ತೆ ಕೇವಲ ಒಂದೇ ವರ್ಷದಲ್ಲಿ ಹಾಳಾಗಿದೆ.

ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ಅಲ್ಲಲ್ಲಿ ರಸ್ತೆಗಳು ಸಾಕಷ್ಟು ಹಾನಿಯಾಗಿವೆ. ಈ ಕುರಿತು ಪ್ರತ್ಯೇಕ ಪ್ರಸ್ತಾವನೆ ತಯಾರಿಸಲು ಸೂಚಿಸಲಾಗಿದೆ. ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು ಈ ಕುರಿತು ಪರಿಶೀಲನೆ ನಡೆಸಿ ಉತ್ತರಿಸುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿ ಉಮೇಶ ನಾಯಕ ತಿಳಿಸಿದ್ದಾರೆ.