ಸಾರಾಂಶ
ಬಸ್ ನಿಲುಗಡೆಗೆ ವಿದ್ಯಾರ್ಥಿಗಳಿಂದ ರಸ್ತೆತಡೆ
ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ ಬೂದಿಹಾಳ ಕ್ಯಾಂಪ್‌ನಲ್ಲಿ ಮಂಗಳವಾರ ಬಳ್ಳಾರಿ-ಸಿಂಧನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒಗ್ಗೂಡಿ ರಸ್ತೆ ತಡೆ ನಡೆಸಿ ಬಸ್‌ಗಳ ನಿಲುಗಡೆಗಾಗಿ ಆಗ್ರಹಿಸಿದರು.ಗ್ರಾಮಗಳಿಂದ ಸಿಂಧನೂರು ಮತ್ತು ಸಿರಗುಪ್ಪ ನಗರಗಳ ಶಾಲಾ-ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದು, ನಿಗದಿತ ಸಮಯಕ್ಕೆ ಬಸ್‌ಗಳ ಸಂಚಾರವಿಲ್ಲದೆ ತೊಂದರೆ ಆಗುತ್ತಿದೆ. ಕೆಲ ಬಸ್‌ಗಳಂತೂ ಕ್ಯಾಂಪಿನಲ್ಲಿ ನಿಲ್ಲಿಸುತ್ತಿಲ್ಲ ಎಂದು ಬೂದಿವಾಳ ಕ್ಯಾಂಪಿನ ವಿದ್ಯಾರ್ಥಿಗಳಾದ ಸಮತಾ, ಲಕ್ಷ್ಮಿ, ರೇಣುಕಾ, ನಾಗರಾಜ, ಬಸವರಾಜ ದೂರಿದರು.
ಬಳ್ಳಾರಿ-ಸಿಂಧನೂರಿಗೆ ಸಂಚರಿಸುವ ಪ್ರತಿಯೊಂದು ಬಸ್ ಬೂದಿವಾಳ ಕ್ಯಾಂಪಿನಲ್ಲಿ ನಿಲುಗಡೆ ಮಾಡಬೇಕು. ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳ ಶಾಲಾ-ಕಾಲೇಜುಗಳಿಗೆ ಅನುಕೂಲವಾಗಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ಬಂದ ಸಾರಿಗೆ ಇಲಾಖೆಯ ಟಿಸಿ ಉಮಾಪತಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಸ್ಟೇಜ್ ಪಾಯಿಂಟ್ ಮಾಡಿ ಟಿಕೆಟ್ ನಿಗದಿಗೊಳಿಸಿ ಬಸ್ಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ವಿದ್ಯಾರ್ಥಿಗಳು, ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಬೂದಿವಾಳ ಕ್ಯಾಂಪಿನ ನಿವಾಸಿಗಳು, ವಿದ್ಯಾರ್ಥಿಗಳು, ಅಯ್ಯಪ್ಪಸ್ವಾಮಿ ಮಾಲಾಧಿಕಾರಿಗಳು ಇದ್ದರು.