ಅಂಬೇಡ್ಕರ್ ಪ್ರತಿಮೆ ಮುಂಭಾಗ ರಸ್ತೆ ತಡೆ

| Published : Aug 21 2025, 01:00 AM IST

ಸಾರಾಂಶ

ಹತ್ತೊಂಬತ್ತು ವರ್ಷದ ವಿದ್ಯಾರ್ಥಿನಿ ವರ್ಷಿತಾಳನ್ನು ಕೊಲೆಗೈದು ಸುಟ್ಟುಹಾಕಿರುವುದನ್ನು ವಿರೋಧಿಸಿ ಎಬಿವಿಪಿ, ಸೇರಿದಂತೆ ವಿವಿಧ ಸಂಘಟನೆಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.

ಚಿತ್ರದುರ್ಗ: ಹತ್ತೊಂಬತ್ತು ವರ್ಷದ ವಿದ್ಯಾರ್ಥಿನಿ ವರ್ಷಿತಾಳನ್ನು ಕೊಲೆಗೈದು ಸುಟ್ಟುಹಾಕಿರುವುದನ್ನು ವಿರೋಧಿಸಿ ಎಬಿವಿಪಿ, ಸೇರಿದಂತೆ ವಿವಿಧ ಸಂಘಟನೆಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು. ಹತ್ಯೆಗೀಡಾಗಿರುವ ವರ್ಷಿತಾಳ ಪೋಷಕರು ಹಾಗೂ ಕೋವೇರಹಟ್ಟಿ ಗ್ರಾಮಸ್ಥರು, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸಮೀಪ ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದರಿಂದ ಒನಕೆ ಓಬವ್ವ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಾಗೂ ರೋಟರಿ ಶಾಲೆಯ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚನೆಯುಂಟಾಯಿತು. ಕರುನಾಡ ವಿಜಯಸೇನೆ, ಭಾರತೀಯ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ, ಅಂಬೇಡ್ಕರ್ ಸೇವಾ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಹತ್ಯೆಯ ಹಿಂದೆ ಯಾರ್ಯಾರ ಕೈವಾಡವಿದೆ ಎನ್ನುವುದನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ಭಾರತೀಯ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಬೀರಾವರ ಮಾತನಾಡಿ, ಹತ್ಯೆಗೀಡಾದ ವಿದ್ಯಾರ್ಥಿನಿ ಕುಟುಂಬಕ್ಕೆ ಒಂದು ಕೋಟಿ ರು.ಪರಿಹಾರ ಘೋಷಿಸಿ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ಬರ್ಬರವಾಗಿ ಹತ್ಯೆಗೈದವರನ್ನು ಗಲ್ಲು ಶಿಕ್ಷೆಗೊಳಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.ಒನಕೆ ಓಬವ್ವ ವೃತ್ತ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಗಿ ಪೊಲೀಸ್ ಭದ್ರತೆಯಿತ್ತು.ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರಮುಖರು ಪ್ರತಿಭಟನೆಯಲ್ಲಿದ್ದರು.

ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ:

ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಒನಕೆ ಓಬವ್ವ ವೃತ್ತದ ಬಳಿ ಒಂದು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಸೇರಿದಂತೆ ನರಹತ್ಯೆ ಹಾಗೂ ಕಾನೂನು ಸುವ್ಯವಸ್ಥೆ ಸಂಬಂಧಿತ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಎರಡು ವರ್ಷ ಏಳು ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 43 ಸಾವಿರ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿಸಿದರು.

ಚಿತ್ರದುರ್ಗ ನಗರದ ಹೊರವಲಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬಳ ಸುಟ್ಟು ಮೃತಪಟ್ಟಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿರುವುದು ಆತಂಕಕಾರಿ ಸಂಗತಿ. ಇದುವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೆಂಬುದು ತಿಳಿದು ಬಂದಿಲ್ಲ. ಕಾಲೇಜು ಕ್ಯಾಂಪಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಬೇರೆ ಬೇರೆ ಕಾರಣಕ್ಕೆ ಸರಣಿ ಜೀವ ಕಳೆದುಕೊಳ್ಳುತ್ತಿರುವುದು ಆತಂಕದ ಸಂಗತಿ. ಹುಬ್ಬಳ್ಳಿಯ ನೇಹ ಹಿರೇಮಠ ಘಟನೆ, ಕೊಪ್ಪ ಮೊರಾರ್ಜಿ ಶಾಲೆಯಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆ ಸೇರಿದಂತೆ ಹಲವಾರು ಪ್ರಕರಣಗಳು ಜರುಗಿದರೂ ಘನ ಸರ್ಕಾರದ ಕಣ್ಣು ತೆರೆಯದಿರುವುದು ದುರಾದೃಷ್ಟವೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗದ ಈ ಘಟನೆಯನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಕಾನೂನಿನ ಅನ್ವಯ ಸೂಕ್ತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರವೀಣ್.ಎಚ್.ಕೆ, ವಿಭಾಗ ಸಂಚಾಲಕ ಗೋಪಿ, ಜಿಲ್ಲಾ ಸಂಚಾಲಕ ಸಂಜಯ್, ಸಾಮಾಜಿಕ ಜಾಲತಾಣ ಆದರ್ಶ, ಚರಣ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.