ಸಾರಾಂಶ
ಗಂಗಾವತಿ: ತಾಲೂಕಿನ ಹಿರೇಬೆಣಕಲ್- ಚಿಕ್ಕಬೆಣಕಲ್ ಬಳಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಉದ್ದೇಶಿಸಿರುವುದನ್ನು ಖಂಡಿಸಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿ ಸಮಿತಿ ನೇತೃತ್ವದಲ್ಲಿ ಹೇಮಗುಡ್ಡದ ಟೋಲ್ ಗೇಟ್ ಬಳಿ 30 ನಿಮಿಷಗಳ ಕಾಲ ಶನಿವಾರ ರಸ್ತೆ ತಡೆ ನಡೆಸಲಾಯಿತು.
ರಸ್ತೆ ತಡೆ ನಡೆಸಿದ್ದರಿಂದ ಕೊಪ್ಪಳ-ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಇದಕ್ಕಿಂತ ಪೂರ್ವದಲ್ಲಿ ರಸ್ತೆ ಪಕ್ಕದಲ್ಲಿ ಧರಣಿ ನಡೆಸಿದ ಗ್ರಾಮಸ್ಥರು ಕೂಡಲೇ ಅಣು ಸ್ಥಾವರ ಕೈಬಿಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿ ಸಮಿತಿ ಸಂಚಾಲಕರೂ ಆಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾತನಾಡಿ, ತಾಲೂಕಿನ ಹಿರೇಬೆಣಕಲ್ , ಚಿಕ್ಕಬೆಣಕಲ್ ಬಳಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸರ್ವೇ ನಂ. 35ರಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಣು ವಿದ್ಯುತ್ ಸ್ಥಾವರ ಕೈಬಿಡಬೇಕು. ಈ ಯೋಜನೆಯಿಂದ ಜನ ಆತಂಕಗೊಂಡಿದ್ದಾರೆ. ಸುತ್ತಮುತ್ತ ಜನವಸತಿ ಪ್ರಖ್ಯಾತ ಐತಿಹಾಸಿಕ ತಾಣಗಳಿವೆ, ಇಂತಲ್ಲಿ ಅಣು ವಿದ್ಯುತ್ ಯೋಜನೆ ಜಾರಿ ಸರಿಯಲ್ಲ ಎಂದು ಒತ್ತಾಯಿಸಿದರು.
ಈಗಾಗಲೇ ಹಿರೇಬೆಣಕಲ್‌ನಲ್ಲಿರುವ ಮೋರೇರ ಶಿಲಾ ಸಮಾದಿಗಳ ಪ್ರದೇಶ ಯುನೋಸ್ಕೋ ಪಟ್ಟಿಯಲ್ಲಿ ಸೇರ್ಪಡೆಯಾಗುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಈ ಪ್ರದೇಶದಲ್ಲಿ ಅಣು ಸ್ಥಾವರ ಸ್ಥಾಪನೆಗೆ ಮುಂದಾಗಿರುವದು ಸರಿಯಲ್ಲ ಎಂದು ಎಚ್ಚರಿಸಿದರು. ಅಣು ಸ್ಥಾವರದಿಂದ ಜನರು ರೋಗಗ್ರಸ್ಥರಾಗುವುದರಲ್ಲಿ ಸಂದೇಹವೇ ಇಲ್ಲ. ಇಂತಹ ಸಂದರ್ಭದಲ್ಲಿ ಈ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಮುಂದುವರಿಸಿದರೆ ಕೊಪ್ಪಳ ಜಿಲ್ಲಾ ಬಂದ್ ಕರೆ ನೀಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಹಿರೇಬೆಣಕಲ್- ಚಿಕ್ಕಬೆಣಕಲ್, ಹೇಮಗುಡ್ಡ, ಅಂಜನಾದ್ರಿ, ಕುಮ್ಮಟದುರ್ಗಾ ಐತಿಹಾಸಿಕ ಪ್ರದೇಶಗಳಾಗಿವೆ. ಇಂತಹ ಸ್ಥಳದಲ್ಲಿ ಅಣು ಸ್ಥಾವರ ಸ್ಥಾಪಿಸವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೊಟ್ಟೂರು ಸ್ವಾಮೀಜಿ ಮಾತನಾಡಿ, ಅಣುಸ್ಥಾವರ ಸ್ಥಾಪನೆಯಿಂದ ಪರಿಸರ ಹಾಳಾಗುತ್ತದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ದೇವಿಕಾನಂದ ಸ್ವಾಮೀಜಿ, ಮಾಜಿ ಸಂಸದ ಶಿವರಾಮಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಕೆ. ಚೆನ್ನಬಸಯ್ಯಸ್ವಾಮಿ, ಸರ್ವೇಶ್ ಮಾಂತಗೊಂಡ, ಜೋಗದ ನಾರಾಯಣಪ್ಪ ನಾಯಕ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ರಾಜಶೇಖರಪ್ಪ ಮೂಸ್ಟೂರು, ಹನುಮಂತರಾಯ, ಸುರೇಶ ಗೌರಪ್ಪ, ನಿವೃತ್ತ ಸಿಇಒ ಶೇಖರಗೌಡ, ಕೆಂಚಪ್ಪ ನಾಯಕ, ಆಚಾರ ನರ್ಸಾಪುರ, ದ್ಯಾಮಣ್ಣ ಕುರಬರ, ಶೇಖರಗೌಡ ಮರಳಿ, ವಸಂತನಾಯಕ ಜೋಗದ, ಕರವೇ ಮುಖಂಡರಾದ ವಿರೂಪಾಕ್ಷಗೌಡ ನಾಯಕ, ಪಂಪಣ್ಣ ನಾಯಕ, ಚೆನ್ನಬಸವ ಜೇಕಿನ್, ಶರಣೇಗೌಡ, ಆನಂದಗೌಡ, ಮಂಜುನಾಥ ಪಠಾಣ, ಹನುಮಂತಪ್ಪ ತಳವಾರ, ಸಿದ್ದನಗೌಡ, ರುದ್ರೇಶ ಅಂಗಡಿ, ಲಿಂಗಪ್ಪ ಮಠದ್, ವೀರೇಶ ಅಂಗಡಿ ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.