ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ೪ ದಿನದೊಳಗಾಗಿ ಬೆಳೆವಿಮೆ ಪರಿಹಾರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು.
ಮುಂಡಗೋಡ: ತೋಟಗಾರಿಕೆ(ಅಡಕೆ) ಬೆಳೆ ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ರೈತರು ಶುಕ್ರವಾರ ತಾಲೂಕಿನ ಪಾಳಾ ಕ್ರಾಸ್ ಶಿರಸಿ- ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬೆಳೆಹಾನಿಯಿಂದಾಗಿ ರೈತರು ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಬೆಳೆವಿಮೆ ಪರಿಹಾರದ ಹಣ ಇದುವರೆಗೆ ರೈತರ ಖಾತೆಗೆ ಜಮೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಈಗಾಗಲೇ ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ವಿಳಂಬ ಮಾಡುತ್ತಿರುವುದು ಏಕೆ ಎಂದು ರೈತರು ಪ್ರಶ್ನಿಸಿದರು.ತಕ್ಷಣ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ರೈತರು ಪಟ್ಟುಹಿಡಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಿ.ಪಿ. ಸತೀಶ ಹಾಗೂ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ಕುಳ್ಳೂರ ರೈತರೊಂದಿಗೆ ಮಾತುಕತೆ ನಡೆಸಿ ತಾಂತ್ರಿಕ ತೊಂದರೆಯಿಂದಾಗಿ ಬೆಳೆವಿಮೆ ಪರಿಹಾರ ಬಿಡುಗಡೆ ವಿಳಂಬವಾಗಿದೆ. ಮುಂದಿನ ೪ ದಿನದೊಳಗಾಗಿ ವಿಮೆ ಹಣ ಬಿಡುಗಡೆಯಾಗಲಿದ್ದು, ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದರು.
ಅಧಿಕಾರಿಗಳ ಖಚಿತ ಭರವಸೆಯ ಬಳಿಕ ರೈತರು ರಸ್ತೆ ತಡೆಯನ್ನು ಹಿಂಪಡೆದರು. ಇದರಿಂದ ಸ್ಥಗಿತಗೊಂಡಿದ್ದ ವಾಹನ ಸಂಚಾರ ಪುನರಾರಂಭಗೊಂಡಿತು. ರೈತರ ರಸ್ತೆ ತಡೆಯಿಂದಾಗಿ ಶಿರಸಿ- ಹುಬ್ಬಳ್ಳಿ ರಸ್ತೆಯಲ್ಲಿ ಕೆಲಕಾಲ ಬಸ್, ಲಾರಿ, ಕಾರು ಸೇರಿದಂತೆ ವಿವಿಧ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಯಿತು.ಭರವಸೆ ಹುಸಿಯಾದರೆ ಉಗ್ರ ಹೋರಾಟತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ೪ ದಿನದೊಳಗಾಗಿ ಬೆಳೆವಿಮೆ ಪರಿಹಾರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಗಿದ್ದು, ನಿಗದಿತ ಅವಧಿಯೊಳಗೆ ಹಣ ಜಮೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ರೈತರು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರದೀಪ ಶಿವನಗೌಡ್ರ, ಭೀಮಣ್ಣ ಬೋವಿ, ಮಂಜುನಾಥ ಅಂಗಡಿ, ಶ್ರೀನಿವಾಸ ನಿಂಗೋಜಿಯವರ, ಬಾಬಣ್ಣ ಕೋಣಕೇರಿ ಮಕ್ಬೂಲಹ್ಮದ ಡೊಳ್ಳೇಶ್ವರ, ಪುಟ್ಟಪ್ಪ ಹಿರೂರ, ಸಾದಿಕ್ ಮುಲ್ಲಾ, ರಾಮಣ್ಣ ಕಂಟ್ರಾಕ್ಟರ್, ಮಕ್ಬೂಲಹ್ಮದ ಪಾಟೀಲ, ಪೀರಪ್ಪ ಲಕ್ಮಾಪುರ, ಉಮೇಶ ಹೊಸಕೊಪ್ಪ, ಮುನ್ನಾ ಪಾಟೀಲ, ಸೋಮಣ್ಣ ಮಟ್ಟಿಮನಿ, ಶೇಖಪ್ಪ ಹರಿಜನ, ಮಹ್ಮದಖಾನ ನಾಗರೊಳ್ಳಿ, ಸನಾವುಲ್ಲಾ ಪಠಾಣ, ರಮೇಶ ಕಬ್ಬೂರ, ವಿನಯ ಪಾಟೀಲ ಮುಂತಾದ ರೈತರು ಉಪಸ್ಥಿತರಿದ್ದರು.