ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರೈತರ ಹೋರಾಟಕ್ಕೆ ಮಣಿದು ಈ ಕೂಡಲೇ ಎಚ್ಚೆತ್ತು ಪ್ರತಿ ಟನ್ ಕಬ್ಬಿಗೆ ₹5,500 ನಿಗದಿ ಮಾಡಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ಜಾರಿಗೆ ತರಬೇಕು. ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು ಸೇರಿದಂತೆ ರೈತರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಕಬ್ಬು ಬೆಳೆಗಾರರ ಬೇಡಿಕೆ ಕುರಿತಂತೆ ಬೆಳಗಾವಿ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ಬೆಂಬಲಿಸಿ ರೈತ ಸಂಘದ ಪುಟ್ಟಣ್ಣಯ್ಯ ಬಣ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನೇತೃತ್ವದಲ್ಲಿ ನೂರಾರು ರೈತ ಕಾರ್ಯಕರ್ತರು ಪ್ರವಾಸಿ ಮಂದಿರ ವೃತ್ತದ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಪ್ರತಿಭಟನೆಗೆ ಇಳಿದ ಪರಿಣಾಮ ಮೈಸೂರು, ಬೆಂಗಳೂರು ಹಾಗೂ ಮಳವಳ್ಳಿ ಮಾರ್ಗದ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕಬ್ಬು ಬೆಳೆ ನಿಗದಿ ವಿಚಾರದಲ್ಲಿ ಕೇಂದ್ರ ಸರ್ಕಾರ ರೈತರನ್ನು ದೆಹಲಿಗೆ ಕರೆಸಿಕೊಂಡು ಬೆಲೆ ನಿಗದಿಗೊಳಿಸದೆ ವಾಪಸ್ ಕಳಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರೈತರ ಹೋರಾಟಕ್ಕೆ ಮಣಿದು ಈ ಕೂಡಲೇ ಎಚ್ಚೆತ್ತು ಪ್ರತಿ ಟನ್ ಕಬ್ಬಿಗೆ ₹5,500 ನಿಗದಿ ಮಾಡಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ಜಾರಿಗೆ ತರಬೇಕು. ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು ಸೇರಿದಂತೆ ರೈತರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ರೈತ ಮುಖಂಡ ಬೋರಾಪುರ ಶಂಕರೇಗೌಡ ಒತ್ತಾಯಿಸಿದರು. ದೆಹಲಿ ಜೆನ್ ಜೀಗಳ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ. ಎಸ್ಐಆರ್ ನೀತಿ ಕೈ ಬಿಡುವಂತೆ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎ ಶಂಕರ್, ಖಜಾಂಚಿ ರವಿಕುಮಾರ್ ಆಗ್ರಹ ಪಡಿಸಿದರು.
ಇದೇ ವೇಳೆ ಧರಣಿ ನಿರತ ರೈತರು ಮದ್ದೂರು ಹಾಗೂ ಮಳವಳ್ಳಿ ಕೊನೆ ಭಾಗದ ಜಮೀನುಗಳಿಗೆ ವಿ.ಸಿ.ನಾಲೆ ಮೂಲಕ ನೀರು ಹರಿಸುವಲ್ಲಿ ವಿಫಲವಾಗಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಂತರ ಸ್ಥಳಕ್ಕೆ ಧಾವಿಸಿದ ನಿಗಮದ ತಾಂತ್ರಿಕ ಅಧಿಕಾರಿ ದಿವ್ಯ ಶನಿವಾರದ ನಂತರ ನಾಲೆಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿದ ನಂತರ ರೈತರು ರಸ್ತೆಯನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಮುಖಂಡರಾದ ವಿನೋದ್ ಬಾಬು, ದೇವರಾಜು, ದಯಾನಂದ, ಸಿದ್ದರಾಜು, ದೇಶಿ ಗೌಡ, ಗೊಲ್ಲರ ದೊಡ್ಡಿ ಅಶೋಕ, ರಘು, ಚಂದ್ರಶೇಖರ ಮತ್ತಿತರರು ಭಾಗವಹಿಸಿದ್ದರು.