ಸಾರಾಂಶ
ತಾಲೂಕಿನ ಹಿರೇಬೆಣಕಲ್ ಬಳಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಸ್ಥಳ ಗುರುತಿಸಿದ ಹಿನ್ನೆಲೆ ತಾಲೂಕಿನ ಹೇಮಗುಡ್ಡದ ಟೋಲ್ ಗೇಟ್ ಬಳಿ ಜ. 4ರಂದು ಬೆಳಗ್ಗೆ 10 ಗಂಟೆಗೆ ರಸ್ತೆ ತಡೆ ನಡೆಸಿ ಪ್ರತಿಭಟಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಹೇಮಗುಡ್ಡದ ಟೋಲ್ ಗೇಟ್ ಬಳಿ ಗ್ರಾಮಸ್ಥರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಗಂಗಾವತಿತಾಲೂಕಿನ ಹಿರೇಬೆಣಕಲ್ ಬಳಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಸ್ಥಳ ಗುರುತಿಸಿದ ಹಿನ್ನೆಲೆ ತಾಲೂಕಿನ ಹೇಮಗುಡ್ಡದ ಟೋಲ್ ಗೇಟ್ ಬಳಿ ಜ. 4ರಂದು ಬೆಳಗ್ಗೆ 10 ಗಂಟೆಗೆ ರಸ್ತೆ ತಡೆ ನಡೆಸಿ ಪ್ರತಿಭಟಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ನಿವಾಸದಲ್ಲಿ 10 ಗ್ರಾಮಗಳ ಜನರು ಪೂರ್ವಭಾವಿ ಸಭೆ ನಡೆಸಿ ಈ ನಿರ್ಣಯ ಕೈಗೊಂಡರು.ಈ ಸಂದರ್ಭ ಮಾತನಾಡಿದ ಎಚ್.ಆರ್. ಶ್ರೀನಾಥ, ತಾಲೂಕಿನ ಹಿರೇಬೆಣಕಲ್ ಹತ್ತಿರ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುತ್ತಿರುವುದನ್ನು ವಿರೋಧಿಸಿ ಹೇಮಗುಡ್ಡ ಗ್ರಾಮದ ಹತ್ತಿರ ಇರುವ ಟೋಲ್ ಗೇಟ್ ಹತ್ತಿರ ಪಕ್ಷಾತೀತವಾಗಿ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಇಲ್ಲಿರುವ ಅರಣ್ಯ, ಪರಿಸರ, ಪಕ್ಷಿ, ಪ್ರಾಣಿ ಸಂಕುಲ ನಾಶವಾಗಲಿದೆ. ವನ್ಯ ಜೀವಿಗಳು, ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯ ಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಐತಿಹಾಸಿಕ ಸ್ಥಳಗಳಾಗಿರುವ ಹಂಪಿ ಪ್ರಾಧಿಕಾರಕ್ಕೆ ಬರುವ ಕೆಲವು ಹಳ್ಳಿಗಳು ಮತ್ತು ಮೋರೇರ ಶಿಲಾ ಸಮಾಧಿಗಳು ಮತ್ತು ಕುಮಾರರಾಮನ ಕುಮ್ಮಟ ಮತ್ತು ಇತರ ಸ್ಥಳಗಳಿಗೆ ಧಕ್ಕೆಯಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ತಾಲೂಕಿನಲ್ಲಿ ಅಣುಸ್ಥಾವರ ಮಾಡಬಾರದೆಂದು ಆಗ್ರಹಿಸಲಾಗುತ್ತದೆ ಎಂದು ತಿಳಿಸಿದರು.ಚಿಕ್ಕಬೆಣಕಲ್, ಬಸಾಪಟ್ಟಣ, ವೆಂಕಟಗಿರಿ, ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಸಭೆಯಲ್ಲಿ ನಗರಸಭ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಜೋಗದ ನಾರಾಯಣಪ್ಪ ನಾಯಕ, ಮಠದ ಲಿಂಗಪ್ಪ, ವೀರಭದ್ರಪ್ಪ ನಾಯಕ, ಮೂಸ್ಟೂರು ರಾಜಶೇಖರ್, ಶರಣೇಗೌಡ, ಆನಂದಗೌಡ ಸೇರಿದಂತೆ ವಿವಿಧ ಗ್ರಾಮಗಳು ಮುಖಂಡರು ಭಾಗವಹಿಸಿದ್ದರು.