ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ವ್ಯಾಪ್ತಿಯ ತಾಲ್ಲೂಕಿನ 36ನೇ ವಿತರಣಾ ಕಾಲುವೆಯ ಗೇಟ್‍ನ್ನು ಬಂದ್ ಮಾಡಿರುವ ಜಿಲ್ಲಾಧಿಕಾರಿಗಳ ನೀತಿ ವಿರೋಧಿಸಿ ಶನಿವಾರ ಸಿಂಧನೂರು ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಪಕ್ಷಾತೀತವಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ವ್ಯಾಪ್ತಿಯ ತಾಲ್ಲೂಕಿನ 36ನೇ ವಿತರಣಾ ಕಾಲುವೆಯ ಗೇಟ್‍ನ್ನು ಬಂದ್ ಮಾಡಿರುವ ಜಿಲ್ಲಾಧಿಕಾರಿಗಳ ನೀತಿ ವಿರೋಧಿಸಿ ಶನಿವಾರ ಸಿಂಧನೂರು ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಪಕ್ಷಾತೀತವಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

36ನೇ ವಿತರಣಾ ಕಾಲುವೆಯ ಮುಖ್ಯಗೇಟ್ ಬಂದ್‍ಗೊಳಿಸಿರುವ ಈ ವಿಷಯ ತಿಳಿದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ ಸೇರಿದಂತೆ ಹಲವಾರು ರೈತರು ಶನಿವಾರ ಬೆಳಿಗ್ಗೆ ಗೇಟ್ ಬಳಿ ತೆರಳಿ ಹಾರಿಯಿಂದ ಬೀಗ ಮುರಿಯಲು ಪ್ರಯತ್ನಿಸಿದರು. ಆಗ ಪೊಲೀಸ್ ಅಧಿಕಾರಿಗಳು ತಡೆಹಿಡಿಯಲು ಪ್ರಯತ್ನಿಸಿದ್ದರಿಂದ ಕೆಲಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ತದನಂತರ ಪೊಲೀಸ್ ಅಧಿಕಾರಿಗಳು ಬಾಬುಗೌಡ ಬಾದರ್ಲಿ ಸೇರಿದಂತೆ ಹಲವು ರೈತರನ್ನು ಬಂಧಿಸಿ ತುರ್ವಿಹಾಳ ಪೊಲೀಸ್ ಠಾಣೆಗೆ ಕರೆದೊಯ್ದರು. ಈ ವಿಷಯ ತಿಳಿದು ಹಲವು ಕಾರ್ಯಕರ್ತರು, ರೈತರು ತುರ್ವಿಹಾಳ ಪೊಲೀಸ್ ಠಾಣೆಯ ಬಳಿ ನೆರೆದು ಬಿಡುಗಡೆ ಮಾಡುವಂತೆ ಘೋಷಣೆ ಕೂಗಿದರು.

ಈ ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಆರ್‍ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಪಕ್ಷಾತೀತವಾಗಿ ನಗರದ ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ಟೆಂಟ್ ಹಾಕಿಕೊಂಡು ಪ್ರತಿಭಟಿಸಿದರು. ಸಹಾಯಕ ಆಯುಕ್ತ ನಾಗೇಂದ್ರ ಬಾಬು, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜನಿಯರ್ ಸತ್ಯನಾರಾಯಣ ಶೆಟ್ಟಿ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಡಿಸಿ ಆದೇಶದ ಬಗ್ಗೆ ಮನವರಿಕೆ ಮಾಡಿದರು. ಆದರೆ ಇದಕ್ಕೆ ಪ್ರತಿಭಟನಾಕಾರರು ಒಪ್ಪದೆ ಆಕ್ರೋಶ ವ್ಯಕ್ತಪಡಿಸಿದರು.

ತದನಂತರ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಆರ್‍ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ಅವರು ಜಿಲ್ಲಾಧಿಕಾರಿಗಳು ಸಿಂಧನೂರು ತಾಲ್ಲೂಕು ವ್ಯಾಪ್ತಿಯ ಕಾಲುವೆಗಳನ್ನು ಬಂದ್ ಮಾಡುತ್ತಿರುವುದೇಕೆ. ಅವರಿಗೆ ಯಾರಾದರೂ ಒತ್ತಡ ಹಾಕುತ್ತಿದ್ದಾರೆ. ಕೊಪ್ಪಳ ದಿಂದ ಯಾಕೆ ಕಾಲುವೆ ಬಂದ್ ಮಾಡಿಸುತ್ತಿಲ್ಲ. ಈ ಬಗ್ಗೆ ಅವರೇ ಧರಣಿ ಸ್ಥಳಕ್ಕೆ ಬಂದು ಉತ್ತರ ಕೊಡಬೇಕು. ಅಲ್ಲಿಯವರೆಗೆ ಸಿಂಧನೂರು ಅಘೋಷಿತ ಬಂದ್ ಘೋಷಿಸಿ ರಸ್ತೆ ತಡೆ ಚಳವಳಿಯನ್ನು ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆಳಗ್ಗೆ 11 ಗಂಟೆಯಿಂದ ಆರಂಭಗೊಂಡಿದ್ದ ರಸ್ತೆ ತಡೆಯು ಮಧ್ಯಾಹ್ನ 4 ಗಂಟೆಯವರೆಗೆ ನಡೆಯಿತು. ಈ ವೇಳೆ ಸಹಾಯಕ ಆಯುಕ್ತ ನಾಗೇಂದ್ರ ಬಾಬು ಅವರು 36ನೇ ಕಾಲುವೆ ಓಪನ್ ಮಾಡಿದ್ದೇವೆ. ಅದನ್ನು ಬಂದ್ ಮಾಡುವುದಿಲ್ಲ. ಅ.7ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಆಗ ಕೆ.ವಿರೂಪಾಕ್ಷಪ್ಪ ಅವರು ನಮ್ಮ ಪ್ರತಿನಿಧಿಗಳಾಗಿ ಶಾಸಕ ಹಂಪನಗೌಡ ಬಾದರ್ಲಿ ಅವರು ಸಭೆಗೆ ಬಂದು ಚರ್ಚಿಸಲಿದ್ದಾರೆ ಎಂದು ತಿಳಿಸಿದರು. ನಂತರ ಶಾಮಿಯಾನ ಟೆಂಟ್ ಬಿಚ್ಚಿ ಧರಣಿಯನ್ನು ವಾಪಾಸ್ ಪಡೆದುಕೊಂಡರು. ಸುಮಾರು 5 ತಾಸುಗಳ ಕಾಲ ಟ್ರಾಫಿಕ್ ಜಾಮ್‍ನಿಂದ ಪ್ರಯಾಣಿಕರು ಪರದಾಡಿದರು. ನಂತರ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸಪಟ್ಟರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ವಕೀಲರ ಸಂಗದ ಅಧ್ಯಕ್ಷ ಕೆ.ಭೀಮನಗೌಡ ವಕೀಲ, ಮುಖಂಡರಾದ ಬಸವಂತರಾಯ ಗೌಡ ಕಲ್ಲೂರು, ಲಿಂಗರಾಜ ಪಾಟೀಲ್ ಹಂಚಿನಾಳ, ಸೈಯ್ಯದ್ ಹಾರೂನ್‍ ಪಾಷಾ ಜಾಗೀರದಾರ್, ಸಣ್ಣಭೀಮನಗೌಡ ಗೊರೇಬಾಳ, ಅಶೋಕ ಉಮಲೂಟಿ, ಅಶೋಕಗೌಡ ಗದ್ರಟಗಿ, ಮಲ್ಲೇಶಗೌಡ ಬಸಾಪುರ, ಧರ್ಮನಗೌಡ ಮಲ್ಕಾಪುರ, ಆರ್.ಅಂಬ್ರೋಸ್, ಅಭಿಷೇಕ ನಾಡಗೌಡ, ಖಾಜಿಮಲಿಕ್ ವಕೀಲ, ಅನಿಕುಮಾರ ವೈ, ಶಿವುಕುಮಾರ ಗುಂಜಳ್ಳಿ, ಸೈಯ್ಯದ್ ಆಸೀಫ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.