ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಈಗಾಗಲೇ ಕೈಗೊಳ್ಳಲಾಗಿರುವ ರಸ್ತೆ, ವರ್ತುಲ ರಸ್ತೆ, ಸೇತುವೆ, ಮೇಲ್ಸೇತುವೆ, ಹೆದ್ದಾರಿ ಕಾಮಗಾರಿಗಳನ್ನು ನಿಗದಿಪಡಿಸಿದ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಲೋಕೋಪಯೋಗಿ ಇಲಾಖಾ ಎಂಜಿನಿಯರ್‌ಗಳಿಗೆ ತಾಕೀತು ಮಾಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಸಂಪರ್ಕ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿರುವ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಈ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಇರಬಹುದಾದ ಹಾಗೂ ನ್ಯಾಯಾಲಯದಲ್ಲಿ ಇರುವ ಮೊಕದ್ದಮೆಗಳನ್ನು ನಿಯಮಾನುಸಾರ ತ್ವರಿತಗತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು. ಅದಕ್ಕಾಗಿ ಅಧಿಕಾರಿಗಳು ಸಕಾಲಿಕ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಭೂಸ್ವಾದೀನ ಪ್ರಕ್ರಿಯೆ ಬಾಕಿ ಇದ್ದಲ್ಲಿ ಸಂಬಂಧಿತ ವ್ಯಕ್ತಿ ಅಥವಾ ಆಸ್ತಿಗಳ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಂಬಂಧಿತ ಇಲಾಖಾ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ರೈತರು, ಸಂತ್ರಸ್ಥರ ಸಭೆಯನ್ನು ಕರೆದು ಮನವೊಲಿಸಿ, ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಇದಕ್ಕಾಗಿ ಸರ್ಕಾರದ ವತಿಯಿಂದ ಅಗತ್ಯ ಸಹಕಾರವನ್ನು ಒದಗಿಸಲಾಗುವುದು ಎಂದರು.
ಈ ಎಲ್ಲ ಯೋಜನೆಗಳ ಅನುಷ್ಠಾನದಲ್ಲಿ ಕಂದಾಯ, ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಿತ ಇಲಾಖಾ ಅಧಿಕಾರಿಗಳ ನಡುವೆ ಸಮನ್ವಯತೆ ಅಗತ್ಯವಿದೆ. ಕೆಲವು ಕಾಮಗಾರಿಗಳು ಆರಂಭಗೊಂಡು ಕೆಲವು ವರ್ಷಗಳೇ ಕಳೆದಿದ್ದರೂ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಗುತ್ತಿಗೆದಾರರಿಗೆ ಗಡುವು ನೀಡಿ ಕಾಮಗಾರಿಗಳಿಗೆ ಬಳಸುತ್ತಿರುವ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಂಡು ಕೂಡಲೇ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.ಶಿವಮೊಗ್ಗ ವಿದ್ಯಾನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬದಿಂದಾಗಿ ಜನಸಾಮಾನ್ಯರಿಗೆ ತೀವ್ರ ಅಡಚಣೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ತುಂಗಾ ಸೇತುವೆ ಒತ್ತುವರಿಯನ್ನು ತೆರವುಗೊಳಿಸಿ, ಉದ್ದೇಶಿತ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಸೂಚಿಸಿದರು.
ಸಾಗರದ ಚತುಷ್ಟಥ ರಸ್ತೆ, ಶಿಕಾರಿಪುರ ವರ್ತುಲ ರಸ್ತೆ, ಬೈಂದೂರು-ರಾಣೇಬೆನ್ನೂರು ರಸ್ತೆ ಅಗಲೀಕರಣ ಕಾಮಗಾರಿ, ತುಮಕೂರು- ಹೊನ್ನಾವರ ರಸ್ತೆ, ಮೇಗರವಳ್ಳಿ- ಆಗುಂಬೆ, ಶಿವಮೊಗ್ಗ-ಚಿತ್ರದುರ್ಗ ರಸ್ತೆ ಮುಂತಾದ ಕಾಮಗಾರಿ ಹಾಗೂ ಸಮೀಕ್ಷೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಶಿವಮೊಗ್ಗ-ಮಂಗಳೂರು ಚತುಷ್ಪಥ ರಸ್ತೆ ಭೂಸ್ವಾದೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಿಗಂದೂರು ಸೇತುವೆ ನಿರ್ಮಾಣಕ್ಕೆ ನೀರಿನ ಕೊರತೆ ಇದೆ. ಅಲ್ಲದೇ ನಿರಂತರ ವಿದ್ಯುತ್ ಇಲ್ಲದಿರುವುದು ಅಡಚಣೆಗೆ ಕಾರಣವಾಗಿದೆ. ವಿದ್ಯುತ್ತನ್ನು ನಿರಂತರವಾಗಿ ಕೆಲಸಕ್ಕೆ ಅಡಚಣೆ ಉಂಟಾಗದಂತೆ ಸರಬರಾಜು ಮಾಡಲು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಸಿಸಿಎಫ್ ಹನುಮಂತಪ್ಪ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
- - - ಬಾಕ್ಸ್ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ ಶಿವಮೊಗ್ಗ: ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನೆರೆಯ ಕಾರವಾರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖಾ ಸಚಿವರೊಂದಿಗೆ ಶೀಘ್ರದಲ್ಲಿ ಸಭೆ ನಡೆಸಿ, ಚರ್ಚಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ವಿಕಾಸಕ್ಕೆ ವಿಫುಲ ಅವಕಾಶಗಳಿದ್ದು, ಅವು ಅನುಷ್ಠಾನ ಆಗದಿರುವುದು ಬೇಸರ ತರಿಸಿದೆ. ಜೋಗ, ಗುಡವಿ ಪಕ್ಷಿಧಾಮ, ಕವಿಶೈಲ, ನಗರಕೋಟೆ, ಚಂದ್ರಗುತ್ತಿ ಸೇರಿದಂತೆ ಜಿಲ್ಲೆಯ ಇನ್ನೂ ಹಲವು ಪ್ರದೇಶಗಳನ್ನು ವಿಸ್ತೃತವಾಗಿ ಅಭಿವೃದ್ಧಿಪಡಿಸಿದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಬಹುದು ಎಂದರು. ಕೆಲವು ಪ್ರವಾಸಿ ಕ್ಷೇತ್ರಗಳಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲೇಬೇಕಾದ ಅಗತ್ಯವಿದೆ. ಗುಡವಿ ಪಕ್ಷಿಧಾಮವನ್ನು ಇನ್ನಷ್ಟು ರಚನಾತ್ಮಕವಾಗಿ ಮಾಡುವಲ್ಲಿ ಇರಬಹುದಾದ ಸಾಧ್ಯತೆಗಳ ಕುರಿತು ಕ್ರಿಯಾಯೋಜನೆ ರೂಪಿಸಿ, ಸರ್ಕಾರಕ್ಕೆ ಸಲ್ಲಿಸುವಂತೆ ಅವರು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಧರ್ಮಪ್ಪ ಅವರಿಗೆ ಸೂಚಿಸಿದರು.ಅದರಂತೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಯಾತ್ರಿ ನಿವಾಸಗಳನ್ನು ನಿರ್ಮಿಸಲು ಅನುದಾನ ಬಿಡುಗಡೆಗೊಂಡಿದೆ. ಕೆಲವು ಕಡೆ ಕಟ್ಟಡ ನಿರ್ಮಾಣ ಕಾರ್ಯಾರಂಭಗೊಂಡಿದ್ದರೆ, ಇನ್ನೂ ಹಲವು ಕಡೆಗಳಲ್ಲಿ ನಿವೇಶನ, ಅರಣ್ಯ ಭೂಮಿ, ಸಂಬಂಧಿಸಿದ ಇಲಾಖೆಯ ಅನುಮತಿ ದೊರೆಯದ ಕಾರಣಕ್ಕಾಗಿ ನಿರ್ಮಾಣ ಕಾರ್ಯ ಸ್ಥಗತಿಗೊಂಡಿದೆ. ಇವೆಲ್ಲವುಗಳನ್ನು ಇತ್ಯರ್ಥಪಡಿಸಲು ಮುಜರಾಯಿ ಇಲಾಖೆಯ ಅಧಿಕಾರಿಗಳೊಬ್ಬರನ್ನು ಇದರ ಉಸ್ತುವಾರಿಗಾಗಿ ನಿಯೋಜಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ನಿಯೋಜಿತ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳು ಸಮಸ್ಯಾತ್ಮಕ ಸ್ಥಳಗಳಿಗೆ ಖುದ್ದು ಭೇಟಿ ನೀಡಿ, ಸಮಸ್ಯೆಗಳನ್ನು ಅರಿತು ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ನಿರ್ಮಾಣ ಕಾರ್ಯ ತ್ವರಿತವಾಗಿ ಆರಂಭಗೊಳಿಸುವಂತೆ ಸಲಹೆ ನೀಡಿದರು.
ಚಂದ್ರಗುತ್ತಿಯಲ್ಲಿ ನಿರ್ಮಿಸಬೇಕಾಗಿದ್ದ ಯಾತ್ರಿನಿವಾಸಕ್ಕೆ ಅರಣ್ಯ ಇಲಾಖೆಯ ಅಡಚಣೆ ಇದೆ. ಅದನ್ನು ಇತ್ಯರ್ಥಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಯಮಾನುಸಾರ ಕಟ್ಟಡ ನಿರ್ಮಿಸಲು ಸಾಧ್ಯವಾದರೆ ಸರಿ. ತಪ್ಪಿದಲ್ಲಿ ಪರ್ಯಾಯ ಕ್ರಮಗಳನ್ನು ಕೈಗೊಂಡು ಚಂದ್ರಗುತ್ತಿ ಪ್ರದೇಶವನ್ನು ಆಕರ್ಷಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಅಲ್ಲಿನ ಪರಿಸರವನ್ನು ಸದಾ ಹಸಿರಾಗಿರುವಂತೆ ಯೋಜನೆ ರೂಪಿಸುವಂತೆ ಸೂಚಿಸಿದರು.ಸಿಗಂದೂರು ಯಾತ್ರಿ ನಿವಾಸ ಅಭಿವೃದ್ಧಿಪಡಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು. ಕೆಳದಿ ಕೋಟೆ, ಕುವೆಂಫು ಅವರ ಕುಪ್ಪಳಿ, ಕವಲೇದುರ್ಗ ಮುಂತಾದ ಪ್ರದೇಶಗಳಲ್ಲಿ ಕೈಗೊಂಡಿರುವ ಹಾಗೂ ಉದ್ದೇಶಿತ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಕೆಲವು ಸ್ಥಳಗಳಲ್ಲಿನ ಅಭಿವೃದ್ಧಿಗೆ ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಸಲಹೆ ಪಡೆದುಕೊಳ್ಳಬೇಕು ಅಲ್ಲದೇ ಅಭಿವೃದ್ಧಿಗೆ ಅನುದಾನ ಪಡೆಯುವಲ್ಲಿ ಅವರ ಸಹಕಾರ ಪಡೆದುಕೊಳ್ಳುವಂತೆ ಸೂಚಿಸಿದರು.
- - - -4ಎಸ್‌ಎಂಜಿಕೆಪಿ06: ಜಿಪಂ ಸಭಾಂಗಣದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಸಚಿವ ಮಧು ಬಂಗಾರಪ್ಪ ಮಾತನಾಡಿದರು.