ಬರೆ ಕುಸಿಯುತ್ತಿದೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ತಹಸೀಲ್ದಾರ್ ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡ್ಲು ಗ್ರಾಮದ ಎರಡನೇ ವಾರ್ಡಿನಲ್ಲಿ ಸುಮಾರು 150 ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿ 25 ಕುಟುಂಬಗಳ ಮನೆಯ ಹಿಂಭಾಗ ಬರೆ ಕುಸಿಯುತ್ತಿದೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ಮಂಗಳವಾರ ತಹಸೀಲ್ದಾರ್ ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ಈ ಸ್ಥಳದಲ್ಲಿ ಬಹುತೇಕ ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ಮುಂಗಾರಿನ ಸಮಯದಲ್ಲಿ ಸುಮಾರು ಆರು ತಿಂಗಳು ಸುರಿದ ಭಾರಿ ಮಳೆಗೆ ಮನೆಗಳು ಬಿರುಕು ಬಿಟ್ಟಿದ್ದು ಜನರು ಭಯದಿಂದ ವಾಸಿಸುತ್ತಿದ್ದಾರೆ. ಅಪಾಯದ ಈ ಸ್ಥಳಕ್ಕೆ ತಡೆಗೋಡೆ ಮಾಡಿಸಿಕೊಡಬೇಕೆಂದು ವಾರ್ಡ್ ಸದಸ್ಯ ಸುರೇಶ್ ಶೆಟ್ಟಿ ಮನವಿ ಮಾಡಿದರು. ತಹಸೀಲ್ದಾರ್ ಕೃಷ್ಣಮೂರ್ತಿ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ, ಸ್ಥಳವನ್ನು ತುರ್ತಾಗಿ ಸರ್ವೇ ಕಾರ್ಯ ನಡೆಸಿ, ತಡೆಗೋಡೆ ನಿರ್ಮಿಸಲು ಕ್ರಿಯಾಯೋಜನೆ ಮಾಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ನಂತರ ಅಲ್ಲಿದ್ದ ಗ್ರಾಮಸ್ಥರೊಂದಿಗೆ ಮಾತನಾಡಿ, ಈಗಾಗಲೇ ಶಾಸಕರು ಸ್ಥಳ ಪರಿಶೀಲನೆ ನಡೆಸಿದ್ದು, ಆದಷ್ಟು ಬೇಗ ತಡೆ ಗೋಡೆ ನಿರ್ಮಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭ ಗ್ರಾಮಸ್ಥರಾದ ಫ್ರಾನ್ಸಿಸ್, ಅನಿಲ್, ರಫೀಕ್, ಮಮತ, ನಿವ್ಯಶ್ರೀ ಸೇರಿದಂತೆ ಗ್ರಾಮಸ್ಥರು ಇದ್ದರು.