ಸಾರಾಂಶ
ನಿಯಮ ಬಾಹಿರವಾಗಿ ಲಾರಿಗಳಲ್ಲಿ ಬೃಹತ್ ಗ್ರಾನೈಟ್ ಬೃಹತ್ ಕಲ್ಲು ಸಾಗಾಟ ಮಾಡಲಾಗುತ್ತಿದ್ದು, ಸಾರ್ವಜನಿಕರು ಅಪಾಯ ಭೀತಿಯಲ್ಲಿ ಬದುಕುವಂತಾಗಿದೆ.
ಕನ್ನಡಪ್ರಭ ವಾರ್ತೆ ಹನುಮಸಾಗರ
ನಿಯಮ ಬಾಹಿರವಾಗಿ ಲಾರಿಗಳಲ್ಲಿ ಬೃಹತ್ ಗ್ರಾನೈಟ್ ಬೃಹತ್ ಕಲ್ಲು ಸಾಗಾಟ ಮಾಡಲಾಗುತ್ತಿದ್ದು, ಸಾರ್ವಜನಿಕರು ಅಪಾಯ ಭೀತಿಯಲ್ಲಿ ಬದುಕುವಂತಾಗಿದೆ.ಸಮೀಪದ ಪುರ್ತಗೇರಿ, ಬಂಡರಗಲ್ಲ, ಕಲ್ಲಗೋನಾಳ ಸೇರಿದಂತೆ ನಾನಾ ಗ್ರಾಮಗಳಲ್ಲಿ ಕಲ್ಲು ಗ್ರಾನೈಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ನಿತ್ಯ ಭಾರಕಿಂತ ಹೆಚ್ಚಿನ ಭಾರ ಹೊತ್ತು ಲಾರಿಗಳು ರಸ್ತೆಗಿಳಿಯುತ್ತಿದ್ದು, ಇದರಿಂದ ಈಗಾಗಲೇ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ಲಾರಿಗಳು ಕೆಲವು ಚೆಕ್‌ಪೋಸ್ಟ್ ಕಣ್ಣು ತಪ್ಪಿಸಲು ಕಾಟಾಪುರ, ಹೂಲಗೇರಾ, ಮಿಯ್ಯಾಪೂರ ಹಳ್ಳಿಗಳ ಒಳಮಾರ್ಗವಾಗಿ ಹಗಲು, ರಾತ್ರಿ ಎನ್ನದೇ ಬಹಳಷ್ಟು ಲಾರಿಗಳು ಸಾಗುತ್ತಿದ್ದು, ಜನರಿಗೆ ಕಿರಿ ಕಿರಿಯಾಗಿದೆ. ಇದರಿಂದ ಹಳ್ಳಿಗಳ ಗ್ರಾಮಸ್ಥರು ಗಾಬರಿಯಾಗಿದ್ದು, ಮಕ್ಕಳು ಆಟವಾಡುತ್ತಿರುವಾಗ, ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳುವಾಗ ಅವಘಡ ಸಂಭವಿಸುತ್ತದೆ ಎಂಬ ಭಯದಲ್ಲಿ ವಾಸಿಸುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ:ಲಾರಿಗಳಲ್ಲಿ ಗ್ರಾನೈಟ್ ಕಲ್ಲುಗಳನ್ನು ಸಾಗಿಸುವ ಸಂದರ್ಭದಲ್ಲಿ ಹಲವಾರು ಬಾರಿ ಅಪಘಾತಗಳಾದರೂ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಲಾಗುತ್ತಿದೆ ಎನ್ನುವ ಆರೋಪಗಳು ಹೆಚ್ಚಿವೆ. ಭಾರದ ವಸ್ತುಗಳನ್ನು ಸಾಗಿಸಲು ನಿಯಮವಿದ್ದರೂ ಪ್ರಭಾವಿಗಳ ಕೃಪಾಕಟಾಕ್ಷದಿಂದ ಅತಿಭಾರದ ವಸ್ತುಗಳ ಸಾಗಣೆ ಎಗ್ಗಿಲ್ಲದೇ ನಡೆಯುತ್ತಿದೆ. ಇದರೊಂದಿಗೆ ಹನುಮಸಾಗರದ ಇಳಕಲ್ ರಸ್ತೆಯ ವೃತ್ತದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿದ್ದರು ಅಧಿಕಾರಿಗಳು ಇರುವುದಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.ರಸ್ತೆಗಳು ಹಾಳು:
ಭಾರವಾದ ಕಲ್ಲನ್ನು ಲಾರಿಗಳು ಹೊತ್ತು ಸಾಗುವುದರಿಂದ ಮಳೆಗಾಲ ಆರಂಭವಾಗುತ್ತಿದ್ದು, ಡಾಂಬರ್ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಗ್ಗು ಬೀಳುತ್ತಿವೆ. ಚೆಕ್ ಪೋಸ್ಟ್‌ನಲ್ಲಿ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಕೆಲ ಚಾಲಕರು ಗ್ರಾಮೀಣ ಪ್ರದೇಶದ ರಸ್ತೆಯಲ್ಲಿ ವಾಹನ ಚಲಾಯಿಸುವುದಿರಿಂದ ಕೆಲವೊಂದು ಕಡೆ ರಸ್ತೆ ಕುಸಿಯುತ್ತಿದೆ. ಕೆಲವೊಂದು ಸಮಯದಲ್ಲಿ ಹೆಚ್ಚಿನ ಗಾತ್ರದ ಕಲ್ಲು ಲಾರಿಯಲ್ಲಿ ಸಾಗಿಸುವಾಗ ನಡು ರಸ್ತೆಯಲ್ಲಿ ಟಾಯರ್ ಬ್ಲಾಸ್ಟ್ ಆಗಿ ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿ ಸಾರ್ವಜನಿಕರಿಗೆ ಕಿರಿ ಕಿರಿಯಾದ ಘಟನೆಗಳು ನಡೆಯುತ್ತಿವೆ. ಇದರಿಂದ ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಹಳ್ಳಿ ಮಾರ್ಗದ ಮೂಲಕ ಬೃಹತ್ ಕಲ್ಲು ಸಾಗಿಸಲು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಕಾರಿಗಳು ಮೌನವಹಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.