ಸಾರಾಂಶ
ತಾಲೂಕಿನ ಇರ್ದೆ ಗ್ರಾಮದ ದೂಮಡ್ಕ - ಚಾಕೋಟೆ- ಮದಕ ಎಂಬಲ್ಲಿಗೆ ಮುಂದಿನ ೧೫ ದಿನಗಳ ಒಳಗಾಗಿ ರಸ್ತೆ ವ್ಯವಸ್ಥೆ ಮಾಡದಿದ್ದಲ್ಲಿ ನೇರವಾಗಿ ನಾವೇ ರಸ್ತೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ತಾಲೂಕಿನ ಇರ್ದೆ ಗ್ರಾಮದ ದೂಮಡ್ಕ - ಚಾಕೋಟೆ- ಮದಕ ಎಂಬಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ೧೩ ಮನೆಗಳಿದ್ದು, ಈ ಮನೆಗಳಿಗೆ ಕಳೆದ ೧೦೨ ವರ್ಷಳಿಂದ ಮೂಲ ಸೌಕರ್ಯವಾದ ರಸ್ತೆ ಸಂಪರ್ಕ ಇಲ್ಲ. ರಸ್ತೆಗಾಗಿ ಜನಪ್ರತಿನಿಧಿಗಳಿಂದ ಹಿಡಿದು ಜಿಲ್ಲಾಧಿಕಾರಿಗಳ ತನಕ ಎಲ್ಲರಿಗೂ ಈ ಬಗ್ಗೆ ಮನವಿ ಮಾಡಲಾಗಿದ್ದರೂ ಈ ತನಕ ಯಾರೂ ಸ್ಪಂದನೆ ನೀಡಿಲ್ಲ. ಮುಂದಿನ ೧೫ ದಿನಗಳ ಒಳಗಾಗಿ ರಸ್ತೆ ವ್ಯವಸ್ಥೆ ಮಾಡದಿದ್ದಲ್ಲಿ ಸಂಘಟನೆಯ ವತಿಯಿಂದ ನೇರವಾಗಿ ನಾವೇ ರಸ್ತೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್ ಹೇಳಿದ್ದಾರೆ.
ಅವರು ಶನಿವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮದಕ ಪರಿಶಿಷ್ಟ ಪಂಗಡದ ಕಾಲೊನಿಯ ೧೩ ಮನೆಗಳಿಗೆ ರಸ್ತೆಯಿಲ್ಲದ ಕಾರಣ ಈ ಭಾಗದ ಜನರು ಅನಾರೋಗ್ಯ ಪೀಡಿತ ಸಂದರ್ಭದಲ್ಲಿ ಹೊತ್ತುಕೊಂಡು ಹೋಗುವಂತಹ ಅನಿವಾರ್ಯತೆ ಉಂಟಾಗಿದೆ. ಮೂಲ ಸೌಕರ್ಯದಿಂದ ವಂಚಿತರಾದ ಮನೆಗಳಿಗೆ ಸಂಪರ್ಕ ರಸ್ತೆ ಮಾಡಲು ಶಾಸಕರಿಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಯಾವುದೇ ಪ್ರಯೋಜನ ಆಗಿಲ್ಲ. ಹಾಗಾಗಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯಿಂದ ೧೫ ದಿನದೊಳಗೆ ನಾವು ರಸ್ತೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಅವರು ಹೇಳಿದರು.ಸುದ್ಧಿಗೋಷ್ಠಿಯಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಪ್ರಮೋದ್, ಕಾಲೋನಿ ನಿವಾಸಿಗಳಾದ ಚಂದ್ರಶೇಖರ್, ಆಶಾ ಕಾರ್ಯಕರ್ತೆ ರೇವತಿ, ಪ್ರತಿಮಾ ಉಪಸ್ಥಿತರಿದ್ದರು.