ರಸ್ತೆ ಅಭಿವೃದ್ಧಿ ಕೆಲಸ ನಿಧಾನ; ಟ್ರಾಫಿಕ್ ದಟ್ಟಣೆಯಿಂದ ಜನರು ಹೈರಾಣ

| Published : Dec 30 2024, 01:01 AM IST

ರಸ್ತೆ ಅಭಿವೃದ್ಧಿ ಕೆಲಸ ನಿಧಾನ; ಟ್ರಾಫಿಕ್ ದಟ್ಟಣೆಯಿಂದ ಜನರು ಹೈರಾಣ
Share this Article
  • FB
  • TW
  • Linkdin
  • Email

ಸಾರಾಂಶ

ಮೇಲ್ಸೇತುವೆ ಕಾಮಗಾರಿಗಳು ನಗರದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆಯನ್ನು ಉಲ್ಬಣಗೊಳಿಸಿದೆ.

ಬಳ್ಳಾರಿ: ನಗರದ ರಸ್ತೆಯ ತಗ್ಗು-ಗುಂಡಿಗಳಿಂದ ರೋಸಿ ಹೋಗಿರುವ ಸಾರ್ವಜನಿಕರು ಇದೀಗ ತೀವ್ರಗೊಂಡ ಟ್ರಾಫಿಕ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ.

ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ರೈಲ್ವೆ ಅಂಡರ್ ಪಾಸ್ ಮಾರ್ಗದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ಹಾಗೂ ಸುಧಾಕ್ರಾಸ್‌ನಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ನಗರದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಐದಾರು ನಿಮಿಷದಲ್ಲಿ ಗಮ್ಯ ಸ್ಥಳಕ್ಕೆ ಸೇರಬೇಕಾದ ವಾಹನ ಸವಾರರು, ಟ್ರಾಫಿಕ್ ನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇದು ಸಾರ್ವಜನಿಕರು ರಸ್ತೆಗಿಳಿಯಲು ಹಿಂದೇಟು ಹಾಕುವಂತಾಗಿದೆ. ಈ ಎರಡು ಕಾಮಗಾರಿಗಳ ನಿಧಾನಗತಿಯ ಕೆಲಸ ಸಂಚಾರ ದಟ್ಟಣೆ ಸಮಸ್ಯೆಗೆ ಪ್ರಮುಖ ಕಾರಣವಾಗಿಸಿದೆ.

ಸುತ್ತಾಡಿ ಸುಸ್ತಾಗುವ ವಾಹನ ಸವಾರರು:

ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ರೈಲ್ವೆ ಅಂಡರ್ ಪಾಸ್ ರಸ್ತೆ ನಿರ್ಮಾಣ ಕೈಗೆತ್ತಿಕೊಂಡಿರುವುದರಿಂದ ವಾಹನ ಸವಾರರು ಮೋಕಾ ರಸ್ತೆಯಿಂದ ಸುತ್ತುವರಿದು ಸತ್ಯನಾರಾಯಣ ಪೇಟೆ ಮೂಲಕ ಸಂಗಮ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ರಸ್ತೆ ಮತ್ತಿತರ ವಾಣಿಜ್ಯ ಕೇಂದ್ರಗಳಿಗೆ ತೆರಳಬೇಕು.

ಸುಧಾ ಕ್ರಾಸ್‌ನಲ್ಲಿ ಕೈಗೊಂಡಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣದಿಂದಾಗಿ ಆರ್‌ಟಿಒ ಕಚೇರಿ ಮಾರ್ಗದ ಮೂಲಕವೇ ನಗರವನ್ನು ಪ್ರವೇಶಿಸುವಂತಾಗಿದೆ. ಈ ಎರಡು ಕಾಮಗಾರಿಗಳು ನಗರದ ಸಂಪರ್ಕ ಕೊಂಡಿಯನ್ನೇ ಕಳಚಿದ್ದು ಜನರ ಪರದಾಡಿಕೊಂಡೇ ಓಡಾಡುವ ಸ್ಥಿತಿಯಿದೆ. ಸುಧಾ ಕ್ರಾಸ್‌ ಬಳಿಯ ಮೇಲ್ಸೇತುವೆ ಕಾಮಗಾರಿ ನಿಧಾನಗೊಂಡಿದ್ದರೂ ಬಿಮ್ಸ್‌ ಮೈದಾನದ ಮಾರ್ಗವಾಗಿ ತೆರಳಲು ಅವಕಾಶವಿದೆ. ಆದರೆ, ನಗರದ ಹೃದಯ ಭಾಗದಲ್ಲಿರುವ ಶ್ರೀಕನಕ ದುರ್ಗಮ್ಮ ಬಳಿಯ ರೈಲ್ವೆ ಅಂಡರ್‌ಪಾಸ್ ನ ನಿಧಾನಗತಿಯ ಕಾಮಗಾರಿ, ಟ್ರಾಫಿಕ್ ಸಮಸ್ಯೆಯನ್ನು ಹೆಚ್ಚಿಸಿದೆ.

ಇದು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಬೆಳಿಗ್ಗೆ 11 ಗಂಟೆಯಿಂದ ಶುರುವಾಗುವ ಟ್ರಾಫಿಕ್ ದಟ್ಟಣೆ ರಾತ್ರಿ 8 ಗಂಟೆವರೆಗೂ ಮುಂದುವರಿಯುತ್ತಿರುವುದು ಪೊಲೀಸರನ್ನು ಹೈರಾಣಾಗಿಸಿದೆ.

ನಗರದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಂಡು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಂಡಲ್ಲಿ ಮಾತ್ರ ಸಾರ್ವಜನಿಕರ ಟ್ರಾಫಿಕ್ ಸಮಸ್ಯೆಯ ಪರದಾಟಕ್ಕೆ ತೆರೆಬೀಳಲಿದೆ.

ಎಲ್ಲ ಇದ್ದರೂ ಏನೂ ಇಲ್ಲದ ಸ್ಥಿತಿ:

ಬಳ್ಳಾರಿಯಲ್ಲಿ ಎಲ್ಲ ಇದ್ದೂ ಏನೂ ಇಲ್ಲದ ಸ್ಥಿತಿಯಲ್ಲಿ ಜನರು ಒದ್ದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಗರದಲ್ಲಿ ರಸ್ತೆಗಳು ಗಬ್ಬೆದ್ದು ಹೋಗಿವೆ. ಇದರಿಂದ ನಿತ್ಯ ಅಪಘಾತ ಪ್ರಕರಣಗಳು ಸಂಭವಿಸುತ್ತಿವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಸಹ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿ ವಿಷಯದಲ್ಲಿ ಬಳ್ಳಾರಿ ತೀರಾ ಹಿನ್ನಡೆಯಲ್ಲಿದೆ. ತೀರಾ ಹಿಂದುಳಿದ ಜಿಲ್ಲೆಗಳು ಪ್ರಗತಿ ಕಂಡುಕೊಳ್ಳುತ್ತಿರುವಾಗ ಬಳ್ಳಾರಿ ಜಿಲ್ಲೆ ಮಾತ್ರ ದಿನದಿನಕ್ಕೆ ಸಮಸ್ಯೆಗಳ ತಾಣಗಳಾಗಿ ಬದಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಕನಕ ದುರ್ಗಮ್ಮ ದೇವಸ್ಥಾನದ ಬಳಿಯ ರೈಲ್ವೆ ಅಂಡರ್ ಪಾಸ್ ರಸ್ತೆ ನಿರ್ಮಾಣಕ್ಕೆ ಯಾಕಿಷ್ಟು ತಡ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಇರುವ ರಸ್ತೆಯನ್ನೇ ಒಂದಷ್ಟು ಅಗೆದು ರಸ್ತೆ ಮಾಡಲು ಇಷ್ಟೊಂದು ದಿನಗಳು ಬೇಕೇ? ಎನ್ನುತ್ತಾರೆ ಸರ್‌ ಎಂವಿ ನಗರ, ಕಪ್ಪಗಲ್ ರಸ್ತೆ ನಿವಾಸಿ ವಿಜಯ.