ಸುರಕ್ಷತೆಗಾಗಿ ಹಾಕಿದ್ದ ಪ್ಲಾಸ್ಟಿಕ್‌ ರಸ್ತೆ ಡಿವೈಡರ್‌ ಮೇಲೇ ವಾಹನ ಸಂಚಾರ

| Published : May 08 2024, 01:32 AM IST

ಸುರಕ್ಷತೆಗಾಗಿ ಹಾಕಿದ್ದ ಪ್ಲಾಸ್ಟಿಕ್‌ ರಸ್ತೆ ಡಿವೈಡರ್‌ ಮೇಲೇ ವಾಹನ ಸಂಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ ರಸ್ತೆಯಲ್ಲಿ 2 ತಿಂಗಳ ಹಿಂದಷ್ಟೇ ಹಾಕಿದ್ದ ಡಿವೈಡರ್‌ಗಳು ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಾಹನಗಳು ಅಡ್ಡಾದಿಡ್ಡಿ ಸಂಚರಿಸುತ್ತಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆಯ ನಡುವೆ ಪೋಲಾರ್ಡ್‌ (ಪ್ಲಾಸ್ಟಿಕ್‌ ಡಿವೈಡರ್‌) ಅಳವಡಿಸೋದು ವಾಹನಗಳು ಎರಡೂ ಬದಿ ಸರಾಗವಾಗಿ ಚಲಿಸಲಿ, ಸಂಚಾರ ದಟ್ಟಣೆ ಆಗದಿರಲಿ, ಅಪಘಾತ ತಪ್ಪಲಿ ಎಂಬ ಕಾರಣಕ್ಕೆ. ಆದರೆ, ವಾಹನ ಸವಾರರು ಎಗ್ಗಿಲ್ಲದೆ ವಾಹನ ಚಾಲಿಸಿದ ಕಾರಣ ಅಳವಡಿಸಿದ ಪೋಲಾರ್ಡ್‌ಗಳು ಮುರಿದುಬಿದ್ದಿವೆ.

ಮಾಗಡಿ ರಸ್ತೆ ಟೋಲ್‌ಗೇಟ್‌ ಬಳಿ ತಿಂಗಳ ಹಿಂದಷ್ಟೇ ಹೊಸದಾಗಿ ಅಳವಡಿಸಿದ್ದ ಡಿವೈಡರ್‌ಗಳ ಸ್ಥಿತಿ ಹೀಗಾಗಿದೆ. ಬಿಎಂಟಿಸಿ ಬಸ್‌ಗಳು ರಸ್ತೆಯ ಒಂದು ಬದಿಯಿಂದ ಸಾಗಬೇಕು ಎಂಬ ಉದ್ದೇಶದಿಂದ ಇಲ್ಲಿ ರಸ್ತೆ ಡಿವೈಡರ್‌ಗಳಾಗಿ ಹಾಕಲಾಗಿತ್ತು. ಆದರೆ, ಚಾಲಕರು ಇದನ್ನು ಲೆಕ್ಕಿಸದೆ ಡಿವೈಡರ್‌ಗಳ ಮೇಲೆಯೇ ವಾಹನಗಳನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಪರಿಣಾಮ ಇವೆಲ್ಲವೂ ನೆಲಕಚ್ಚಿವೆ.

ಡಿವೈಡರ್‌ ನೆಲಕಚ್ಚಿದ ಕಾರಣ ಬಿಎಂಟಿಸಿ ಬಸ್‌ಗಳಿಂದ ಹಿಡಿದು ಎಲ್ಲ ಸರ್ಕಾರಿ, ಖಾಸಗಿ ವಾಹನಗಳ ಚಾಲಕರು ರಸ್ತೆ ನಿಯಮ ಪಾಲಿಸದೆ ಚಾಲನೆ ಮಾಡುತ್ತಿದ್ದು, ಇದು ವಾಹನಗಳ ಸರಾಗ ಓಡಾಟಕ್ಕೂ ಕುತ್ತು ತಂದಿದೆ. ರಾತ್ರಿ ವೇಳೆ ಬಸ್‌ ಸವಾರರು ಅತೀವೇಗದಿಂದ ಬಂದು ಇವುಗಳ ಮೇಲೆ ವಾಹನ ಚಲಾಯಿಸಿರುವುದೇ ಇದಕ್ಕೆ ಕಾರಣ. ಹೀಗಾಗಿ ಲಕ್ಷಾಂತರ ರುಪಾಯಿ ವ್ಯಯಿಸಿ ಡಿವೈಡರ್‌ ಅಳವಡಿಸುವುದರ ಹಿಂದಿನ ಉದ್ದೇಶ ಸಾಕಾರಗೊಳ್ಳುತ್ತಿಲ್ಲ.

ಇನ್ನು, ರಸ್ತೆ ಡಿವೈಡರ್‌ಗಳಾಗಿ ಅಳವಡಿಸಲಾದ ಪ್ಲಾಸ್ಟಿಕ್‌ನ ಪೋಲ್‌ಗಳು ನಗರದ ಹಲವೆಡೆ ಈ ರೀತಿ ವಾಹನಗಳಿಂದ ಜಖಂಗೊಳ್ಳುತ್ತಲೇ ಇವೆ. ಇದರ ಬದಲಾಗಿ ಗಟ್ಟಿಯಾದ ಡಿವೈಡರ್‌ಗಳನ್ನು ಅಳವಡಿಸಬೇಕು. ಜೊತೆಗೆ ಡಿವೈಡರ್‌ಗಳಿಗೆ ಹಾನಿಯುಂಟು ಮಾಡುವ ವಾಹನ ಸವಾರರ ಮೇಲೆ ಕ್ರಮ ವಹಿಸಬೇಕು. ರಸ್ತೆ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವಂತೆ ಇಂತಹ ಚಾಲಕರನ್ನು ಪೊಲೀಸರು ಗುರುತಿಸಿ ದಂಡ ವಸೂಲಿ ಮಾಡಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.

---

ಫೋಟೋ: ಮಾಗಡಿ ರಸ್ತೆ ಟೋಲ್‌ಗೇಟ್‌ ಬಳಿ ತಿಂಗಳ ಹಿಂದಷ್ಟೇ ಹೊಸದಾಗಿ ಅಳವಡಿಸಿದ್ದ ಡಿವೈಡರ್‌ಗಳು ಮುರಿದುಬಿದ್ದಿವೆ.