ತೆರವುಗೊಳಿಸುವಂತೆ ಮನವಿ ಮಾಡಿದರೂ ಸ್ಪಂದನೆಯಿಲ್ಲ: ಸಾರ್ವಜನಿಕರ ಆಕ್ಷೇಪ

ಕನ್ನಡಪ್ರಭ ವಾರ್ತೆ ಗೋಕರ್ಣ

ಇಲ್ಲಿನ ಪ್ರಮುಖ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳು ರಸ್ತೆ ಆಕ್ರಮಿಸಿರುವುದನ್ನ ತೆರವುಗೊಳಿಸುವಂತೆ ಮನವಿ ಮಾಡಿದರೂ ಸಹ ಗ್ರಾಮ ಪಂಚಾಯಿತಿ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರವಾಸಿ ತಾಣದ ಬಹುತೇಕ ಇಂತಹ ಕಾನೂನು ಬಾಹಿರ ಚಟುವಟಿಕೆಗೆ ತಿಂಗಳಿಗೆ ಅಥವಾ ವರ್ಷಕ್ಕೆ ಇಂತಿಷ್ಟು ಎಂದು ನಿಗದಿಪಡಿಸಿ ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದು, ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ತ್ವರಿತ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಜನರ ಸಂದೇಹಕ್ಕೆ ಕಾರಣ:

ಇಲ್ಲಿನ ಮುಖ್ಯ ಕಡಲತೀರಕ್ಕೆ ಸಾಗುವ ಮಾರ್ಗ ಹಾಗೂ ರಥಬೀದಿ ಮತ್ತಿತರ ಕಡೆ ರಸ್ತೆಯನ್ನ ಆಕ್ರಮಿಸಿ ಅಂಗಡಿಯನ್ನ ಮುಂದೆ ತರಲಾಗಿದ್ದು, ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇದರಂತೆ ಇಲ್ಲಿನ ಸಂಗಮ ನಾಲಾದ ಸೇತುವೆಯ ಮೇಲೆ ಅಂಗಡಿಗಳನ್ನ ಇಟ್ಟಿದ್ದಾರೆ. ಇದರ ಪಕ್ಕದಲ್ಲಿನ ಅಂಗಡಿಯವರು ರಸ್ತೆಯಲ್ಲಿ ವಸ್ತುಗಳನ್ನ ಇಟ್ಟು ವ್ಯಾಪಾರ ನಡೆಸುತ್ತಿದ್ದಾರೆ. ಇದನ್ನ ತೆರವುಗೊಳಿಸುವಂತೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಎರಡು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಸೂಚಿಸಿದ್ದರು. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೂ ನಿರ್ದೇಶಿಸಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮವಾಗಿಲ್ಲ, ಇದಾದ ಬಳಿಕ ಸಾಮಾಜಿಕ ಕಾರ್ಯಕರ್ತ ಶ್ರೀರಾಮ ಸುರೆ ರಸ್ತೆ ಆಕ್ರಮಿಸಿದ ಅಂಗಡಿ ಮುಂಗಟ್ಟು ತೆರುವುಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಲಿಖಿತ ಮನವಿ ನೀಡಿದ್ದರು. ಈ ಮನವಿ ನೀಡಿ ತಿಂಗಳ ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರ ಹೊರತಾಗಿ ಗ್ರಾಪಂ ಸಭೆಯಲ್ಲಿ ಸಹ ತೆರವು ಕಾರ್ಯಾಚರಣೆಗೆ ಯಾವುದೇ ಸಮಯದಲ್ಲಾದರೂ ನಾವು ಜೊತೆಯಾಗುತ್ತೇವೆ ಎಂದು ಪೊಲೀಸ್ ಇಲಾಖೆ ಸಹ ಸಹಕಾರ ನೀಡುವುದಾಗಿ ತಿಳಿಸಲಾಗಿತ್ತು. ಇಷ್ಟಾದರೂ ಸಹ ಕ್ರಮ ಮುಂದಾಗದಿರುವುದು ಅಂಗಡಿಕಾರರೊಂದಿಗೆ ಗ್ರಾಪಂ ಅಧಿಕಾರಿಗಳು ಒಳಒಪ್ಪಂದವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಒಟ್ಟಾರೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ವಾಹನಗಳ ಸಂಚಾರಕೆ ರಸ್ತೆಯಲ್ಲಿನ ಅತಿಕ್ರಮಣ ತೀವ್ರ ತೊಂದರೆಯಾಗುತ್ತಿದ್ದು, ಸಮಸ್ಯೆ ಬಗೆಹರಿಸುವವರು ಯಾರು ಎಂಬುದು ತಿಳಿಯದಾಗಿದೆ.ಜಿಲ್ಲಾಡಳಿತದ ಸ್ಪಂದನೆಯೂ ಇಲ್ಲ:

ಶ್ರೀರಾಮ ಸುರೆ ಗ್ರಾಪಂಗೆ ಮನವಿ ನೀಡಿದ ಪ್ರತಿಯನ್ನ ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಿಗೆ ತಲುಪಿಸಿದ್ದಾರೆ. ಇಲ್ಲಿನ ಸಮಸ್ಯೆ ವಿವರಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಸ್ಪಂದನೆ ಇಲ್ಲವಾಗಿದೆ.