ಕ್ಷೇತ್ರದ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಸುಧಾರಣೆ

| Published : Aug 04 2025, 12:30 AM IST

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಬಸವನಬಾಗೇವಾಡಿ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುಧಾರಣೆ ಮಾಡುವ ಜೊತೆಗೆ ಆಯಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿಎ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಬಸವನಬಾಗೇವಾಡಿ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುಧಾರಣೆ ಮಾಡುವ ಜೊತೆಗೆ ಆಯಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿಎ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ತಾಲೂಕಿನ ನಂದಿಹಾಳ ಪಿಯು ಗ್ರಾಮದ ಕೆಬಿಎಸ್‌ಪಿಎಸ್ ಶಾಲಾ ದುರಸ್ತಿ, ಎಚ್‌ಪಿಎಸ್ ಶಾಲಾ ಕೊಠಡಿ ನಿರ್ಮಾಣ ಹಾಗೂ ಯುಬಿಎಲ್‌ಪಿಎಸ್ ಶಾಲೆಗೆ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ನಂದಿಹಾಳ ಪಿಯು ಗ್ರಾಮದಿಂದ ಹತ್ತರಕಿಹಾಳ ರಸ್ತೆ, ಮುತ್ತಗಿ ರಸ್ತೆ ಹಾಗೂ ಜಾಲಿಹಾಳ ತಾಂಡಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಂದಿಹಾಳ ಪಿಯು ಗ್ರಾಮದಿಂದ ಹತ್ತರಕಿಹಾಳ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಈ ರಸ್ತೆ ಮಾರ್ಗದಲ್ಲಿರುವ ರೈತ ಬಾಂಧವರು ರಸ್ತೆ ಕಾಮಗಾರಿಗೆ ಸಹಕಾರ ನೀಡುವ ಅಗತ್ಯವಿದೆ. ಈ ರಸ್ತೆ ಪೂರ್ಣಗೊಂಡರೆ ಮುಂದೆ ಮನಗೂಳಿಗೆ ತೆರಳಿ ಮುಂದೆ ವಿಜಯಪುರಕ್ಕೆ ತೆರಳಲು ಅನುಕೂಲವಾಗುತ್ತದೆ. ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲು ಪ್ರೌಢಶಾಲೆಯ ಮಂಜೂರಾತಿಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಬಸವನಬಾಗೇವಾಡಿ ಪಟ್ಟಣದಲ್ಲಿ ಕೆರೆ ನುಂಗಿದವರು ಇದ್ದಾರೆ. ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ಕೆರೆಯನ್ನು ಸುಮಾರು ₹ ೬,೭ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡುವ ಜೊತೆಗೆ ಮಾದರಿ ಕೆರೆಯನ್ನಾಗಿ ಮಾಡಲಾಗುತ್ತಿದೆ. ಬಸ್ ನಿಲ್ದಾಣವನ್ನು ಮುಂಬರುವ ದಿನಗಳಲ್ಲಿ ನಿರ್ಮಿಸಲಾಗುವುದು ಎಂದರು.ಮನಗೂಳಿ ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸಲಾಗಿದೆ. ಜೊತೆಗೆ ೪೦೦ ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಅನುಕೂಲವಾಗಲೆಂದು ವಸತಿ ನಿಲಯದ ಕಟ್ಟಡವನ್ನು ಸಹ ನಿರ್ಮಾಣ ಮಾಡಲಾಗಿದೆ. ಈ ಭಾಗದ ವಿದ್ಯಾರ್ಥಿಗಳು ವಿಶೇಷವಾಗಿ ವಿದ್ಯಾರ್ಥಿನಿಯರು ಬೇರೆಡೆ ವ್ಯಾಸಂಗಕ್ಕೆ ತೆರಳದೇ ಮನಗೂಳಿ ಪಟ್ಟಣದ ಪ.ಪೂ ಕಾಲೇಜು, ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡಬಹುದು. ಹೆಣ್ಣುಮಕ್ಕಳು ಕಲಿತರೆ ಇಡೀ ಕುಟುಂಬಕ್ಕೆ ಅನುಕೂಲವಾಗು ತ್ತದೆ. ಉದ್ಯೋಗದಲ್ಲಿ ಶೇ.೩೩ ರಷ್ಟು ಮಹಿಳೆಯರಿಗೆ ಮೀಸಲಾತಿ ಇರುವುದರಿಂದ ವಿದ್ಯಾವಂತ ಮಹಿಳೆಯರಿಗೆ ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಪಾಲಕರು ಹೆಣ್ಣುಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಡಿಸಿಸಿ ಬ್ಯಾಂಕ್‌ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಬಸವನಬಾಗೇವಾಡಿ ಕ್ಷೇತ್ರದ ಎಲ್ಲ ರಸ್ತೆಗಳ ಸುಧಾರಣೆ ಮಾಡುವ ಜೊತೆಗೆ ಪ್ರತಿ ಗ್ರಾಮಕ್ಕೂ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುವಂತೆ ಸಚಿವ ಶಿವಾನಂದ ಪಾಟೀಲ ಮಾಡಿದ್ದಾರೆ. ಇದರ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಶಾಲಾ ಕೋಣೆಗಳ ದುರಸ್ತಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೆರವುಗೊಳಿಸ ಹೊಸ ಕೋಣೆಗಳ ನಿರ್ಮಾಣ, ಹೊಸ ಕೋಣೆಗಳ ನಿರ್ಮಾಣಕ್ಕೆ ಸಚಿವರು ಆದ್ಯತೆ ನೀಡಿದ್ದಾರೆ ಎಂದರು.ಸಾನಿಧ್ಯವನ್ನು ಸಂಗಯ್ಯಸ್ವಾಮಿ ಕೊಡೆಕಲ್ಲಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಯಲ್ಲಪ್ಪ ಮಾದರ, ಸಂಗನಗೌಡ ಪಾಟೀಲ, ರಾಮು ಒಂಟಗೋಡಿ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಶಿವಣಗಿ, ಪರು ಕೊಲ್ಹಾರ, ಚನ್ನು ಜಹಾಗೀರದಾರ, ಬಸವರಾಜ ಪಡಶೆಟ್ಟಿ, ಗಿರಿಮಲ್ಲ ಹುಣಶ್ಯಾಳ, ಬಸವರಾಜ ಜಾಲಗೇರಿ, ಸಂಗೊಂಡಪ್ಪ ಕಲ್ಮಿನಿ, ಬಸಣ್ಣ ಹಾದಿಮನಿ, ಚನ್ನಗೌಡ ಪಾಟೀಲ, ರಾವುತಪ್ಪ ಬೆಂಕಿ, ಮಲಕಾಜಿ ಬೆಂಕಿ, ಮುಖ್ಯಗುರು ಡಿ.ಎನ್.ಸಂಗಳದ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಬಿಇಒ ವಸಂತ ರಾಠೋಡ, ತಾಪಂ ಇಒ ಪ್ರಕಾಶ ದೇಸಾಯಿ, ಜಿಪಂ ಎಇಇ ವಸಂತ ರಾಠೋಡ, ಕ್ಷೇತ್ರಸಮನ್ವಾಧಿಕಾರಿ ಸುನೀಲ ರಾಠೋಡ, ಬಿಆರ್‌ಪಿ ಭಾರತಿ ಪಾಟೀಲ, ಸಿಆರ್‌ಪಿ ಎಸ್.ಬಿ.ಸಜ್ಜನಶೆಟ್ಟಿ ಮುಂತಾದವರು ಇದ್ದರು.ಬಾಕ್ಸ್‌

ಪಿಡಿಒ ಗೈರಾಗಿದ್ದಕ್ಕೆ ಸಚಿವರು ಗರಂ

ಕಾರ್ಯಕ್ರಮದಲ್ಲಿ ಪಿಡಿಒ ಗೈರಾಗಿದ್ದಕ್ಕೆ ಸಚಿವ ಶಿವಾನಂದ ಪಾಟೀಲ ಗರಂ ಆದರು. ಭಾಷಣ ಮಾಡುವ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು ಇದ್ದಾರೆ. ಪಿಡಿಒ ಸ್ಥಳದಲ್ಲಿ ಯಾಕಿಲ್ಲ ಎಂದು ಅವರನ್ನು ಅಮಾನತು ಮಾಡುವಂತೆ ಇಒಗೆ ಹೇಳಿದರು. ಆಗ ಗ್ರಾಮಸ್ಥರು ಪಿಡಿಒ ಸರಿಯಾಗಿ ಕೆಲಸ ಮಾಡುವುದಿಲ್ಲ. ಗ್ರಾಮಕ್ಕೂ ಸರಿಯಾಗಿ ಭೇಟಿ ನೀಡುವುದಿಲ್ಲ. ಇವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಚಿವರನ್ನು ಒತ್ತಾಯಿಸಿದರು. ಆಗ ಸಚಿವರು ತಾಪಂ ಇಒಗೆ ಪಿಡಿಒ ಸರಿಯಾಗಿ ಕಾರ್ಯನಿರ್ವಹಿಸುವಂತೆ ಕ್ರಮ ತೆಗೆದುಕೊಳ್ಳಬೇಕು. ಅವರು ಸದ್ಯಕ್ಕೆ ಇಲ್ಲದೇ ಇರುವದರಿಂದ ನೀವು ಸರಿಯಾಗಿ ಕೆಲಸ ಆರಂಭಿಸಿ ತೆರಳಬೇಕೆಂದು ಇಒ ಪ್ರಕಾಶ ದೇಸಾಯಿಗೆ ಸೂಚನೆ ನೀಡಿದರು.