ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನ ಭರತವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಗಸರಹಟ್ಟಿ ಗ್ರಾಮದ ರಸ್ತೆ ಒತ್ತುವರಿಯಾಗಿದ್ದು, ಇದನ್ನು ಬಿಡಿಸಿಕೊಟ್ಟು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ತಾಲೂಕು ಕಚೇರಿ ಮುಂದೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.ಗ್ರಾಮಸ್ಥ ಕಾಂತರಾಜು ಮಾತಾನಾಡಿ, ಮಾವನೂರಿನಿಂದ ಅಗಸರಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸರ್ವೇ ನಂಬರ್ 25ರ ಮಣ್ಣಿನ ರಸ್ತೆ ಜಾಗವನ್ನು ಕೆಲ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು, ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದು ದನಕರುಗಳು, ಹಾಗೂ ಊರಿನ ಜನರು ಓಡಾಡದಂತೆ ಕಿರುಕುಳ ನೀಡುತ್ತಿದ್ದಾರೆ. ಈ ರಸ್ತೆಯು ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳಿಂದ ತೆರವುಗೊಳಿಸಿಕೊಡಬೇಕು ಹಾಗೂ ಕೊಡಲೇ ಒತ್ತುವರಿ ಮಾಡಿಕೊಂಡ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ದಿನ ಕಚೇರಿಗೆ ಬಂದರೆ ತಹಸೀಲ್ದಾರಾದಿಯಾಗಿ ಸಂಬಂಧಪಟ್ಟ ಅಧಿಕಾರಿಗಳು ಯಾರೊಬ್ಬರೂ ಇಲ್ಲಿಲ್ಲ. ತಹಸೀಲ್ದಾರ್ ಕಚೇರಿಗೆ ಹತ್ತಾರು ಬಾರಿ ಅಲೆದು ಬೇಸತ್ತು ನಾವು ಪ್ರತಿಭಟನೆಯ ದಾರಿ ಹಿಡಿದಿದ್ದೇವೆ. ತಕ್ಷಣ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಕಾಂಗ್ರೆಸ್ ಮುಖಂಡ ಶಾಂತಕೃಷ್ಣ ಮಾತನಾಡಿ, ಗ್ರಾಮಕ್ಕೆ ಸಂಪರ್ಕ ಕಲಿಸುವ ಪ್ರಮುಖ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇದನ್ನು ಬಿಡಿಸಿಕೊಡುವಂತೆ ಒತ್ತಾಯಿಸಿದರೂ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು ಬೇಸರದ ವಿಚಾರವಾಗಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದರು.ಛಲವಾದಿ ಮಹಾಸಭಾದ ಗೌರವಾಧ್ಯಕ್ಷ ಎ ಟಿ ಮಲ್ಲೇಶ್ ಮಾತನಾಡಿ ತಾಲೂಕು ಕಚೇರಿಗೆ ಯಾವಾಗ ಬಂದರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿಗುತ್ತಿಲ್ಲ. ಎಲ್ಲರೂ ಎಸ್‌ಐಆರ್ ಕೆಲಸದ ನೆಪ ಹೇಳಿಕೊಂಡು ಕಚೇರಿಗೆ ಗೈರಾಗುತ್ತಿದ್ದಾರೆ. ಪ್ರತಿದಿನವೂ ಗ್ರಾಮೀಣ ಪ್ರದೇಶದಿಂದ ರೈತರು,ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಇಲ್ಲಿಗೆ ಅಲೆಯುವಂತಾಗಿದೆ. ಎಸ್‌ಐಆರ್‌ನ ನೆಪ ಹೇಳಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದರಿಂದಾಗಿ ಅಗಸರಹಟ್ಟಿ ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿಯಬೇಕಾಗಿದೆ. ಜಿಲ್ಲಾಧಿಕಾರಿಗಳು ಶೀಘ್ರ ಇತ್ತ ಗಮನಹರಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ವೆಂಕಟರಾಮೇಗೌಡ, ಜಯಣ್ಣ, ಪುಟ್ಟಸ್ವಾಮಿ, ನಾಗರಾಜು,ತಿಮ್ಮೆಗೌಡ, ಗುರುಸ್ವಾಮಿ, ದಿನೇಶ್, ಕಾಂತರಾಜು, ಜಗದೀಶ್, ಹೊನ್ನೇಗೌಡ, ಯೋಗೇಶ್, ವೆಂಕಟೇಗೌಡ ಮುಂತಾದವರು ಭಾಗವಹಿಸಿದ್ದರು.ಗ್ರಾಮಸ್ಥರಿಗೆ ಸೇರಿದ ರಸ್ತೆ ಜಾಗ ಪ್ರಭಾವಿ ವ್ಯಕ್ತಿಗಳಿಂದ ಒತ್ತುವರಿ
ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳಿಂದ ತೆರವುಗೊಳಿಸಿಕೊಡಬೇಕು ಹಾಗೂ ಕೊಡಲೇ ಒತ್ತುವರಿ ಮಾಡಿಕೊಂಡ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ದಿನ ಕಚೇರಿಗೆ ಬಂದರೆ ತಹಸೀಲ್ದಾರಾದಿಯಾಗಿ ಸಂಬಂಧಪಟ್ಟ ಅಧಿಕಾರಿಗಳು ಯಾರೊಬ್ಬರೂ ಇಲ್ಲಿಲ್ಲ. ತಹಸೀಲ್ದಾರ್ ಕಚೇರಿಗೆ ಹತ್ತಾರು ಬಾರಿ ಅಲೆದು ಬೇಸತ್ತು ನಾವು ಪ್ರತಿಭಟನೆಯ ದಾರಿ ಹಿಡಿದಿದ್ದೇವೆ. ತಕ್ಷಣ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.