ಹಿರಿಯರಿಂದಲೇ ಕಾತರಕಿ ಗ್ರಾಮದ ರಸ್ತೆ ದುರಸ್ತಿ

| Published : Dec 04 2024, 12:31 AM IST

ಹಿರಿಯರಿಂದಲೇ ಕಾತರಕಿ ಗ್ರಾಮದ ರಸ್ತೆ ದುರಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕಿನ್ನಾಳ ಗ್ರಾಮಸ್ಥರು ತಮ್ಮೂರಿನ ರಸ್ತೆಯನ್ನು ತಾವೇ ದುರಸ್ತಿ ಮಾಡಿಕೊಂಡ ಮೇಲೆ ಈಗ ತಾಲೂಕಿನ ಕಾತರಕಿ ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿಯೇ ರಸ್ತೆ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ.

ತೀವ್ರ ಹದಗೆಟ್ಟ ರಸ್ತೆ, ಮೊಳಕಾಲುದ್ದದ ಗುಂಡಿಗಳು

ಬಾರದ ಸಾರಿಗೆ ಬಸ್, ಬೇಸತ್ತ ಗ್ರಾಮಸ್ಥರು

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಕಿನ್ನಾಳ ಗ್ರಾಮಸ್ಥರು ತಮ್ಮೂರಿನ ರಸ್ತೆಯನ್ನು ತಾವೇ ದುರಸ್ತಿ ಮಾಡಿಕೊಂಡ ಮೇಲೆ ಈಗ ತಾಲೂಕಿನ ಕಾತರಕಿ ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿಯೇ ರಸ್ತೆ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ.

ಮುಖ್ಯರಸ್ತೆಯಿಂದ ಕಾತರಕಿ ಗ್ರಾಮದೊಳಗೆ ಬರುವ ರಸ್ತೆ ತೀವ್ರ ಹದಗೆಟ್ಟಿದ್ದು, ಮೊಣಕಾಲುದ್ದ ಗುಂಡಿಗಳು ಬಿದ್ದಿರುವುದರಿಂದ ಆಗಾಗ ಅಪಘಾತಗಳು ಆಗುತ್ತಿವೆ ಮತ್ತು ಸಾರಿಗೆ ಬಸ್‌ನವರು ಗ್ರಾಮದೊಳಗೆ ಬಾರದಂತೆ ಆಗಿದೆ. ಈ ರಸ್ತೆ ದುರಸ್ತಿ ಮಾಡಿಸುವಂತೆ ಮಾಡಿದ ಮನವಿಗೆ ಸ್ಪಂದನೆ ದೊರೆಯುತ್ತಿಲ್ಲ. ವಿಧಿಯಿಲ್ಲದೇ ಗ್ರಾಮದ ಹಿರಿಯರೇ ತೀರ್ಮಾನ ಮಾಡಿ, ರಸ್ತೆ ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ.

ಗ್ರಾಮದಲ್ಲಿರುವ ಜೆಸಿಬಿಗಳನ್ನು ಬಳಕೆ ಮಾಡಿಕೊಂಡು, ಗ್ರಾಮದ ಹಿರಿಯರೆಲ್ಲರೂ ಸೇರಿ ವಂತಿಗೆ ಹಾಕಿಕೊಂಡು, ರಸ್ತೆ ದುರಸ್ತಿ ಪ್ರಾರಂಭಿಸಿದ್ದಾರೆ.

ಈಗ ₹50-60 ಸಾವಿರ ಸಂಗ್ರಹವಾಗಿದೆ. ಜೆಸಿಬಿಯಿಂದ ಲೇವಲ್ ಮಾಡಿ, ಮರ್ರಂ ತಂದು ಹಾಕುತ್ತಿದ್ದಾರೆ. ಇದಾದ ಮೇಲೆ ರೂಲರ್ ಸಹ ಹೊಡೆದು, ಲೇವಲ್ ಮಾಡಲು ತೀರ್ಮಾನಿಸಿ, ಮಂಗಳವಾರ ಕಾಮಗಾರಿ ಪ್ರಾರಂಭಿಸಿದ್ದಾರೆ. ನದಿ ದಂಡದಿಂದ ಮರ್ರಂ ಹೇರಿತಂದು, ರಸ್ತೆಯನ್ನು ದುರಸ್ತಿ ಮಾಡುತ್ತಿದ್ದಾರೆ.

ವ್ಯಾಪಕ ಪ್ರಶಂಸೆ:

ಕೊಪ್ಪಳ ತಾಲೂಕಿನ ಅನೇಕ ರಸ್ತೆಗಳು ಹದಗೆಟ್ಟಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾಡದೆ ಇರುವುದನ್ನು ಕೇವಲ ಖಂಡಿಸಿ, ದೂಷಿಸದೇ ಗ್ರಾಮಸ್ಥರೇ ರಸ್ತೆಗಳನ್ನು ದುರಸ್ತಿ ಮಾಡಿಕೊಳ್ಳುತ್ತಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಬಹುತೇಕ ರಸ್ತೆಗಳ ಸ್ಥಿತಿ ಶೋಚನೀಯ:

ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳ ಪಾಳುಗುಂಡಿಯಂತಾಗಿವೆ. ಅವುಗಳನ್ನು ರಸ್ತೆಗಳು ಎಂದು ಕರೆಯಲು ಆಗದಂತೆ ಆಗಿದ್ದು, ಇನ್ನು ಅಲ್ಲಿ ಸಂಚಾರ ದೇವರೀಗೆ ಪ್ರೀತಿ ಎನ್ನುವಂತೆ ಇದೆ. ಹೀಗಾಗಿ, ಜನರು ಹಿಡಿಶಾಪ ಹಾಕುತ್ತಿದ್ದಾರೆ. ಹೀಗಾಗಿ, ಈಗ ಗ್ರಾಮಸ್ಥರೇ ತಮ್ಮ ತಮ್ಮ ರಸ್ತೆಗಳನ್ನು ದುರಸ್ತಿ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.