ರಸ್ತೆ ನಿಯಮ ಪಾಲಿಸಿ ವಾಹನ ಚಲಾಯಿಸಿ: ನ್ಯಾ. ಸಿದ್ಧರಾಮ

| Published : Sep 20 2024, 01:32 AM IST

ಸಾರಾಂಶ

Road Rules Policy Drive: Ny. Siddharama

-ಸಂಚಾರ ನಿಯಮ ಪಾಲನೆ, ಕಾನೂನಿನ ಅರಿವು, ಜಾಗೃತಿ ಕಾರ್ಯಕ್ರಮ

------

ಕನ್ನಡಪ್ರಭ ವಾರ್ತೆ ಶಹಾಪುರ

ರಸ್ತೆ ಸುರಕ್ಷತಾ ನಿಯಮ ಪಾಲನೆಯಿಂದ ಅಪಘಾತಗಳು ಕಡಿಮೆಯಾಗಿ ಅಮೂಲ್ಯ ಜೀವಗಳು ಉಳಿಯಲಿವೆ. ವಾಹನ ಸವಾರರು ಅತ್ಯಂತ ಜಾಗೃತೆಯಿಂದ ವಾಹನ ಚಲಾಯಿಸಿದಾಗ ಮಾತ್ರ ಅಪಘಾತ ತಡೆಯಲು ಸಾಧ್ಯ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಸಿದ್ದರಾಮ ಟಿ.ಪಿ. ಹೇಳಿದರು.

ಸಗರನಾಡು ಮೋಟಾರ್ ಡ್ರೈವಿಂಗ್ ಸ್ಕೂಲ್ ಸಂಸ್ಥೆಯಲ್ಲಿ ಸಾರಿಗೆ ಇಲಾಖೆ ಯಾದಗಿರಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಹಾಗೂ ತಾಲೂಕು ಕಾನೂನು ಸೇವಗಳ ಸಮಿತಿ ಶಹಪುರ ತಾಲೂಕ ವಕೀಲರ ಸಂಘ ಮತ್ತು ಸಗರನಾಡು ಮೋಟಾರ್ ಡ್ರೈವಿಂಗ್ ಸ್ಕೂಲ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಾಹನ ಅಪಘಾತ ಮತ್ತು ರಸ್ತೆ ಸುರಕ್ಷತೆಯ ಸಂಚಾರಿ ನಿಯಮ ಪಾಲನೆ ಕಾನೂನಿನ ಅರಿವು ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸುರಕ್ಷತಾ ಸಾಧನಗಳಾದ ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಧರಿಸಬೇಕು. ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಇದರಿಂದ ಜೀವವನ್ನು ನಾವೇ ಕಾಪಾಡಿಕೊಂಡಂತಾಗುತ್ತದೆ. ರಸ್ತೆಗಳಲ್ಲಿ ಅಳವಡಿಸಿದ ಸೂಚನಾ ಫ‌ಲಕ ಗಮನಿಸಿ ವಾಹನ ಓಡಿಸಬೇಕು. ರಸ್ತೆಗಳಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಸುರಕ್ಷತಾ ಕ್ರಮಗಳು, ನಿಯಮಗಳ ಪಾಲನೆಯಿಂದ ಅಪಘಾತ ತಡೆಯಲು ಸಾಧ್ಯವಿದೆ. ನಾಗರಿಕರು ಚಾಲನಾ ನಿಯಮಗಳನ್ನು ಅನುಸರಿಸುವುದರಿಂದ ಹೆಚ್ಚಿನ ಅಪಘಾತ ತಡೆಗಟ್ಟಲು ಸಾಧ್ಯ ಎಂದರು.

ಚಾಲಕರ ತರಬೇತಿ ಕೇಂದ್ರ ಹಗರಬೊಮ್ಮನಹಳ್ಳಿ ಮರುಳಸಿದ್ದಯ್ಯ ಹಿರೇಮಠ ಅವರು, ರಸ್ತೆ ಅಪಘಾತಗಳು ಸಂಭವಿಸಿ ಸಾವು-ನೋವು ಉಂಟಾಗಲು ವಾಹನ ಚಾಲಕರ ಅಜಾಗರೂಕತೆಯೇ ಮುಖ್ಯ ಕಾರಣ. ಬೈಕ್‌ ಸೇರಿದಂತೆ ಯಾವುದೇ ವಾಹನ ಚಾಲನೆ ಮಾಡುವ ವ್ಯಕ್ತಿ ಚಾಲನಾ ಪರವಾನಗಿ ಜತೆಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಂಡಿರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ದೇಶಮುಖ ಅವರು ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಅಮರೇಶ್ ಇಟಗಿ, ನ್ಯಾ. ಭೀಮನಗೌಡ ಪಾಟೀಲ್, ಯಾದಗಿರಿ ಜಿಲ್ಲಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಸೇರಿದಂತೆ ಆಟೋ ಬೈಕ್ ವಾಹನ ಸವಾರರು ಇದ್ದರು.

------

19ವೈಡಿಆರ್1: ಶಹಾಪುರ ನಗರದ ಸಗರನಾಡು ಮೋಟಾರ್ ಡ್ರೈವಿಂಗ್ ಸ್ಕೂಲ್ ಸಂಸ್ಥೆಯಲ್ಲಿ ವಾಹನ ಅಪಘಾತ ಮತ್ತು ರಸ್ತೆ ಸುರಕ್ಷತೆಯ ಸಂಚಾರಿ ನಿಯಮ ಪಾಲನೆ ಕಾನೂನಿನ ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.