ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಮಡಿಕೇರಿ: ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜಾಸೀಟು ರಸ್ತೆ ಅಭಿವೃದ್ಧಿ, ಸಂಪಾಜೆಯಿಂದ ಕುಶಾಲನಗರದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಡೆಯುವಲ್ಲಿ ಕೈಗೊಳ್ಳಲಾಗಿರುವ ಕ್ರಮಗಳು, ಕುಶಾಲನಗರದಿಂದ ಕೂಡಿಗೆ ಮಾರ್ಗದ ರಸ್ತೆ, ವಿರಾಜಪೇಟೆ-ಗೋಣಿಕೊಪ್ಪ ರಸ್ತೆ ಮತ್ತಿತರ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ನಗರದ ರಾಜಾಸೀಟು ರಸ್ತೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದರು.

ಈ ಸಂದರ್ಭ ಮಾತನಾಡಿದ ನಗರಾಭಿವೃದ್ಧಿ ಯೋಜನಾ ಶಾಖೆಯ ಕಾರ್ಯಪಾಲಕ ಎಂಜಿನಿಯರ್ ಡಿ.ಶ್ರೀನಿವಾಸ್ ಅವರು ಕಾಂಕ್ರೀಟ್ ಸಂದರ್ಭದಲ್ಲಿ ರಾಜಾಸೀಟು ರಸ್ತೆಯನ್ನು ಸಂಪೂರ್ಣ ಮುಚ್ಚುವುದು ಒಳಿತು ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.

ರಾಜಾಸೀಟು ರಸ್ತೆಯ 7.50 ಮೀ. ಅಗಲ ಮತ್ತು 720 ಮೀ. ಉದ್ದವನ್ನು ಸುಮಾರು 1.50 ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಒಂದು ವಾರದಲ್ಲಿ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳಲಾಗುವುದು. 20 ದಿನಗಳ ಕಾಲ ಕ್ಯೂರಿಂಗ್ ಮಾಡಬೇಕಿದೆ. ಒಟ್ಟಾರೆ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಆ ನಿಟ್ಟಿನಲ್ಲಿ ರಸ್ತೆ ಮುಚ್ಚಿದಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬಹುದಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

‘ರಾಜಸೀಟು ರಸ್ತೆಯ 7.50 ಮೀ. ಅಗಲದಲ್ಲಿ 3.75 ಮೀ ಅರ್ಧ ರಸ್ತೆ ಕಾಮಗಾರಿ ಕೈಗೊಂಡು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿದ್ದಲ್ಲಿ ಮತ್ತೊಂದು ಅರ್ಧ ಭಾಗ ನಂತರ ಕೈಗೊಳ್ಳಬಹುದು. ಆದರೆ ರಸ್ತೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾಗಲಿದೆ ಎಂದು ಶ್ರೀನಿವಾಸ್ ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೂರಜ್, ಸದ್ಯ ರಾಜಾಸೀಟು ಉದ್ಯಾನವನವನ್ನು ಒಂದು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶಕ್ಕೆ ಸ್ಥಗಿತಗೊಳಿಸಿದ್ದಲ್ಲಿ, ರಸ್ತೆ ಕಾಮಗಾರಿ ಕೈಗೊಳ್ಳಲು ಸಹಕಾರಿ ಆಗಲಿದೆ ಎಂದು ಸಲಹೆ ಮಾಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಪೊಲೀಸ್ ಇಲಾಖೆಯಿಂದ ವಾಹನ ಸಂಚಾರ ಮಾರ್ಗ ಬದಲಾವಣೆ ಬಗ್ಗೆ ಅಗತ್ಯ ವರದಿ ನೀಡುವಂತೆ ಸಲಹೆ ಮಾಡಿದರು.

ಸಂಪಾಜೆ-ಕುಶಾಲನಗರ ಹೆದ್ದಾರಿಯಲ್ಲಿ ಇತ್ತೀಚೆಗೆ ಸರಣಿ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಉಂಟಾಗಿದೆ. ಸದ್ಯ ಹಂಪ್ಸ್ಗಳನ್ನು ಅಳವಡಿಸಲಾಗಿದೆ. ಆದರೆ ಜೀಬ್ರಾ ಕ್ರಾಸ್, ಕ್ಯಾಟ್ ಐಸ್, ಸೈನ್ ಬೋರ್ಡ್, ಮತ್ತಿತರವನ್ನು ಅಳವಡಿಸಬೇಕಿದ್ದು, ಈ ಬಗ್ಗೆ ಗಮನಹರಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಹೆದ್ದಾರಿ ವಿಭಾಗದ ಎಂಜಿನಿಯರ್ ಸಂಜೀವ್ ಕುಮಾರ್ ಅವರು ಈಗಾಗಲೇ ಹೆದ್ದಾರಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ 24.54 ಲಕ್ಷ ರು. ಬಿಡುಗಡೆಯಾಗಿದ್ದು, ಡಿಸೆಂಬರ್, ಅಂತ್ಯದೊಳಗೆ ಕ್ಯಾಟ್‌ಐಸ್, ಸೈನ್ ಬೋರ್ಡ್, ಜೀಬ್ರಾ ಕ್ರಾಸ್ ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ 275 ರ ಸಂಪಾಜೆಯಿಂದ ಕಾಟಿಕೇರಿ ವರೆಗೆ ಡಾಂಬರ್ ರಸ್ತೆ ನವೀಕರಣ ಕಾಮಗಾರಿ ಪೂರ್ಣಗೊಂಡಿದೆ. ರಸ್ತೆ ಸುರಕ್ಷತಾ ಫಲಕಗಳು, ಥರ್ಮೋ ಪ್ಲಾಸ್ಟಿಕ್ ಪೈಂಟ್ ಮಾಡಲಾಗಿದೆ. ಕಾಟಿಕೇರಿಯಿಂದ ಕುಶಾಲನಗರದವರೆಗೆ ಥರ್ಮೋ ಪ್ಲಾಸ್ಟಿಕ್ ಪೈಂಟ್ ಹಾಗೂ ಕ್ಯಾಟ್‌ಐಸ್‌ನ್ನು ಪೂರ್ಣಪ್ರಮಾಣದಲ್ಲಿ ಅಳವಡಿಸಲಾಗುವುದು ಎಂದರು.

ಹಾಗೆಯೇ ಆನೆಕಾಡು ಸ್ಥಳದಲ್ಲಿ ವೇಗದ ಮಿತಿಯನ್ನು ಕಡಿಮೆಗೊಳಿಸಲು ಆರು ಸ್ಥಳಗಳಲ್ಲಿ ವೈಜ್ಞಾನಿಕ ಹಂಪ್ಸ್ಗಳನ್ನು ಅಳವಡಿಸಲಾಗಿದ್ದು, ರಸ್ತೆ ಸುರಕ್ಷತಾ ಫಲಕ ಅಳವಡಿಸಲಾಗಿದೆ. ಪೊಲೀಸ್ ಇಲಾಖೆ ಜೊತೆ ಜಂಟಿ ಸಮೀಕ್ಷೆ ನಡೆಸಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ಸಂಜೀವ್ ಕುಮಾರ್ ಅವರು ಮಾಹಿತಿ ನೀಡಿದರು. ಲೋಕೋಪೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಪ್ರಭು ಮಾಹಿತಿ ನೀಡಿದರು.

ಪಂಚಾಯತ್ ರಾಜ್ ಎಂಜಿನಿಯರ್ ಜಿ.ಎಚ್.ನಾಯಕ್, ಆರ್‌ಟಿಒ ಇನ್ಸ್ಪೆಕ್ಟರ್ ಪ್ರದೀಪ್, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ರಾಮಚಂದ್ರ ದರ್ಶನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ(ಮಡಿಕೇರಿ), ಸತೀಶ(ವಿರಾಜಪೇಟೆ), ಕುಮಾರ(ಸೋಮವಾರಪೇಟೆ), ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹೇಮಂತ್ ಕುಮಾರ್(ನಗರಸಭೆ), ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಇತರರು ಇದ್ದರು.