ಸುಪಾ ಹಿನ್ನೀರು, ಮಳೆಯಿಂದ ರಸ್ತೆ ಸಂಚಾರ ಕಡಿತ

| Published : Sep 03 2024, 01:33 AM IST

ಸುಪಾ ಹಿನ್ನೀರು, ಮಳೆಯಿಂದ ರಸ್ತೆ ಸಂಚಾರ ಕಡಿತ
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ಮನೆಯಿಂದ ಹೊರಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಹಲವು ದಿನಗಳಿಂದ 150 ಮಿಮೀಗಿಂತ ಹೆಚ್ಚು ಮಳೆ ಪ್ರತಿದಿನ ಬೀಳುತ್ತಿದ್ದು, ಜನರು ಸರಿಯಾದ ವ್ಯವಸ್ಥೆ ಇಲ್ಲದೇ ಹೈರಾಣಾಗಿದ್ದಾರೆ.

ಜೋಯಿಡಾ: ತಾಲೂಕಿನ ಕ್ಯಾಸಲ್‌ ರಾಕ್ ಏರಿಯಾದಲ್ಲಿ ಬೀಳುತ್ತಿರುವ ಭಾರಿ ಮಳೆ ಹಾಗೂ ಸುಪಾ ಡ್ಯಾಂ ಹಿನ್ನೀರಿನಿಂದ ಬಜಾರ್ ಕುಣಂಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಸೋಮವಾರ ಸಂಪೂರ್ಣ ಸಂಪರ್ಕ ಕಳೆದುಕೊಂಡಿವೆ.

ಕರೆಂಜೆ ಬಜಾರ್, ಕುಣಂಗ್, ಕಿಂದಲೇ, ಅಸುಳ್ಳಿ, ದೂದ್ ಮಳಾ, ಬೊಂಡೇಲಿ, ಡಿಗ್ಗಿ, ಸೋಲಿಯೇ ಸೇರಿದಂತೆ ಹಲವಾರು ಗ್ರಾಮಗಳ ಸಂಪರ್ಕಿಸುವ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಇದರಿಂದ ಈ ಗ್ರಾಮಗಳ ಸಂಪರ್ಕ ಕಡಿತವಾಗಿದೆ.

ಜನರಿಗೆ ಮನೆಯಿಂದ ಹೊರಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಹಲವು ದಿನಗಳಿಂದ 150 ಮಿಮೀಗಿಂತ ಹೆಚ್ಚು ಮಳೆ ಪ್ರತಿದಿನ ಬೀಳುತ್ತಿದ್ದು, ಜನರು ಸರಿಯಾದ ವ್ಯವಸ್ಥೆ ಇಲ್ಲದೇ ಹೈರಾಣಾಗಿದ್ದಾರೆ.

ಹೀಗಾಗಿ ಇಲ್ಲಿನ ಶಾಲೆಗಳು ಬಂದಾಗಿವೆ. ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸುವ ಪರಿಸ್ಥಿತಿ ಇಲ್ಲವಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಆಶಾ ಕಾರ್ಯಕರ್ತೆಯರು, ಶಿಕ್ಷಕರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಬಸ್‌ಗಳು ಸಂಚರಿಸುತ್ತಿಲ್ಲ. ಅಧಿಕಾರಿಗಳು ಸಂಚರಿಸಲು ದೋಣಿಯನ್ನೂ ನೀಡುತ್ತಿಲ್ಲ. ಗ್ರಾಮಸ್ಥರು ಕೇಳಿದರೆ ಜಿಲ್ಲಾಧಿಕಾರಿಗೆ ಹೇಳಿದ್ದೇವೆ ಎನ್ನುತ್ತಾರೆ.

ಇಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಈ ರೀತಿ ಆಗುತ್ತಿರುವುದು ಅಧಿಕಾರಿಗಳಿಗೆ ಗೊತ್ತಿದೆ. ಅದಕ್ಕಾಗಿ ಜನರು ಕಿಂದಲೇಯಲ್ಲಿ ಸೇತುವೆ ನಿರ್ಮಿಸಿ ಪರಿಹಾರ ಒದಗಿಸಿ ಎಂದರೂ ಸಂಬಂಧಪಟ್ಟವರು ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯಿತಿಗೆ ಸಮಸ್ಯೆ ಗೊತ್ತಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಸುಪಾದಲ್ಲೂ ನೀರು ಏರಿಕೆ: ಸುಪಾ ಜಲಾಶಯ ಮಟ್ಟವೂ 560 ಮೀ. ತಲುಪಿದೆ. ಗರಿಷ್ಠ 564 ಮೀ. ಸಾಮರ್ಥ್ಯದ ಜಲಾಶಯವು ಭರ್ತಿ ಹಂತ ತಲುಪಿದೆ. ಈ ಡ್ಯಾಂ ಮಟ್ಟ 560 ಮೀ. ದಾಟಿದರೆ ಬಜಾರ್ ಕುಣಂಗ್ ವ್ಯಾಪ್ತಿಯ ಗ್ರಾಮಗಳು ಸಂಪರ್ಕ ಕಳೆದುಕೊಂಡು ಬಿಡುತ್ತವೆ. ಹೀಗಾಗಿ ಮಳೆ ಪ್ರಮಾಣ ಇಳಿಕೆಯಾದ ಕೂಡಲೇ ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಸ್ಪಂದಿಸುತ್ತಿಲ್ಲ: ಇಲ್ಲಿನ ಸಮಸ್ಯೆ ಬಗ್ಗೆ ತಹಸೀಲ್ದಾರರಿಗೆ ತಿಳಿಸಿದ್ದು, ಇದುವರೆಗೂ ದೋಣಿ ವ್ಯವಸ್ಥೆ ಮಾಡಿಲ್ಲ. ತಾಲೂಕಿನ ಸಮಸ್ಯೆ ಗೊತ್ತಿದ್ದೂ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಪ್ರಪುಲ್ ತಿಳಿಸಿದರು.