ಸಾರಾಂಶ
ಬ್ಯಾಡಗಿ: ಮುಖ್ಯರಸ್ತೆ ಅಗಲಿಕರಣಗೊಳಿಸುವ ವಿಚಾರದಲ್ಲಿ ನನಗೆ ಯಾರಿಂದಲೂ ಒತ್ತಡವಿಲ್ಲ ನಿಯಮಾನುಸಾರ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136 (ಮುಖ್ಯರಸ್ತೆ) ಅಗಲೀಕರಣ ಕಾಮಗಾರಿ ಮಾಡುವ ಮೂಲಕ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಶುಕ್ರವಾರ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಕಳೆದ 4 ದಿನದಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.ಇಟ್ಟ ಹೆಜ್ಜೆ ಹಿಂದಕ್ಕೆ ಪಡೆಯಲಾರೆ: ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ನಾನಿಟ್ಟದ್ದ ಗುರಿಯೊಂದು ತಪ್ಪಿದೆ, ಆದರೆ ಈ ಬಾರಿ ಗುರಿ ತಪ್ಪುವುದೂ ಅಷ್ಟಕ್ಕೂ ಇಟ್ಟಿರುವ ಹೆಜ್ಜೆ ಹಿಂಪಡೆಯುವ ಪ್ರಶ್ನೆಯಿಲ್ಲ, ಪಟ್ಟಣದಲ್ಲಿನ ಎಲ್ಲ ಹಿರಿಯ ಮುಖಂಡರೊಂದಿಗೆ ಚರ್ಚಿಸಿದ್ದೇನೆ, ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣಕ್ಕೆ ಅಗಲೀಕರಣ ಎಷ್ಟು ಪ್ರಮಾಣದಲ್ಲಿ ಅವಶ್ಯವಿದೆ ಎಂಬುದರ ಕುರಿತು ಮನವರಿಕೆ ಮಾಡಿದ್ದೇನೆ, ಅದಕ್ಕೆ ಅವರೆಲ್ಲರ ಸಮ್ಮತಿ ದೊರೆತಿದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಗಲೀಕರಣ ಮಾಡಲಿದ್ದೇನೆ ಎಂದರು.
ನಿಮ್ಮದು ನ್ಯಾಯಸಮ್ಮತ ಹೋರಾಟ: ಮುಖ್ಯರಸ್ತೆ ಅಗಲೀಕರಣಗೊಳಿಸುವ ವಿಚಾರವಾಗಿ ಗೌರವಾಧ್ಯಕ್ಷ ಗಂಗಣ್ಣ ಎಲಿ ನೇತೃತ್ವದಲ್ಲಿ ಕಳೆದ 12 ವರ್ಷದಿಂದ ತಾವು ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ, ಇದರಲ್ಲಿ ಯಾರೊಬ್ಬರ ವೈಯಕ್ತಿಕ ಹಿತಾಸಕ್ತಿಯಿಲ್ಲ ತಮ್ಮ ಹೋರಾಟದಿಂದ ಪಟ್ಟಣದಲ್ಲಿ ಜನರ ಬಹುದೊಡ್ಡ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ, ನೀವು ನಡೆಸುತ್ತಿರುವ ಹೋರಾಟದಿಂದ ನನ್ನ ಮೇಲೆ ಇನ್ನಷ್ಟು ಜವಾಬ್ದಾರಿಗಳು ಹೆಚ್ಚಾಗಿದ್ದು, ಮುಖ್ಯರಸ್ತೆ ಅಗಲೀಕರಣಗೊಳಿಸುವ ಮೂಲಕ ಹೋರಾಟಗಾರರ ಗೌರವ ಹೆಚ್ಚಿಸಲಿದ್ದೇನೆ ಎಂದರು.ಅಧಿಕಾರಿಗಳು ಮಾಡಿದ ತಪ್ಪಿನಿಂದ ಮುಖ್ಯರಸ್ತೆ ಅಗಲೀಕರಣ ವಿಳಂಬವಾಗಿದೆ. ತಡೆಯಾಜ್ಞೆ ಇಲ್ಲದಿದ್ದರೂ ನ್ಯಾಯಾಲಯದ ಹೆಸರನ್ನು ಹೇಳಿಕೊಂಡು ಇಲ್ಲಿಯವರೆಗೂ ಮುಂದೂಡುತ್ತಾ ಬಂದಿದ್ದಾರೆ, ಶಿಥಿಲಗೊಂಡ ಕಟ್ಟಡಗಳನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಸಿದರೂ ಲೋಕೋಪಯೋಗಿ ಮತ್ತು ಪುರಸಭೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದರು.
ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ರಾಘವೇಂದ್ರ ಭಜಂತ್ರಿ, ಒಬ್ಬ ಮಹಾನ್ ಲಂಚಕೋರ ಇಷ್ಟೆಲ್ಲ ಅವಾಂತರಕ್ಕೆ ಆತನೇ ಕಾರಣ, ಮುಖ್ಯರಸ್ತೆಯಲ್ಲಿ ವರ್ತಕರೊಂದಿಗೆ ಶಾಮೀಲಾಗಿದ್ದು ಹಣ ಪಡೆದು ಅವರ ಪರವಾಗಿ ಕೆಲಸ ಮಾಡುತ್ತಿದ್ದಾನೆ, ಯಾವುದೇ ಕಾರಣಕ್ಕೂ ಅಗಲೀಕರಣ ಆಗಲೇಬಾರದು ಎಂಬಂತೆ ವರ್ತಿಸುತ್ತಿದ್ದಾರೆ, ಕೂಡಲೇ ಅವರನ್ನು ಕೆಲಸದಿಂದ ವಿಮುಕ್ತಿಗೊಳಿಸಿ ಬೇರೆ ಸಿಬ್ಬಂದಿ ನೇಮಿಸುವಂತೆ ಬಿಗಿಪಟ್ಟು ಹಿಡಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಸವರಾಜ ಛತ್ರದ, ಹೋರಾಟ ಸಮಿತಿಯ ಪಾಂಡುರಂಗ ಸುತಾರ, ಎಂ.ಎಲ್. ಕಿರಣಕುಮಾರ ಸಂಜೀವ ಮಡಿವಾಳರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಮುನಾಫ್ ಎರೇಶಿಮಿ, ಕೆ.ಎಸ್.ನಾಯ್ಕರ, ಪೀರಾಂಬಿ ವರ್ದಿ, ಫರೀದಾಬಾನು ನದೀಮುಲ್ಲಾ, ಗುತ್ತೆಮ್ಮ ಮಾಳಗಿ, ಲೋಕೋಪಯೋಗಿ ಇಲಾಖೆ ಎಇಇ ಉಮೇಶ ನಾಯ್ಕ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಸೇರಿದಂತೆ ಹಲವರು ಭಾಗವಹಿಸಿದ್ದರು.
ಎಮ್ಮೆಗಳೊಂದಿಗೆ ಪ್ರತಿಭಟನೆ: ಇದಕ್ಕೂ ಮುನ್ನ ಹೋರಾಟಗಾರರು ರಸ್ತೆ ಮಧ್ಯದಲ್ಲಿ ಎಮ್ಮೆಗಳನ್ನು ಕಟ್ಟಿ ಹಳೇಪುರಸಭೆ ಎದುರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರಲ್ಲದೇ ರಸ್ತೆ ಮಧ್ಯದಲ್ಲಿ ಪಾತ್ರೆಗಳನ್ನಿಟ್ಟು ಅಡುಗೆ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.ಉಪವಾಸ ಸತ್ಯಾಗ್ರಹ ಹಿಂದಕ್ಕೆ: ಮುಖ್ಯರಸ್ತೆ ಅಗಲೀಕರಣ ವಿಚಾರಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ನಾಳೆಯೇ ಅಧಿಕಾರಿಗಳ ಸಭೆ ಕರೆದಿದ್ದು ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಿದ್ದೇನೆ,ಯಾವುದೇ ಕಾರಣಕ್ಕೂ ಧರಣಿ ಮುಂದುವರೆಸುವುದು ಬೇಡವೆಂದು ಶಾಸಕ ಬಸವರಾಜ ಶಿವಣ್ಣನವರ ಮನವಿ ಮೇರೆಗೆ ಕಳೆದ 4 ದಿನದಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದ ಹೋರಾಟ ಹಿಂಪಡೆದುಕೊಂಡರು.