ಸಾರಾಂಶ
ಪುರಸಭೆ ಸದಸ್ಯರ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ ಕಂಪ್ಲಿಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.
ಸಭೆಯಲ್ಲಿ ಕಂಪ್ಲಿ ಪುರಸಭಾಂಗಣ ಅಭಿವೃದ್ಧಿಗೆ, ಹೊಸದಾಗಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಕಾಂಪೌಂಡ್ ನಿರ್ಮಾಣ, ಭದ್ರತೆಗೆ ವಾಚ್ ಮೆನ್ ನಿಯೋಜನೆಗೆ, ಶೌಚಾಲಯ, ಮೂತ್ರಾಲಯಗಳ ನಿರ್ಮಾಣದ ಕುರಿತು ಒಪ್ಪಿಗೆ ನೀಡಲಾಯಿತು. ಪುರಸಭೆಯ ನೀರು ಸರಬರಾಜು ವಿಭಾಗದ ಜಾಕ್ ವೆಲ್ ಗೆ ಅವಶ್ಯವಿರುವ 30 ಎಚ್ ಪಿಮೋಟರ್ ಖರೀದಿಸುವುದು, ನೀರು ಶುದ್ಧೀಕರಣ ಘಟಕಗಳ (ಆರ್ ಒ ಪ್ಲಾಂಟ್) ದುರಸ್ತಿ ಕಾರ್ಯ ಮಾಡಿಸುವುದು, 2024-25ರ ಎಸ್.ಎಫ್.ಸಿ ಅನುದಾನ ₹2ಕೋಟಿ ವಿಶೇಷ ಅನುದಾನ ಮಂಜೂರಾಗಿದ್ದು, ಕ್ರಿಯಾಯೋಜನೆ ರೂಪಿಸಲು ಚರ್ಚಿಸಿ ನಡುವಲ ಮಸೀದಿಯಿಂದ ಜೋಗಿ ಕಾಲುವೆತನಕ ರಸ್ತೆ ಅಗಲೀಕರಣದ ಅಭಿವೃದ್ಧಿಗೆ ತೀರ್ಮಾನ ಕೈಗೊಳ್ಳಲಾಯಿತು. ಪುರಸಭೆಯ ನೀರು ಸರಬರಾಜು ಯೋಜನೆ ಅಡಿ ವಾಲ್ಮೆನ್ ಗಳನ್ನು ಆರೋಗ್ಯ ಶಾಖೆಯ ವಾಹನ ಚಾಲಕರನ್ನು, ಹೊರಗುತ್ತಿಗೆ ಆಧಾರದ ಮೇಲೆ ವಾರ್ಷಿಕ ಟೆಂಡರ್ ಕರೆಯುವುದು, ಪಟ್ಟಣದಲ್ಲಿ ನಾನಾ ವೃತ್ತಗಳನ್ನು ನಿರ್ಮಿಸಿ ಪುತ್ಥಳಿಯನ್ನು ಅನಾವರಣ ಮಾಡುವ ಕುರಿತು, ಕನ್ನಡ ಸಾಹಿತ್ಯ ಪರಿಷತ್ ಗೆ ಈಗಾಗಲೇ ನೀಡಿದ ನಿವೇಶನ ಗುರುತಿಸಿ ನೀಡಲು, ನಾನಾ ಸಂಘ ಸಂಸ್ಥೆಗಳಿಗೆ ಸಿಎ ಸೈಟ್ ನೀಡಲು ಸರ್ಕಾರದ ಮಾರ್ಗಸೂಚಿ ಅನುಸರಿಸಲು ತೀರ್ಮಾನ ಕೈಗೊಳ್ಳಲಾಯಿತು.ಪುರಸಭೆ ಸದಸ್ಯ ಟಿ.ವಿ. ಸುದರ್ಶನ್ ರೆಡ್ಡಿ ಮಾತನಾಡಿ, ಐತಿಹಾಸಿಕ ಕಂಪ್ಲಿ ಸೋಮಪ್ಪನ ಕೆರೆಯಲ್ಲಿ ಸೋಮಪ್ಪನ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಈ ಹಿಂದೆ ತೀರ್ಮಾನಿಸಿಲಾಗಿತ್ತು. ಆದರೂ ಕಾರ್ಯರೂಪಕ್ಕೆ ಬಾರದಿರುವುದು ಶೋಚನೀಯ. ಈ ಕೂಡಲೇ ಗಮನ ಹರಿಸಿ ಕೆರೆಯಲ್ಲಿ ಸೋಮಪ್ಪ ಮೂರ್ತಿ ಪ್ರತಿಷ್ಠಾಪಿಸಿ ಕಿರು ಸೇತುವೆ ನಿರ್ಮಾಣ ಮಾಡಬೇಕು. ಇನ್ನು ಪಟ್ಟಣದಲ್ಲಿ ಸರಿಯಾದ ಸಮಯಕ್ಕೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯ ಸಿ.ಆರ್. ಹನುಮಂತ ಮಾತನಾಡಿ, ಬಿಎಸ್‌ವಿ ಶಾಲೆಯಿರುವ ಸ್ಥಳ ಪುರಸಭೆ ಆಸ್ತಿಯಾಗಿದ್ದು, ಶಾಲೆಯವರು ಜಾಗ ತೆರವಿಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಪುರಸಭೆ ಸದಸ್ಯರು ಸೇರಿ ಬೀಗ ಜಡಿದು ಪ್ರತಿಭಟಿಸಲಾಗುವುದು. ಶೈಕ್ಷಣಿಕ ಹಿತದೃಷ್ಟಿಯಿಂದ ಮಕ್ಕಳನ್ನು ಬೇರೆಡೆ ಸೇರಿಸುವಲ್ಲಿ ಮಕ್ಕಳ ಪಾಲಕ ಪೋಷಕರು ಜಾಗೃತಿ ವಹಿಸಬೇಕು ಎಂದರು.ಬಳಿಕ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೈದ್ಯರಿರುವುದಿಲ್ಲ, ಗಂಗಾವತಿಗೆ ತೆರಳುವಂತೆ ಸೂಚಿಸುತ್ತಾರೆ. ಸರ್ಕಾರಿ ವೈದ್ಯರು ಸರ್ಕಾರಿ ಕೆಲಸಕ್ಕಿಂತ ವೈಯಕ್ತಿಕ ಕ್ಲಿನಿಕ್‌ಗಳತ್ತ ಹೆಚ್ಚಿನ ಒಲುವು ತೋರುತ್ತಾರೆ. ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಆರೋಗ್ಯ ಇಲಾಖೆಗೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ಪುರಸಭೆ ನೀಡಲಿದೆ. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಡಿಎಚ್ ಒಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ಪಟ್ಟಣದ ಅಭಿವೃದ್ಧಿಗೆ ಡಿಎಂಎಫ್‌ನಿಂದ ₹5ಕೋಟಿ ಅನುದಾನ ಒದಗಿಸುವಂತೆ ಶಾಸಕರನ್ನು ಒತ್ತಾಯಿಸಿದರು.
ಸ್ಥಾಯಿ ಸಮಿತಿ ರಚನೆ:ಸಭೆಯಲ್ಲಿ ಪುರಸಭೆಯ ಸ್ಥಾಯಿ ಸಮಿತಿಗೆ ಹನ್ನೊಂದು ಜನ ಸದಸ್ಯರ ಆಯ್ಕೆ ಮಾಡಿ ಅಧ್ಯಕ್ಷರಾಗಿ ಎಂ.ಉಸ್ಮಾನ್ರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಆರ್.ಅಂಜಿನಿ, ಟಿ.ವಿ. ಸುದರ್ಶನರೆಡ್ಡಿ, ತಿಮ್ಮಕ್ಕ, ಹೇಮಾವತಿ ಪೂರ್ಣಚಂದ್ರ, ಎಸ್.ಎಂ. ನಾಗರಾಜ, ವೀರಾಂಜನೇಯಲು, ಮೌಲಾ, ಸುಮಾ, ಗುಡುದಮ್ಮ, ನಾಗಮ್ಮ ಆಯ್ಕೆಗೊಂಡರು.
ಸಭೆಯಲ್ಲಿ ಶಾಸಕ ಜೆ.ಎನ್. ಗಣೇಶ್, ಪುರಸಭೆ ಉಪಾಧ್ಯಕ್ಷೆ ಜಿ. ಸುಶೀಲಮ್ಮ, ಮುಖ್ಯಾಧಿಕಾರಿ ಕೆ. ದುರುಗಣ್ಣ, ಸದಸ್ಯರಾದ ಸಿ.ಆರ್. ಹನುಮಂತ, ಟಿ.ವಿ. ಸುದರ್ಶನರೆಡ್ಡಿ, ಎನ್. ರಾಮಾಂಜಿನೇಯಲು, ಎಂ. ಉಸ್ಮಾನ್, ನಾಗಮ್ಮ, ಗುಡುದಮ್ಮ, ಲಡ್ಡುಹೊನ್ನುರವಲಿ, ಎನ್. ರಾಮಾಂಜಿನೇಯಲು, ಆರ್. ಆಂಜಿನೇಯ, ಮೌಲ ಸೇರಿ ನಾಮನಿರ್ದೇಶನ ಸದಸ್ಯರು ಇದ್ದರು.