ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ನಿಲ್ಲಲ್ಲ

| Published : Jun 25 2024, 12:41 AM IST

ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ನಿಲ್ಲಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕಾರಣಕ್ಕೂ ಈ ಬಾರಿಯ ರಸ್ತೆ ಅಗಲೀಕರಣ ಕಾರ್ಯ ನೆನೆಗುದಿಗೆ ಬೀಳಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು. ನಗರದ ನೆಹರೂ ಮೈದಾನದ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಸೋಮವಾರ ನಡೆದ ವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಯಾವುದೇ ಕಾರಣಕ್ಕೂ ಈ ಬಾರಿಯ ರಸ್ತೆ ಅಗಲೀಕರಣ ಕಾರ್ಯ ನೆನೆಗುದಿಗೆ ಬೀಳಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.

ನಗರದ ನೆಹರೂ ಮೈದಾನದ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಸೋಮವಾರ ನಡೆದ ವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರ ದಿನೇ ದಿನೇ ಬೆಳೆಯುತ್ತಿದ್ದು ಅದಕ್ಕೆ ತಕ್ಕಂತೆ ರಸ್ತೆ ಅಗಲೀಕರಣವಾಗಿಲ್ಲ. ಇಕ್ಕಟ್ಟಿನ ರಸ್ತೆಯಿಂದ ಪ್ರತಿದಿನವೂ ಟ್ರಾಫಿಕ್ ಜಾಮ್ ನಿಂದ ಸಾವಿರಾರು ಜನರು ನರಳುತ್ತಿದ್ದು ಈ ಬಾರಿ ಯಾವ ಒತ್ತಡಕ್ಕೂ ಬಗ್ಗದೆ ರಸ್ತೆ ಅಗಲೀಕರಣ ಕಾರ್ಯವನ್ನು ಇನ್ನು 15 ದಿನದಲ್ಲಿ ಶುರು ಮಾಡಲಾಗುವುದು. ರಸ್ತೆ ಅಗಲೀಕರಣದ ಜೊತೆಗೆ ವರ್ತಕರ ಹಿತ ಮರೆಯುವುದಿಲ್ಲ. ನಿಮ್ಮೆಲ್ಲರ ಸಲಹೆ ಸಹಕಾರ ಪಡೆದೇ ರಸ್ತೆ ವಿಸ್ತರಿಸಲಾಗುವುದು. ಪರಿಹಾರ ಕೊಡದೇ ಕಟ್ಟಡ ಒಡೆಯುವುದಿಲ್ಲ. ಈಗಾಗಲೇ ಎಷ್ಟು ಕಟ್ಟಡ ಹೋಗಬಹುದು, ಎಷ್ಟು ಪರಿಹಾರ ಬೇಕಾಗಬಹುದು ಎಂದು ಅಂದಾಜಿಸಿದ್ದೇವೆ. ಸಿಎಂ ಜೊತೆ ಮಾತನಾಡಿದ್ದು ಅವರೂ ಸಹ ಪರಿಹಾರ ಮಂಜೂರು ಮಾಡಲು ಸಮ್ಮತಿ ಸೂಚಿಸಿದ್ದಾರೆ. ಬರುವ 25 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ರಸ್ತೆ ವಿಸ್ತರಿಸಲಾಗುವುದು ನಗರಕ್ಕೆ ಹೊಸ ರೂಪ ನೀಡಲು ನಾನು ತಯಾರಿದ್ದು ನಿಮ್ಮೆಲ್ಲರ ಸಹಕಾರವಿರಲಿ ಎಂದರು.

ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿ, ಈ ಹಿಂದೆ ಅನಿವಾರ್ಯ ಕಾರಣಗಳಿಂದ ರಸ್ತೆ ವಿಸ್ತರಣೆ ನಿಂತಿದೆ. ವರ್ತಕರು ಪರಿಹಾರ ಕೇಳಿದ್ದೀರಿ. ನಿಯಮಾನುಸಾರ ಪರಿಹಾರ ನೀಡಲು ಪ್ರಯತ್ನಿಸಲಾಗುವುದು. ದಾಖಲಾತಿಗಳ ಪರಿಶೀಲನೆ ನಂತರ ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಇದೀಗ ರೆಡ್ಡಿ ಹೋಟೆಲ್‌ನಿಂದ ಗಾಂಧಿ ವೃತ್ತದವರೆಗೆ 330 ಮೀ ರಸ್ತೆ ಅಗಲೀಕರಣ ನಡೆಸಲಾಗುವುದು. ಅದರ ಮುಂದಿನ ಹಂತ ಆನಂತರ ನಡೆಯಲಿದೆ. ರಸ್ತೆ ಮಧ್ಯಭಾಗದಿಂದ 42 ಅಡಿವರೆಗೆ ಅಗಲೀಕರಣ ನಡೆಯಲಿದೆ. ನ್ಯಾಯಾಲಯದ ತಡೆಯಾಜ್ಞೆ, ನ್ಯಾಯಾಲಯದ ತೀರ್ಪುಗಳನ್ನು ಪರಿಶೀಲಿಸಿದ್ದೇವೆ. ರಸ್ತೆ ಅಗಲೀಕರಣ ಕಾರ್ಯ ಅನಿವಾರ್ಯವಾಗಿದ್ಫು ಎಲ್ಲರೂ ಸಹಕರಿಸಬೇಕು ಎಂದರು.

ಸಭೆಯಲ್ಲಿದ್ದ ಬಹುತೇಕ ವರ್ತಕರು, ರಸ್ತೆ ಅಗಲೀಕರಣಕ್ಕೆ ಕಟ್ಟಡ ಮಾಲೀಕರ ಸಮ್ಮತಿ ಇದೆ. ಆದರೆ ಪರಿಹಾರ ಕೊಟ್ಟು ಕಟ್ಟಡ ತೆರವುಗೊಳಿಸಿ ಎಂದು ಸಚಿವರಿಗೂ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದರು. ಸಭೆಯಲ್ಲಿ ಪಿಡಿ ಮಹೇಂದ್ರ ಕುಮಾರ್, ಎಇಇ ಸತ್ಯನಾರಾಯಣ, ತಹಸೀಲ್ದಾರ್ ರಾಜೇಶ್ ಕುಮಾರ್, ಪೌರಾಯುಕ್ತ ಹೆಚ್ ಮಹoತೇಶ್, ಸಿಪಿಐ ರಾಘವೇಂದ್ರ ಕಾಂಡಿಕೆ ಹಾಗೂ ನಗರದ ವರ್ತಕರು ಹಾಜರಿದ್ದರು.ಬಾಕ್ಸ್ ...........

ಪರಿಹಾರ ಕೊಟ್ಟು ಕಟ್ಟಡ ತೆರವುಗೊಳಿಸಿ

ಎಷ್ಟೋ ಕುಟುಂಬಗಳು ಆ ಕಟ್ಟಡಗಳಿಂದ ಜೀವನ ಮಾಡುತ್ತಿದ್ದೇವೆ. ಆ ಕಟ್ಟಡಗಳ ಮೇಲೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದೇವೆ. ಬೆಳೆಯುತ್ತಿರುವ ನಗರಕ್ಕೆ ರಸ್ತೆ ವಿಸ್ತರಣೆ ಅನಿವಾರ್ಯ ಎಂಬುದು ನಮಗೂ ಗೊತ್ತಿದೆ. ಪ್ರತಿನಿತ್ಯದ ಟ್ರಾಫಿಕ್ ತೊಂದರೆಯನ್ನು ನಾವು ನೋಡುತ್ತಿದ್ದೇವೆ. ಆದರೆ ಆ ಕಟ್ಟಡಗಳು ಮತ್ತು ಅದರಲ್ಲಿನ ಅಂಗಡಿಗಳನ್ನು ನಂಬಿಕೊಂಡಿರುವ ನಮಗೆ ಪರಿಹಾರ ಕೊಟ್ಟು ಕಟ್ಟಡ ತೆರವುಗೊಳಿಸಿ. ತಾಲೂಕು ಕಚೇರಿ, ತಾಪಂ, ಸರ್ಕಾರಿ ಆಸ್ಪತ್ರೆ ಈಗ ನಿರ್ಮಾಣವಾಗುತ್ತಿರುವ ಹೊಸ ಕಟ್ಟಡಗಳಿಗೆ ಸ್ಥಳಾಂತರವಾದರೂ ಟ್ರಾಫಿಕ್ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಕಟ್ಟಡ ಒಡೆಯುವುದೇ ನಿಜವಾದರೆ ಪರಿಹಾರ ಕೊಟ್ಟು ಒಡೆದು ನಮ್ಮ ಜೀವನಕ್ಕೂ ದಾರಿಮಾಡಿಕೊಡಿ ಎಂದು ಕಟ್ಟಡ ಮಾಲೀಕ ಪ್ರಶಾಂತ್ ಮಾತನಾಡಿದರು.

---------------------

ಚಿತ್ರ 1,2

ರಸ್ತೆ ಅಗಲೀಕರಣದ ಸಂಬಂಧ ಸೋಮವಾರ ಕರೆದಿದ್ದ ವರ್ತಕರ ಸಭೆಯನ್ನು ಉದ್ದೇಶಿಸಿ ಸಚಿವ ಡಿ.ಸುಧಾಕರ್ ಮಾತನಾಡಿದರು.