ಸಾರಾಂಶ
ಪಟ್ಟಣದ ರಾಜ್‌ಕುಮಾರ್, ಅಂಬೇಡ್ಕರ್ ಸೇರಿದಂತೆ ಇತರೆ ರಸ್ತೆಗಳ ಅಗಲೀಕರಣದಿಂದ ಕೊಳ್ಳೇಗಾಲ ಪಟ್ಟಣದ ಅಂದ ಹೆಚ್ಚುವ ಜೊತೆಗೆ ಹೆಚ್ಚಿನ ಅಭಿವೃದ್ಧಿಯಾಗಿಲಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ರಾಜ್‌ಕುಮಾರ್, ಅಂಬೇಡ್ಕರ್ ಸೇರಿದಂತೆ ಇತರೆ ರಸ್ತೆಗಳ ಅಗಲೀಕರಣದಿಂದ ಕೊಳ್ಳೇಗಾಲ ಪಟ್ಟಣದ ಅಂದ ಹೆಚ್ಚುವ ಜೊತೆಗೆ ಹೆಚ್ಚಿನ ಅಭಿವೃದ್ಧಿಯಾಗಿಲಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.ರಸ್ತೆ ಅಗಲೀಕರಣ ಸಂಬಂಧ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಶೀಘ್ರದಲ್ಲೆ ಸರ್ವೆ ಮುಗಿಸಿ ಇನ್ನೆರಡು ದಿನದೊಳಗೆ ಪಟ್ಟಿ ಸಲ್ಲಿಸಿ, ಪಾರದರ್ಶಕವಾಗಿ ತೆರವಾಗುವ ಖಾಸಗಿ ವ್ಯಕ್ತಿಗಳ ಆಸ್ತಿ ಜೊತೆಗೆ ಸರ್ಕಾರಿ ಆಸ್ತಿಗಳನ್ನು ಪಟ್ಟಿಯಲ್ಲಿ ನಮೂದಿಸಿ ಎಂದು ಸೂಚಿಸಿದರು. ಅಧಿಕಾರಿಗಳೆಲ್ಲರೂ ತಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ, ರಸ್ತೆ ಅಗಲೀಕರಣಕ್ಕೆ ಸ್ಪಂದಿಸಬೇಕು,
ರಸ್ತೆ ಅಗಲಿಕರಣ ಕಡ್ಡಾಯವಾಗಿ 80 ಅಡಿಗೆ ಸೀಮಿತಗೊಳಿಸಿ ಎಂದು ಇದೆ ವೇಳೆ ಸೂಚಿಸಿದರು. ರಸ್ತೆ ಅಗಲೀಕರಣದಿಂದ ಕೊಳ್ಳೇಗಾಲ ಅಭಿವೃದ್ಧಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂಬುದನ್ನು ಮನಗಂಡು ಅಧಿಕಾರಿಗಳು ತಮ್ಮ ಪಾಲಿನ ಜವಾಬ್ದಾರಿ ಸೂಕ್ತ ರೀತಿ ನಿರ್ವಹಿಸಿ, ತಾವು ಸಲ್ಲಿಸುವ ಆಸ್ತಿ ಪಟ್ಟಿ ಸರ್ಕಾರಕ್ಕೆ ಕಳುಹಿಸಿ ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿ ಗಮನಕ್ಕೆ ತಂದು ಮುಂದಿನ ಹಂತದ ಕೆಲಸಕ್ಕೆ ಮನವಿ ಸಲ್ಲಿಸುವೆ ಎಂದರು.105 ಸರ್ಕಾರಿ ಆಸ್ತಿಗಳಿವೆ:
ನಗರಸಭೆ ಎಸ್‌ಡಿಸಿ ರಾಘವೇಂದ್ರ ಸರ್ಕಾರಿ ಆಸ್ತಿ ಪಟ್ಟಿ 105 ಸಂಖ್ಯೆ ಇದ್ದು, ಈ ಪಟ್ಟಿಗೆ ಇನ್ನು ಕೆಲ ಸರ್ಕಾರಿ ಆಸ್ತಿಗಳು ಸೇರ್ಪಡೆಯಾಗಬೇಕು. 1959ರಲ್ಲಿ ರಸ್ತೆ ಅಗಲೀಕರಣಕ್ಕೆ ಈ ಹಿಂದೆ ಸ್ಥಳೀಯ ಸಂಸ್ಥೆಗೆ ಕ್ರಯವಾಗಿದ್ದು ಈ ಸಂಬಂಧ ದಾಖಲಾತಿಯೊಂದನ್ನು ನೀಡಿದರು ಎನ್ನಲಾಗಿದೆ. ಆಸ್ತಿ ಪಟ್ಟಿ ಶೀಘ್ರ ನೀಡುವ ಸಾಧ್ಯತೆ:ಈಗಾಗಲೇ ರಸ್ತೆ ಅಗಲಿಕರಣ ಸರ್ವೆ ಕಾರ್ಯ ಪೂರ್ಣ ಮುಗಿದಿದ್ದು ಶಾಸಕರಿಗೆ ಶೀಘ್ರವೇ ನಗರಸಭೆ ಆಸ್ತಿ ಪಟ್ಟಿ ನೀಡಲಿದ್ದು ಸರ್ಕಾರಿ ಮತ್ತು ಖಾಸಗಿ ಆಸ್ತಿಗಳು ಸೇರಿದಂತೆ 160ಕ್ಕೂ ಅಧಿಕ ಸಂಖ್ಯೆಯುಳ್ಳ ಮಾಲಿಕರು ಹಾಗೂ ಸರ್ಕಾರಿ ಆಸ್ತಿ ಕುರಿತ ಪಟ್ಟಿಯನ್ನು ನಗರಸಭಾಧಿಕಾರಿಗಳು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಭೆಯಲ್ಲಿ ಪ್ರಭಾರಿ ಪೌರಾಯುಕ್ತ ಪರಶಿವಯ್ಯ, ಕಾರ್ಯಪಾಲಕ ಅಭಿಯಂತರ ಸುರೇಶ್ ಕುಮಾರ್, ಎಂಜಿನಿಯರ್ ನಾಗೇಂದ್ರ, ಲೋಕೋಪಯೋಗಿ ಇಲಾಖೆಯ ಎಇ ಸುರೇಂದ್ರ, ರವಿಶಂಕರ್ ಇನ್ನಿತರರಿದ್ದರು.