ಸಾರಾಂಶ
ಬ್ಯಾಡಗಿ: ಗಜೇಂದ್ರಗಡ- ಸೊರಬ ರಾಜ್ಯ ಹೆದ್ದಾರಿ- 136(ಮುಖ್ಯರಸ್ತೆ) ಅಗಲೀಕರಣಕ್ಕಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನವೂ ಯಾವುದೇ ಫಲಪ್ರದ ಕಾಣದೇ ಐದನೇ ದಿನಕ್ಕೆ ಮುಂದುವರಿದಿದೆ.
ಈ ಮಧ್ಯೆ ಜಯಕರ್ನಾಟಕ ಸಂಘಟನೆ, ಆಟೋ ಚಾಲಕರ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಗಳು ಮುಖ್ಯರಸ್ತೆ ಅಗಲೀಕರಣಕ್ಕೆ ಬೆಂಬಲ ಸೂಚಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದು, ಅಗಲೀಕರಣಕ್ಕೆ ವಿವಿಧ ಸಂಘಟನೆಗಳ ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿವೆ. ಹೀಗಾಗಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಗಲೀಕರಣವಾಗದೇ ಉಳಿದಿರುವ ಒಟ್ಟು 750 ಮೀ. ಪ್ರದೇಶದಲ್ಲಿ ಭಾನುವಾರವೂ ಯಾವುದೇ ಅಂಗಡಿ ಮುಂಗಟ್ಟುಗಳು ತೆಗೆಯಲಿಲ್ಲ. ಇದರಿಂದ ವ್ಯಾಪಾರ- ವಹಿವಾಟು ನಡೆಯದೇ ಮುಖ್ಯರಸ್ತೆಯಲ್ಲಿ ಸ್ಮಶಾನ ಮೌನ ಅವರಿಸಿತ್ತು.ವಿನೂತನ ರೀತಿ ಪ್ರತಿಭಟನೆ: ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿವಿಧ ಸಮಿತಿಗಳ ನೂರಾರು ಕಾರ್ಯಕರ್ತರು ಭಾನುವಾರ ಅಗಲೀಕರಣ ವಿರೋಧಿಸಿ ಕೋರ್ಟಗೆ ಹೋದವರ ಹೆಸರುಗಳನ್ನು ಎಮ್ಮೆಗಳ ಮೈಮೇಲೆ ಬರೆದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಪಟ್ಟಣದೆಲ್ಲೆಡೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮುಖ್ಯರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಎಮ್ಮೆಗಳ ಮೈತೊಳೆಯುವ ಮೂಲಕ ಆಕ್ರೋಶ ಹೊರ ಹಾಕಿದರು. ಬಳಿಕ ತಮಟೆಗಳ ವಿವಿಧ ಗತ್ತುಗಳನ್ನು ಬಾರಿಸುವ ಮೂಲಕ ಮುಖ್ಯರಸ್ತೆ ಅಗಲೀಕರಣದ ಕುರಿತು ತಾವೇ ರಚಿಸಿದ ಹಾಡುಗಳನ್ನು ಹಾಡಿದರು.
ರೋಡಿಗಿಳಿಯದ ಆಟೋಗಳು: ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಸದಸ್ಯರು ಭಾನುವಾರ ಯಾವುದೇ ಆಟೋಗಳನ್ನು ರಸ್ತೆಗಿಳಿಸದೇ ದಿನವಿಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಆಟೋಗಳನ್ನು ಮೆರವಣಿಗೆ ಮೂಲಕ ಮುಖ್ಯರಸ್ತೆಯಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ತಂದರಲ್ಲದೇ ದಾರಿಯುದ್ದಕ್ಕೂ ಸರ್ಕಾರ ಸೇರಿದಂತೆ ಮುಖ್ಯರಸ್ತೆಯಲ್ಲಿನ ವ್ಯಾಪಾರಸ್ಥರ ವಿರುದ್ಧ ಘೋಷಣೆಗಳನ್ನು ಹಾಕಿದರು.ಅಗಲೀಕರಣ ಅನಿವಾರ್ಯ: ಈ ಸಂದರ್ಭದಲ್ಲಿ ಮಾತನಾಡಿದ ವಿನಾಯಕ ಕಂಬಳಿ, ಪ್ರಸ್ತುತ ಸ್ಥಿತಿಯಲ್ಲಿ ಮುಖ್ಯರಸ್ತೆ ಅಗಲೀಕರಣವಾಗದೇ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ವಹಿವಾಟು ಸಾಧ್ಯವಿಲ್ಲ. ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಚರಂಡಿ ವ್ಯವಸ್ಥೆಯಿಲ್ಲದೇ ನೀರು ಕಲುಷಿತಗೊಂಡು ರೋಗಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಬಹುತೇಕ ಜನರು ಅಗಲೀಕರಣಕ್ಕೆ ಕೈಜೋಡಿಸಿದ್ದಾರೆ ಎಂದರು.
ದುಡಿಮೆಗೆ ಕುತ್ತು: ಆಟೋ ಚಾಲಕರ ಸಂಘದ ಅಧ್ಯಕ್ಷ ಬಸಾಪುರ ಮಾತನಾಡಿ, ಪಟ್ಟಣದಲ್ಲಿನ ಅಭಿವೃದ್ಧಿ ಕಾಣದ ಮುಖ್ಯರಸ್ತೆಯಿಂದ ಆಟೋ ಚಾಲಕರ ಬದುಕು ಹೇಳತೀರದು. ಉಚಿತ ಬಸ್ ಪ್ರಯಾಣದಿಂದ ಒಂದೆಡೆ ದುಡಿಮೆಗೆ ತೊಂದರೆಯಾಗಿದ್ದರೆ, ಗುಂಡಿಗಳಿಂದ ತುಂಬಿದ ಮುಖ್ಯರಸ್ತೆಯಲ್ಲಿ ಸಾರ್ವಜನಿಕರು ಭಯದಿಂದ ಆಟೋ ಹತ್ತಲು ಸಿದ್ಧರಿಲ್ಲ. ನಾವೆಲ್ಲರೂ ನಮ್ಮ ದುಡಿಮೆ ಬಿಟ್ಟು ಹೋರಾಟಕ್ಕೆ ಇಳಿದಿದ್ದೇವೆ. ಅಗಲೀಕರಣವಾಗದೇ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದರು.ಪಟ್ಟಣಕ್ಕೆ ಕಪ್ಪುಚುಕ್ಕೆ: ದಲಿತ ಸಂಘರ್ಷ ಸಮಿತಿಯ ಚಂದ್ರಶೇಖರ ಗದಗಕರ ಮಾತನಾಡಿ, ತಾಲೂಕಿನ ಜನರ ವಿರೋಧವನ್ನು ಕಟ್ಟಿಕೊಂಡು ಮುಖ್ಯರಸ್ತೆಯ ಅಗಲೀಕರಣ ಆಗದಂತೆ ನೋಡಿಕೊಳ್ಳುತ್ತಿರುವ ಧೋರಣೆ ಸರಿಯಲ್ಲ.ಇಂಥವರು ತಾಲೂಕಿನ ಪಾಲಿಗೆ ಕಪ್ಪುಚುಕ್ಕೆ ಎಂದು ದೂರಿದರು.
ರಾಜು ಮೋರಿಗೇರಿ, ಅಜೀಜ ಬಿಜಾಪುರ, ಸುರೇಶ ಬಿರಾದರ, ಆನಂದ ಕಾಳೆ, ಮಾರುತಿ ಒಳಗುಂದಿ, ಅಸ್ಲಾಂ ಬಾಗಲಕೋಟ, ಗಣೇಶ ಬಂಡಿ ಹಾಗೂ ದಲಿತ ಸಂಘರ್ಷ ಸಮಿತಿ ಸದಸ್ಯರಾದ ಮಾರುತಿ ಒಳಗುಂದಿ, ಭಾಷಾಸಾಬ್ ಕನವಳ್ಳಿ, ರಾಮಾಚಾರಿ ಚಿಕ್ಕಣ್ಣನವರ, ನಾಗರಾಜ ಕಲ್ಯಾಣಿ, ಹನುಮಂತ ಗಾಂಧಿನಗರ, ಅರಣಯ್ಯ ಹರದಗೇರಿ, ಸಿದ್ಧಯ್ಯ ಹಿರೇಮಠ, ಈರಪ್ಪ ಬಳಗಾರ, ನಾಗರಾಜ ಕಲ್ಯಾಣಿ, ಕುಮಾರ ಗಾಂಧಿನಗರ, ಪ್ರವೀಣ ವಡ್ಡರ, ಕಲ್ಲಪ್ಪ ದೇವರಗುಡ್ಡ, ರಾಜು ಬಸಾಪುರ, ಸಂಜೀವ ಬಿರಾದರ, ನೀಲಪ್ಪ ಬಿರಾದಾರ, ಗಣೇಶ ವಡ್ಡರ ಸೇರಿದಂತೆ ಜಯಕರ್ನಾಟಕ ಸಂಘಟನೆಯ ಪ್ರದೀಪ ಜಾಧವ, ಫರೀದಾ ನದಿಮುಲ್ಲಾ, ಗುತ್ತೆಮ್ಮ ಮಾಳಗಿ, ಹಜರತಲಿ ಬಳ್ಳಾರಿ, ಪ್ರವೀಣ ಶಿಲ್ಪಿ, ಬಸವರಾಜ ತರೇದಹಳ್ಳಿ, ಚಂದ್ರ ಒಳಗುಂದಿ, ಹಲವರು ಉಪಸ್ಥಿತರಿದ್ದರು.ಇಂದೂ ಹೋರಾಟ
ನ್ಯಾಯವಾದಿಗಳ ಸಂಘ ಹಾಗೂ ವೀರಶೈವ ಪಂಚಮಸಾಲಿ ಸಮಾಜದ ತಾಲೂಕು ಘಟಕದ ವತಿಯಿಂದ ಹೋರಾಟದ 5ನೇ ದಿನವಾದ ಸೋಮವಾರ ನೇತೃತ್ವ ವಹಿಸಲಿದ್ದಾರೆ.