ಸಾರಾಂಶ
ಅಧಿಕಾರಿಗಳ ಜೊತೆ ಗಟ್ಟಿಯಾಗಿ ನಿಲ್ಲೋಕೆ ಯಾರಿದ್ದಾರೆ
ಗೋಡೆಗಳ ಮೇಲಿನ ಮಾರ್ಕ್ ಗೆ ವರ್ತಕರ ಅಸಮಧಾನಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ, ಜಿಲ್ಲಾಧಿಕಾರಿ ಒಟ್ಟಾಗಿ ಚಿತ್ರದುರ್ಗ ಬಿ.ಡಿ.ರಸ್ತೆಯ ಎರಡೂ ಬದಿಯಲ್ಲಿ ತಲಾ 21 ಮೀಟರ್ ರಸ್ತೆ ಅಗಲೀಕರಣ ನಿರ್ಧಾರ ಕೈಗೊಂಡು ಹದಿನೈದು ದಿನಗಳಾಗುತ್ತಾ ಬಂದಿದ್ದು ಭೂ ಸ್ವಾಧೀನ ಅಧಿಕಾರಿ ನೇಮಕ ಬಿಟ್ಟರೆ ಪೂರ್ವ ಸಿದ್ಧತೆಗಳಿಗೆ ಬಿರುಸಿನ ವೇಗ ಸಿಕ್ಕಿಲ್ಲ. ಕಟ್ಟಡಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗುವುದ ಹೇಗೆ ತಡೆಯುವುದು, ಹಾಗೊಂದು ವೇಳೆ ಖಾಸಗಿ ಆಸ್ತಿಗಳಲ್ಲಿನ ಕಟ್ಟಡ ತೆರವು ಗೊಳಿಸಿದರೆ ಪರಿಹಾರಕ್ಕೆ ಏನು ಮಾಡಬೇಕು ಎಂಬಿತ್ಯಾದಿ ಗೊಂದಲದಲ್ಲಿ ಅಧಿಕಾರಿಗಳು ಮುಳುಗಿದ್ದಾರೆ.ಜನ ಪ್ರತಿನಿಧಿಗಳು ಖುದ್ದು ಆಸಕ್ತಿ ವಹಿಸಿ ಅಧಿಕಾರಿಗಳ ಬೆನ್ನಿಗೆ ನಿಂತರೆ ರಸ್ತೆ ಅಗಲೀಕರಣ ಅಸಾಧ್ಯವಾದುದೇನಲ್ಲ. ಅಗಲೀಕರಣ ಕೇವಲ ಬಾಯಿ ಮಾತಿನಲ್ಲಿ ಆಗುವಂತಹದ್ದಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚಿತ್ರದುರ್ಗ ಶಾಸಕರ ಟೂರ್ ಪ್ರೋಗ್ರಾಮ್ ಸುಲಭವಾಗಿ ಜನರ ಕೈಗೆ ಸಿಗುತ್ತಿಲ್ಲ. ಅವರ ಲಭ್ಯತೆ ಕೂಡಾ ವಿರಳವಾಗಿದೆ. ಸಚಿವರು, ಶಾಸಕರ(ಇಬ್ಬರ ನಿವಾಸಗಳು ಚಳ್ಳಕೆರೆಯಲ್ಲಿವೆ) ಭೇಟಿಗೆ ನಿತ್ಯ ಮುಂಜಾನೆ ಜನತೆ ಚಳ್ಳಕೆರೆ ಬಸ್ ಏರುತ್ತಿದ್ದಾರೆ. ಪ್ರಭುತ್ವದ ಪರಿಸ್ಥಿತಿ ಹೀಗೆ ಇಟ್ಟುಕೊಂಡು ಅಗಲೀಕರಣ ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿವೆ.
ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ವರ್ತಕರ ಸಭೆಗಳು ನಡೆದಿಲ್ಲ. ಸಚಿವರು ಶಾಸಕರು ವರ್ತಕರ ಸಭೆ ಕರೆದು ರಸ್ತೆ ಅಗಲೀಕರಣದ ಅನಿವಾರ್ಯತೆ ಮನದಟ್ಟು ಮಾಡಿಕೊಡಬೇಕು. ಇದಕ್ಕಾಗಿ ದಿನಾಂಕ ನಿಗಧಿ ಮಾಡಿ ಅವರುಗಳ ಅಹವಾಲು ಕೇಳಬೇಕು. ಐತಿಹಾಸಿಕ ಚಿತ್ರದುರ್ಗಕ್ಕೆ ಮತ್ತಷ್ಟು ಮಹತ್ವ ಬರಬೇಕಾದರೆ ವಿಶಾಲವಾದ ರಸ್ತೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಆ ನಿಟ್ಟಿನ ಪ್ರಯತ್ನಗಳು ನಡೆದೇ ಇಲ್ಲ. ನಗರಸಭೆ ಸಿಬ್ಬಂದಿ ಗೋಡೆಗಳ ಮೇಲೆ ಕೆಂಪು ಬಣ್ಣದಲ್ಲಿ ಮಾರ್ಕ್ ಹಾಕುತ್ತಾ ಹೋಗಿದ್ದಾರೆ. ವರ್ತಕರ ಮನವೊಲಿಕೆ ಬದಲು ಅವರಲ್ಲಿ ಭೀತಿ ಮೂಡಿಸುವ ಕೆಲಸವಾಗುತ್ತಿದೆ.ರಸ್ತೆ ಅಗಲೀಕರಣ ಉದ್ದೇಶ ಚೆನ್ನಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ರಸ್ತೆಗಳು ವಿಶಾಲವಾಗಿದ್ದು ಚಿತ್ರದುರ್ಗ ಮಾತ್ರ ಕಿರಿದಾದ ರಸ್ತೆಗಳ ಹೊಂದಿದೆ. ಪ್ರವಾಸಿಗರಂತೂ ಇಲ್ಲಿನ ರಸ್ತೆಗಳ ಬಗ್ಗೆ ಮೂಗು ಮುರಿಯುತ್ತಾರೆ. ನಾವು ಕಟ್ಟಡಗಳ ತೆರವುಗೊಳಿಸಲು ಸನ್ನದ್ದರಾಗಿದ್ದೇವೆ. ಆದರೆ ಜನಪ್ರತಿನಿಧಿಗಳು ನಮ್ಮ ಬೆನ್ನಿಗೆ ನಿಂತು ಕಾರ್ಯಾಚರಣೆಗೆ ಪ್ರೇರಣೆಯಾಗಬೇಕು ಎನ್ನುತ್ತಿದೆ ಅಧಿಕಾರಿ ವರ್ಗ.
ರಸ್ತೆ ಅಗಲೀಕರಣದ ನಿರ್ಣಯವಾಗಿದೆ. ಆ ನಿಟ್ಟಿನ ಪ್ರಯತ್ನಗಳಿಗೆ ವೇಗ ಕೊಡಬೇಕು. ನಗರಸಭೆ ಮೊದಲೇ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಕಟ್ಟಡಗಳ ತೆರವಿಗೆ ಬಾಹ್ಯ ಬೆಂಬಲ ಬೇಕು. ಕಾರ್ಯಾಚರಣೆ ತಂಡಗಳು ಹಗಲಿರುಳು ಕೆಲಸ ಮಾಡಬೇಕು. ಇಲ್ಲವಾದಲ್ಲಿ ಅಗಲೀಕರಣದ ಅಡ್ಡ ಪರಿಣಾಮಗಳಿಗೆ ಅಧಿಕಾರಿಗಳ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂಬ ಅಸಹಾಯಕ ಮಾತುಗಳು ಅಧಿಕಾರಿ ವಲಯದಲ್ಲಿದೆ.ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳ ಕಟ್ಟಡ ಮಾಲೀಕರಿಂದ ಅವರ ಆಸ್ತಿ ಬಗೆಗಿನ ದಾಖಲೆಗಳ ತರಿಸಿ, ಪರಿಶೀಲಿಸಿದ ನಂತರವೇ ಕಟ್ಟಡಗಳ ಮೇಲೆ ಮಾರ್ಕ್ ಮಾಡಬೇಕಾಗಿತ್ತು. ಆದರೆ ಎಲ್ಲದಕ್ಕಿಂತ ಮೊದಲೇ ಈ ಕೆಲಸ ಕೈಗೆತ್ತಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳ ಮೂಡಿಸಿದೆ.