ಮಾರುತಿ ಶಿಡ್ಲಾಪೂರ
ಕನ್ನಡಪ್ರಭ ವಾರ್ತೆ ಹಾನಗಲ್ಲಹಾನಗಲ್ನ ನಾಲ್ಕರ ಕ್ರಾಸನಿಂದ ಶಿರಸಿ ವರೆಗೆ ಕಳೆದ ಐದು ವರ್ಷಗಳಿಂದ ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ರಾಡಿಯ ಎರಚಿಕೊಂಡು ಪ್ರಯಾಣ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದ್ದು, ಪ್ರಯಾಣಿಕರು ನಿತ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಇದು ಮುಗಿಯುವುದು ಯಾವಾಗ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಲೇ ಇಲ್ಲ.
೨೦೨೧ರಲ್ಲಿ ₹೧೭೪ ಕೋಟಿ ವೆಚ್ಚದಲ್ಲಿ ನಾಲ್ಕರ ಕ್ರಾಸ್‌ನಿಂದ ಶಿರಸಿವರೆಗೆ ೪೪ ಕಿಮೀ ರಸ್ತೆಯನ್ನು ೧೦ ಮೀಟರ್ ಅಗಲ ಮಾಡುವ ಕಾಮಗಾರಿ ಆರಂಭವಾಗಿದ್ದು, ಇಲ್ಲಿ ಸಂಚರಿಸುವವರಿಗೆ ಸಮಾಧಾನ ಸಂಗತಿಯಾಗಿತ್ತು. ಕಾಮಗಾರಿ ಆರಂಭವಾಗಿ ರಸ್ತೆಯ ಅಲ್ಲಲ್ಲಿ ಅಗೆದು ಮತ್ತೆ ಕೆಲಸ ನಿಂತುಹೋಯಿತು. ಈ ರಸ್ತೆಯಲ್ಲಿ ಸಂಚಾರವೇ ದುಸ್ತರವಾಯಿತು. ಮೊದಲಿನ ರಸ್ತೆಯೇ ಅಡ್ಡಿಲ್ಲ ಎಂದು ಜನ ಮಾತನಾಡಿದರು. ೪೪ ಕಿಮೀ ರಸ್ತೆಯಲ್ಲಿ ೬-೮ ಕಿಮೀಗೆ ಕಂಡಕಂಡಲ್ಲಿ ರಸ್ತೆ ಕೆದರಿ, ಅಲ್ಲಿಯೂ ಕಾಮಗಾರಿ ಮಾಡದೇ ಬಿಟ್ಟಿದ್ದು, ತಗ್ಗು ದಿನ್ನೆಗಳಲ್ಲಿಯೇ ವಾಹನಗಳು ಬಿದ್ದು ಎದ್ದು ಓಡಾಡುವುದು, ಅಪಘಾತವಾಗುದು ನಡೆದೇ ಇವೆ. ಸಮ್ಮಸಗಿ ಆಚೆ ಈಚೆಯ ಎರಡೂ ಬದಿಗೆ ವಾಹನ ಸಂಚಾರವೇ ದುಸ್ತರ ಎಂಬ ಸ್ಥಿತಿ ಇದೆ.ಧೂಳು ರಾಡಿ: ಈ ರಸ್ತೆಯಲ್ಲಿ ಸಂಚರಿಸುವವರು ಬೇಸಿಗೆಯಲ್ಲಿ ಧೂಳು ತಿನ್ನಬೇಕು, ಮಳೆಗಾಲದಲ್ಲಿ ರಾಡಿ ಎರಚಿಸಿಕೊಳ್ಳಬೇಕು. ವಾಹನಗಳಂತು ಇಲ್ಲಿ ಬಣ್ಣ ಬದಲಾಯಿಸಿಯೇ ಮುನ್ನಡೆಯಬೇಕು. ಹಳ್ಳಿಗಳಲ್ಲಿ ಹಾದು ಹೋಗುವ ರಸ್ತೆಗೆ ಅಲ್ಲಲ್ಲಿ ರಸ್ತೆ ಎತ್ತರಗೊಳಿಸಲು ದೊಡ್ಡ ಕಾಲುವೆ ನಿರ್ಮಾಣ ಅರ್ಧಕ್ಕೆ ನಿಂತಿವೆ. ಹತ್ತಾರು ಹಳ್ಳಿಗಳ ಜನರ ಸಂಚಾರಕ್ಕೆ ಇದು ಅಡ್ಡಿಯಾಗಿದ್ದು ಮಾತ್ರವಲ್ಲ. ಇಲ್ಲಿನ ಧೂಳು ತಿಂದು ಸಾಕಾಗಿದೆ ಎಂದು ಬೇಸರದಿಂದ ಹೇಳುತ್ತಾರೆ. ಯಾರು ಇದರ ಗುತ್ತಿಗೆದಾರರೋ, ಯಾರು ಅಧಿಕಾರಿಗಳೋ ಒಂದೂ ತಿಳಿಯುತ್ತಿಲ್ಲ ಎಂದು ಇಲ್ಲಿನ ರೈತರು ಸಾರ್ವಜನಿಕರು ಗೋಳು ಹೇಳಿಕೊಳ್ಳುತ್ತಾರೆ.
೨೦೨೪ಕ್ಕೆ ಮುಗಿಯಬೇಕಿತ್ತು: ಈ ಕಾಮಗಾರಿ ೨೦೨೪ಕ್ಕೆ ಮುಗಿದು ಸುಗಮ ಸಂಚಾರಕ್ಕೆ ಸಮರ್ಪಣೆಯಾಗಬೇಕಾಗಿತ್ತು. ಇನ್ನೂ ಒಂದೆರಡು ವರ್ಷ ಇದು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಎರಡು ವರ್ಷದಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡರೂ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಇದರತ್ತ ಕಣ್ತೆರೆದು ನೋಡಲೇ ಇಲ್ಲ. ೨೦೨೭ರ ಅಂತ್ಯಕ್ಕೆ ಕಾಮಗಾರಿ ಅಂತ್ಯವಾಗಲಿದೆ ಎಂದು ಇಲ್ಲಿ ಕೆಲಸ ಮಾಡುವ ಕೆಲಸಗಾರರು ಹೇಳುವುದನ್ನೇ ಕೇಳಬೇಕಾದ ಅನಿವಾರ್ಯತೆ ಇದೆ.
ಮರ ಕಟಾವು: ಈ ರಸ್ತೆಯ ಅಗಲದ ೧೦ ಮೀಟರ್ ಅಂತರದಲ್ಲಿ ಬರುವ ರಸ್ತೆ ಬದಿಯ ಮರಗಳ ಕಟಾವು ಮಾಡಲು ಅರಣ್ಯ ಇಲಾಖೆ ಪರವಾನಗಿ ಇರಲಿಲ್ಲ ಎನ್ನುತ್ತಾರೆ ಎಂಜಿನಿಯರ್. ಪರವಾನಗಿ ಇಲ್ಲದೆ ಹೇಗೆ ರಸ್ತೆ ಅಗೆದರು. ಅಲ್ಲಲ್ಲಿ ರಸ್ತೆ ಅಗೆದು ಕೈಬಿಟ್ಟಿದ್ದೇಕೆ ಎಂಬ ಪ್ರಶ್ನಗಳಿಗೆ ಇಲ್ಲಿ ಉತ್ತರವಿಲ್ಲ. ಈಗಲೂ ಬರುವ ಮಳೆಗಾಲದಲ್ಲಿ ಅದೇ ಇನ್ನಷ್ಟು ತಗ್ಗು ಗುಂಡಿಗಳಲ್ಲೇ ವಾಹನಗಳ ಸಂಚಾರ ಎಂಬ ಭೀತಿ ಇಲ್ಲಿನ ಜನರಲ್ಲಿದೆ.
ಶಿರಸಿ- ಕಾರವಾರದಿಂದ ಬೆಂಗಳೂರಿಗೆ ಹೋಗುವ ಬಹುತೇಕ ಬಸ್ಸುಗಳು ಈಗ ಸಂಚಾರದ ದಾರಿ ಬದಲಿಸಿವೆ. ಇದು ಸಾಗರಮಾಲಾ ರಸ್ತೆಯಾಗಿದ್ದು ಕರಾವಳಿ ಪ್ರದೇಶಕ್ಕೆ ಸುಗಮ ಸಂಚಾರ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ತಗ್ಗು ದಿನ್ನೆಗಳಿಂದ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ.ಈ ರಸ್ತೆಯ ಅವ್ಯವಸ್ಥೆ ಪ್ರತಿಭಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವರ್ಷಗಳೇ ಕಳೆದಿವೆ. ಯಾರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ವಾಹನ ಪ್ರಯಾಣಿಕರು ಹಿಡಿ ಶಾಪ ಹಾಕುತ್ತ ಇಲ್ಲಿ ಅನಿವಾರ್ಯವಾಗಿ ಸಂಚರಿಸುತ್ತಿದ್ದಾರೆ. ಪರಿಹಾರ ಕೇಳಿ ಕೇಳಿ ಸಾಕಾಗಿದೆ. ಈಗ ಬೀದಿಗಳಿದು ಹೋರಾಡುವ ಅನಿವಾರ್ಯತೆಗೆ ಸಜ್ಜಾಗುತ್ತಿದ್ದೇವೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಹೇಳಿದರು.
ತಾಂತ್ರಿಕ ಕಾರಣಕ್ಕೆ ಈ ರಸ್ತೆ ಕಾಮಗಾರಿ ವಿಳಂವಾಗಿದೆ. ಈಗ ಶೀಘ್ರದಲ್ಲಿ ಆರಂಭಿಸುತ್ತೇವೆ. ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂಬ ಅರಿವೂ ಇದೆ. ೨೦೨೭ರಲ್ಲಿ ಈ ಕಾಮಗಾರಿ ಮುಗಿಯುತ್ತದೆ. ಮಳೆಗಾಲದಲ್ಲಿ ಸುಗಮ ಸಂಚಾರಕ್ಕೆ ಅಲ್ಲಲ್ಲಿ ಗುಂಡಿಗಳನ್ನು ತುಂಬುವ ಪ್ರಯತ್ನ ಮಾಡುತ್ತೇವೆ. ಆದಷ್ಟು ಬೇಗ ಮುಗಿಸಬೇಕೆಂಬ ಯೋಜನೆ ಇದೆ ಎಂದು ರಸ್ತೆ ನಿರ್ವಹಣಾ ಎಂಜಿನಿಯರ್ ರಾಘವೇಂದ್ರ ಹೇಳಿದರು.