ಸಾರಾಂಶ
ಹಿರಿಯೂರು: ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ನಮ್ಮ ತಾಯಿಯವರಾದ ವಿಶಾಲಾಕ್ಷಮ್ಮನವರ ರಿಸನಂ 58/7 ರ ಜಮೀನಿನ ಪರಿಹಾರ ನೀಡದೇ ರಾಷ್ಟ್ರೀಯ ಹೆದ್ದಾರಿ 150 ಎ ಕಾಮಗಾರಿ ಮಾಡಲಾಗುತ್ತಿದೆ ಎಂದು ವಿಶಾಲಾಕ್ಷಮ್ಮನವರ ಮಗ ವೀರಣ್ಣ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಮ್ಮ ಜಮೀನು ಮತ್ತು ಮನೆಯ ಜಾಗದ ಸಂಬಂಧ ಪರಿಹಾರದ ವಿಚಾರದಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಮನೆಯ ಖಾತೆ ಸಂಖ್ಯೆ 2ಕ್ಕೆ ಪರಿಹಾರ ನೀಡಿದ್ದಾರೆ. ಆದರೆ ಖಾತೆ ಸಂಖ್ಯೆ 3ರಲ್ಲಿನ ಸುಮಾರು 20*30 ರಷ್ಟು ಜಾಗವನ್ನು ಪರಿಹಾರದ ಪಟ್ಟಿಯಲ್ಲೇ ಸೇರಿಸಿಲ್ಲ. ಇಷ್ಟು ದಿನ ಪರಿಹಾರ ನೀಡಿದ್ದೇವೆ ಎಂದು ಹೇಳುತ್ತಿದ್ದವರು ಇದೀಗ ಪರಿಹಾರ ವಿತರಣೆಯಲ್ಲಿ ಲೋಪವಾಗಿದೆ ಎಂಬ ಮಾತನ್ನಾಡುತ್ತಿದ್ದು, ಪರಿಹಾರ ಕೇಳಲು ಹೋದರೆ ಪೊಲೀಸರ ಮೂಲಕ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ಸುಮಾರು 2 ಕೋಟಿ 36 ಲಕ್ಷ ದಷ್ಟು ಪರಿಹಾರವನ್ನು ಜಮೀನಿಗೆ ಸಂಬಂಧವೆ ಇಲ್ಲದವರಿಗೆ ವಿತರಿಸಿರುವ ಮಾಹಿತಿ ಇದೆ. ನಮ್ಮ ತಾಯಿ ವಿಶಾಲಾಕ್ಷಿಯವರ ಜಮೀನಿಗೆ ಯಾವಾಗ ಅವಾರ್ಡ್ ಮಾಡಲಾಯಿತು. ಯಾವಾಗ ಭೂ ಸ್ವಾಧೀನ ಮಾಡಿಕೊಳ್ಳಲಾಯಿತು ಮತ್ತು ಎಷ್ಟು ಪರಿಹಾರ ಯಾರಿಗೆ ನೀಡಿದ್ದಾರೆ ಎಂಬ ಮಾಹಿತಿಯನ್ನು ಸಂಬಂಧಪಟ್ಟವರು ಹೊರ ಹಾಕಬೇಕು ಎಂದರು.
ಇದೀಗ ಸ್ಥಳ ಪರಿಶೀಲನೆಯ ಮಾತನಾಡುವ ಅಧಿಕಾರಿಗಳು ಜಮೀನಿನ ಗಿಡ, ಮರಗಳನ್ನೆಲ್ಲಾ ಕಿತ್ತು ಕೆಲಸ ಶುರು ಮಾಡಿದ್ದಾರೆ. ಈಗ ಪರಿಶೀಲನೆ ಮಾಡುತ್ತೇವೆ ಎಂಬುದು ಹಾಸ್ಯಾಸ್ಪದವಾಗಿದೆ. ನಾನು ತುಮಕೂರು ಆಸ್ಪತ್ರೆ ಮತ್ತು ನಮ್ಮ ತಾಯಿ ಮತ್ತೊಂದು ಆಸ್ಪತ್ರೆಯಲ್ಲಿ ಏಕ ಕಾಲಕ್ಕೆ ರೋಗಪೀಡಿತರಾಗಿ ದಾಖಲಾದ ಸಂದರ್ಭವನ್ನು ಬಳಸಿಕೊಂಡ ರಸ್ತೆ ವಿಸ್ತರಣೆಯವರು ಕಾಮಗಾರಿ ಶುರು ಮಾಡಿದ್ದಾರೆ. ಇದೀಗ ನಮ್ಮ ಮನೆ ಜಾಗ ಮತ್ತು ಜಮೀನಿಗೆ ಪರಿಹಾರ ಕೊಡಿ ಎಂದು ಕೇಳಲು ಹೋದರೆ ಪೊಲೀಸರಿಂದ ಹಲ್ಲೆ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು.ರಸ್ತೆ ಕಾಮಗಾರಿ ಮಾಡುವವರು ಕಂಪನಿಯವರಾ ಅಥವಾ ಪೊಲೀಸರ ಎಂಬ ಗುಮಾನಿ ಬರುವಷ್ಟರ ಮಟ್ಟಿಗೆ ಪೊಲೀಸರು ಕಂಪನಿ ಪರ ವರ್ತಿಸುತ್ತಾರೆ. ಕೃಷಿ ಭೂಮಿಗೆ ಸಂಬಂಧಪಟ್ಟ ಪರಿಹಾರ ಪಡೆಯುವ ವಿಷಯದಲ್ಲಿ ಪೊಲೀಸರೇಕೆ ಮಧ್ಯ ಪ್ರವೇಶಿಸುತ್ತಾರೆ ಎಂಬುದನ್ನು ಅವರೇ ಹೇಳಬೇಕು. ರಸ್ತೆ ಕಾಮಗಾರಿ ನಡೆಯಲು ಬಂದೋಬಸ್ತ್ ನೀಡಿ ಎಂಬ ಆದೇಶವಿದ್ದರೂ, ನಮ್ಮ ಜಮೀನಿನ ಪರಿಹಾರ ಕೇಳುವ ನಮ್ಮ ಹಕ್ಕನ್ನು ಕಂಪನಿಯವರಿಗಿಂತ ಮುಂಚೆ ಪೊಲೀಸರೆ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಮುಖಂಡ ಕಂದಿಕೆರೆ ಜಗದೀಶ್ ಮಾತನಾಡಿ, ಇದು ಬರೀ ವಿಶಾಲಾಕ್ಷಮ್ಮನವರಿಗೆ ಆದ ಅನ್ಯಾಯವಲ್ಲ. ಖಾತೆ ಸಂಖ್ಯೆ 36 ರ ಅನ್ನಪೂರ್ಣಮ್ಮ ಎನ್ನುವವರಿಗೂ ಪರಿಹಾರದಲ್ಲಿ ವಂಚಿಸಲಾಗಿದೆ. ಇದೇ ರೀತಿಯ ಹತ್ತಕ್ಕೂ ಹೆಚ್ಚು ಪ್ರಕರಣಗಳಿವೆ. ಪರಿಹಾರ ಕೇಳಿದರೆ ತಾಂತ್ರಿಕ ತಜ್ಞರಿಂದ ಸ್ಥಳ ಪರಿಶೀಲನೆ ಮಾಡುವ ಉತ್ತರ ಕೊಡುತ್ತಾರೆ. ಹಳೆಯ ಮನೆ, ಜಮೀನಿನ ಗಿಡ ಮರಗಳನ್ನೆಲ್ಲಾ ಕಿತ್ತು ಹಾಕಿ ಕಾಮಗಾರಿ ಮುಗಿದ ಮೇಲೆ ಪರಿಹಾರಕ್ಕೆ ಸ್ಥಳ ಪರಿಶೀಲನೆ ಮಾಡುವುದು ಯಾವ ಮಾದರಿಯ ಕಾರ್ಯ ವೈಖರಿ ಎಂದು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಅನ್ನಪೂರ್ಣಮ್ಮನವರ ಮಗ ರಾಮಕೃಷ್ಣ ಇದ್ದರು.