ಕನ್ನಡಪ್ರಭ ವಾರ್ತೆ ಹೊನ್ನಾವರ
ಇಲ್ಲಿನ ರಾ.ಹೆ.69ರಲ್ಲಿ ಮಾಡಿರುವ ಅರೆಬರೆ ರಸ್ತೆ ಕಾಮಗಾರಿಯಿಂದ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯ ಅರ್ಧದಲ್ಲಿ ಡಾಂಬರ್ ಹಾಕಿ ಇನ್ನರ್ಧ ರಸ್ತೆ ಹಾಗೆ ಬಿಟ್ಟಿರುವುದರಿಂದ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.ಹೊನ್ನಾವರ-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ನಿತ್ಯ ಈ ರಸ್ತಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತದೆ. ಕಳೆದ ಒಂದೂವರೆ ವರ್ಷದ ಈಚೆಗೆ ಹೊನ್ನಾವರದಿಂದ ಉಪ್ಪೋಣಿ ತನಕ ಮರು ಡಾಂಬರಿಕರಣಕ್ಕೆ ಅನುದಾನ ಮಂಜೂರಿ ಆಗಿತ್ತು. ರಸ್ತೆಯ ಕೆಲಸ ಪ್ರಾರಂಭದ ದಿನದಿಂದ ಇಲ್ಲಿಯ ತನಕ ಕೆಲಸ ಕುಂಟುತ್ತ ಸಾಗಿದೆ. ರಸ್ತೆ ಸ್ವಚ್ಛಗೊಳಿಸುವುದು, ಆಗಾಗ ಅಲ್ಲಲ್ಲಿ ಡಾಂಬರ್ ಹಾಕುವುದು.
ರಸ್ತೆ ಅಂಚಿಗೆ ಮಣ್ಣು ಹಾಕುವುದು ನಡೆಯುತ್ತಲೆ ಇದೆ ಅನ್ನುವುದು ಬಿಟ್ಟರೆ, ರಸ್ತೆ ಕೆಲಸ ಮಾತ್ರ ಪೂರ್ಣಗೊಂಡಿಲ್ಲ.ಬೇಸಿಗೆಯಲ್ಲಿ ಕೆಲಸಕ್ಕೆ ವಿಳಂಬ ಮಾಡಿರುವುದರಿಂದ ಈಗ ಅರೆಬರೆ ರಸ್ತೆ ಆಗುವಂತಾಗಿದೆ. ಇಲ್ಲಿ ಹೊಸದಾಗಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರಾ, ಪ್ಯಾಚ್ ವರ್ಕ್ ಮಾಡುತ್ತಿದ್ದಾರಾ ಎನ್ನುವ ಗೊಂದಲ ಮೂಡುವಂತಾಗಿದೆ. ಇನ್ನೂ ಡಾಂಬರ್ ಕೆಲಸ ಮುಗಿದಿಲ್ಲ. ಈಗ ಮಳೆಗಾಲ ಪ್ರಾರಂಭಗೊಂಡಿದೆ. ಡಾಂಬರ್ ಹಾಕುವಂತೂ ಇಲ್ಲ. ಮಳೆಗಾಲಕ್ಕೆ ಅರ್ಧ ಡಾಂಬರ್ ರಸ್ತೆಯಲ್ಲಿಯೇ ಸಂಚಾರ ಮಾಡಬೇಕಾಗಿದೆ. ರಸ್ತೆಯ ಒಂದು ಮಗ್ಗಲಿಗೆ ಉದ್ದಕ್ಕೆ ಡಾಂಬರ್ ಹಾಕಲಾಗಿದೆ. ಇನ್ನೊಂದು ಕಡೆ ಹಾಗೆ ಬಿಡಲಾಗಿದೆ. ಹಾಗೆ ಬಿಟ್ಟಿರುವ ರಸ್ತೆ ಅಲ್ಲಲ್ಲಿ ಹಾಳಾಗಿದೆ. ಡಾಂಬರ್ ಹಾಕಿದಷ್ಟು ಎತ್ತರ ಆಗಿರುವುದರಿಂದ ಬೈಕ್ ಸವಾರರಿಗೆ ಸಂಚಾರ ಕಷ್ಟವಾಗಿದೆ.
ಮಳೆಗಾಲ ಆರಂಭವಾಗಿರುವುದರಿಂದ ಬೈಕ್ ಮೇಲೆ ಓಡಾಡುವವರಿಗೆ ಈ ಅರ್ಧ ರಸ್ತೆಗೆ ಡಾಂಬರು ಹಾಕಿ ಇನ್ನೊಂದು ಭಾಗ ಬಿಟ್ಟಿರುವುದರಿಂದ ಸ್ಕಿಡ್ ಆಗಿ ಬೀಳುವ ಸಾಧ್ಯತೆಗಳಿರುತ್ತದೆ. ಅಲ್ಲದೆ ರಸ್ತೆಯ ಇನ್ನೊಂದು ಭಾಗಕ್ಕೆ ಹೋಗಬೇಕಾದರೆ ಕೆಳಗಿಳಿಸಿ ಮೇಲೆ ಹತ್ತಿಸಬೇಕಾದ ಪರಿಸ್ಥಿತಿ ಇದೆ. ಇದು ವಾಹನ ಸವಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಸಂಬಂಧ ಅಧಿಕಾರಿಗಳಲ್ಲಿ ಕೇಳಿದಾಗ ಡಾಂಬರ್ ಹಾಕುತ್ತೇವೆ. ಕೆಲಸ ನಡೆಯುತ್ತಿದೆ ಎನ್ನುತ್ತಾರೆ. ಇತ್ತೀಚಿಗೆ ಸಚಿವರ ಕೆಡಿಪಿ ಸಭೆಯಲ್ಲಿಯು ಆದಷ್ಟು ಬೇಗ ಕೆಲಸ ಮುಗಿಸುತ್ತೇವೆ. ಪೂರ್ತಿ ರಸ್ತೆಗೂ ಡಾಂಬರ್ ಹಾಕುತ್ತೇವೆ ಎಂದಿದ್ದರು. ಆದರೆ ಮಳೆಗಾಲದಲ್ಲಿ ರಸ್ತೆಯ ಡಾಂಬರಂತೂ ಹಾಕಲು ಸಾಧ್ಯವಿಲ್ಲ. ಆದರೆ ಅರ್ಧಂಬರ್ಧ ಕೆಲಸವನ್ನು ಮಾಡಿರುವುದರಿಂದ ಬೈಕ್ ಸವಾರರು ಹಿಡಿಶಾಪ ಹಾಕುತ್ತಾ ಸಂಚರಿಸಬೇಕಾಗಿದೆ.ಪ್ರತಿದಿನ ನಾವು ಈ ರಸ್ತೆಯಲ್ಲಿ ಉದ್ಯೋಗದ ನಿಮಿತ್ತ ಸಂಚರಿಸಬೇಕು. ಇಲ್ಲಿ ಯಾವ ರೀತಿ ಕೆಲಸ ನಡೆಯುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಅರ್ಧ ಭಾಗಕ್ಕೆ ಡಾಂಬರು ಹಾಕಿ ಇನ್ನರ್ಧ ಬಿಟ್ಟಿದ್ದಾರೆ. ಅಲ್ಲದೆ ಹೊನ್ನಾವರ ಭಾಗದಿಂದ ಈಚೆಗೆ ರಸ್ತೆಯ ಮಧ್ಯ ಭಾಗಕ್ಕೆ ಲೈನ್ ಮಾರ್ಕಿಂಗ್ ಮಾಡುತ್ತಾ ಬರುತ್ತಿದ್ದಾರೆ. ರಸ್ತೆಯನ್ನು ಸಂಪೂರ್ಣವಾಗಿ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬೈಕ್ ಸವಾರ ವಿನಾಯಕ ಉಪ್ಪೋಣಿ ಆಗ್ರಹಿಸಿದ್ದಾರೆ.